ಸುದ್ದಿಒನ್, ಚಳ್ಳಕೆರೆ, ನವೆಂಬರ್. 17 : ತಾಲೂಕಿನ ನಕ್ಲಾರಹಟ್ಟಿ ಗ್ರಾಮದಲ್ಲಿ ಅಕ್ರಮ ಸಂಬಂಧದ ವಿಚಾರವಾಗಿ ಪತ್ನಿಯೇ ತನ್ನ ಪ್ರಿಯಕರ ಹಾಗೂ ತಾಯಿಯೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಭೀಕರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮೃತ ಕಾಟಯ್ಯನ ಪತ್ನಿ ಜಯಮ್ಮ ತನ್ನ ಸಂಬಂಧಿ ಕೋಟಿಯೊಂದಿಗೆ ಹೊಂದಿದ್ದ ಅಕ್ರಮ ಸಂಬಂಧವನ್ನು ಕಾಟಯ್ಯ ಕಣ್ಣಾರೆ ಕಂಡಿದ್ದನು. ಇದೇ ವಿಚಾರವಾಗಿ ಕಳೆದ ಹದಿನೈದು ದಿನಗಳಿಂದ ಇಬ್ಬರ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂಬ ಕಾರಣಕ್ಕೆ ಕಾಟಯ್ಯನನ್ನು ಕೊಲೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು.
ದಿನಾಂಕ 10.11.2026 ರಂದು ಮನೆಯಲ್ಲಿ ಇದೇ ವಿಚಾರವಾಗಿ ಮತ್ತೆ ಜಗಳ ಶುರುವಾದಾಗ ಜಯಮ್ಮ ಮತ್ತು ಆಕೆಯ ತಾಯಿ ಪಾಪಮ್ಮ ಕಾಟಯ್ಯನಿಗೆ ಕೈ ಕಾಲುಗಳಿಂದ ಥಳಿಸಿದ್ದಾರೆ. ಅದೇ ಸಮಯದಲ್ಲಿ ಕೋಟಿಯು ಮುದ್ದೆ ಕೋಲಿನಿಂದ ಹೊಡೆದ ಪರಿಣಾಮ ಕಾಟಯ್ಯ ಸುಸ್ತಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಶವವನ್ನು ಮನೆಯಲ್ಲಿ ಇಟ್ಟುಕೊಂಡರೆ ತೊಂದರೆಯಾಗುತ್ತದೆ ಎಂದು 3 ಜನರೂ ಸೇರಿ ಅಂದು ರಾತ್ರಿಯೇ ಮೃತದೇಹವನ್ನು ನಕ್ಲಾರಹಟ್ಟಿ ಗ್ರಾಮದ ಹತ್ತಿರವಿರುವ ಕುಟ್ಟಿರ್ಪಾಪಯ್ಯರವರ ಬೀಳು ಜಮೀನಿನ ತಗ್ಗಿನಲ್ಲಿ ಬಿಸಾಡಿದ್ದಾರೆ. ಶವದ ಗುರುತು ಸಿಗದಿರಲಿ ಎಂದು ತಲೆ ಮೇಲೆ ದಪ್ಪ ಕಲ್ಲನ್ನು ಎತ್ತಿಹಾಕಿ ಮುಖವನ್ನು ಜಜ್ಜಿ ಮುಚ್ಚಿಹಾಕಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದರು.
ಈ ಘಟನೆಯ ಕುರಿತು ಮೃತನ ಅಣ್ಣ ಪಾಪಣ್ಣ.ಪಿ ಅವರು ದಿನಾಂಕ 15.11.2026 ರಂದು ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು 103(1), 238, 351(2), 3(5) BNS-2023 ಕಾಯ್ದೆಯಡಿ ಪ್ರಕರಣ (ಮೊ.ನಂ:453/2026) ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಲ್ ಚೌಕ್ಸೆ, ಐ.ಪಿ.ಎಸ್ ಹಾಗೂ ಹೆಚ್ಚುವರಿ ಎಸ್.ಪಿ ಅವರ ಮಾರ್ಗದರ್ಶನದಲ್ಲಿ ಚಳ್ಳಕೆರೆ ಠಾಣೆಯ ಪೊಲೀಸ್ ನಿರೀಕ್ಷಕ ಕುಮಾರ್.ಕೆ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಈ ತಂಡವು ದಿನಾಂಕ 17.11.2026 ರಂದು ಮೃತನ ಹೆಂಡತಿ ಜಯಮ್ಮ, ಆಕೆಯ ತಾಯಿ ಪಾಪಮ್ಮ ಹಾಗೂ ಸಂಬಂಧಿ ಕೋಟಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.











