ಸುದ್ದಿಒನ್, ಚಿತ್ರದುರ್ಗ, ಮೇ. 24 : ‘ಸುದ್ದಿ ಒನ್ ವತಿಯಿಂದ ಹಮ್ಮಿಕೊಂಡಿರುವ “ನೀರನ್ನು ಉಳಿಸಿ, ನೆಲದ ಋಣ ತೀರಿಸಿ” ಎಂಬ ಮಹತ್ವದ ಅಭಿಯಾನಕ್ಕೆ ಪರಿಸರ ಪ್ರೇಮಿ ಸುಮಲತಾ ಅವರು ತಮ್ಮ ಪೂರ್ಣ ಬೆಂಬಲ ಪ್ರಕಟಿಸಿದ್ದಾರೆ. ತಾವು ಪ್ರಸ್ತುತ ‘ಗೋಗೋ ಇವನ್’ ಇವಿ ವೆಹಿಕಲ್ಸ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್, ‘ವರ್ಸಟೈಲ್’ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಪರಿಸರಸ್ನೇಹಿಯಾಗಿ ಹಾಗೂ ಜಾಗತಿಕ ಮಟ್ಟದಲ್ಲಿ ಪೂರಕವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ ಅವರು, ಈ ನೀರು ಉಳಿಸುವ ಅಭಿಯಾನ ಇಂದಿನ ತುರ್ತು ಅಗತ್ಯತೆಗಳಲ್ಲಿ ಒಂದಾಗಿದೆ ಎಂದು ಪ್ರತಿಪಾದಿಸಿದರು.
ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಕಠಿಣ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ನಮಗೆ ಬೇಕಾಗಿರೋ ಸಮಯದಲ್ಲಿ ಮಳೆ ಬರಲ್ಲ, ಬೇಡದೇ ಇರುವಾಗ ಮಳೆ ಬಂದು ಬೆಳೆಯಲ್ಲ ಕೊಚ್ಚಿ ಹೋಗಿ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೇವಲ ಶೇಕಡ 20ರಷ್ಟು ನೀರು ಮಾತ್ರ ಬಾಕಿ: ಸುಮಲತಾ ಅವರು ನೀರಿನ ತೀವ್ರತೆಯ ಕುರಿತು ಮಾತನಾಡುತ್ತಾ, “ಕಳೆದ 30 ವರ್ಷಗಳಿಂದ ನಾವು ಭೂಮಿಯಲ್ಲಿರೋ ಶೇಕಡ 80% ನೀರನ್ನ ಹೊರತೆಗೆದು ಈಗಾಗಲೇ ಬಳಸಿಬಿಟ್ಟಿದ್ದೀವಿ. ಇನ್ನು ಬರೀ 20% ಮಾತ್ರ ನೀರಿದೆ, ಅದೂ ಹಳ್ಳಿಗಳಲ್ಲಿ ಮತ್ತೆ ಪರ್ವತ ಪ್ರದೇಶಗಳಲ್ಲಿ ಮಾತ್ರ ಉಳ್ಕೊಂಡಿದೆ. ಅದರಿಂದಾನೇ ಎಷ್ಟೋ ಬೋರ್ಸ್ ಎಲ್ಲಾ ಫೇಲ್ಯೂರ್ ಆಗ್ತಾ ಇದೆ. ಮತ್ತೆ ಇತ್ತೀಚೆಗೆ ನೀವು ಗಮನಿಸಿದ್ದೀರಾ ಅಡಿಕೆ ತೋಟಗಳು ಮತ್ತೆ ತೆಂಗಿನ ತೋಟಗಳು ಗಿಡ ಸಮೇತ ಬಿದ್ದು ಹಾಳಾಗ್ತಾ ಇದ್ದಾವೆ. ಇಷ್ಟೊಂದೆಲ್ಲಾ ಹಾಳಾಗಲಿಕ್ಕೆ ಮನುಷ್ಯನೇ ಕೂಡ ಕಾರಣ ಅಲ್ವಾ?” ಎಂದು ಪ್ರಶ್ನಿಸಿದರು.
ಅನಾದಿ ಕಾಲದಿಂದಲೂ ಮನುಷ್ಯ ತನ್ನ ಅಗತ್ಯತೆಗಳಿಗೋಸ್ಕರ ನೀರನ್ನೇ ಆಶ್ರಯಿಸಿದ್ದಾನೆ. ಸಿಂಧೂ ಬಯಲಿನ ನಾಗರಿಕತೆ ಸೇರಿದಂತೆ ಪ್ರಪಂಚದ ಯಾವುದೇ ನಾಗರಿಕತೆ ಹಾಗೂ ಇತಿಹಾಸವನ್ನು ನೋಡಿದರೂ ನೀರನ್ನ ಬಿಟ್ಟು ಮನುಷ್ಯ ಬದುಕಲಾರ. ಭಾರತೀಯ ಸಂಪ್ರದಾಯದಲ್ಲಿ ನೀರನ್ನು ಪಂಚಭೂತಗಳಲ್ಲಿ ಒಂದಾಗಿ ಕಂಡು ಮಹತ್ವದ ಸ್ಥಾನ ನೀಡಲಾಗಿದೆ. ನೀರನ್ನ ಪವಿತ್ರ ಗಂಗೆ, ತುಂಗೆ, ಭದ್ರೆ, ಕೃಷ್ಣೆ ಎಂದು ಪೂಜನೀಯ ಭಾವನೆಯಿಂದ ನೋಡುತ್ತಾ ಬಂದಿದ್ದರೂ, ಇತ್ತೀಚಿನ ತಂತ್ರಜ್ಞಾನ ಮತ್ತು ವಿಜ್ಞಾನದ ಬೆಳವಣಿಗೆಯಿಂದಾಗಿ ಮನುಷ್ಯ ಮೋಜು-ಮಸ್ತಿ ಹಾಗೂ ಅವೈಜ್ಞಾನಿಕ ಬೆಳೆ ಪದ್ಧತಿಗಳಿಂದ ನೀರನ್ನು ಪೋಲು ಮಾಡುತ್ತಿದ್ದಾನೆ. ಇದೇ ರೀತಿ ಪೋಲು ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಯುದ್ಧ ನಡೆಯೋದು ನೀರಿಗಾಗಿ. ಆ ನೀರಿಗೋಸ್ಕರ ಯುದ್ಧಗಳು ನಡೆದು ಲಕ್ಷಾಂತರ, ಕೋಟ್ಯಾಂತರ ಜನ ಹಸುನೀಗಿದ್ರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಅವರು ಎಚ್ಚರಿಸಿದರು.
ನೀರನ್ನು ನಾವು ಸೃಷ್ಟಿ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಇರುವ ನೀರನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಪರಿಸರ ಪ್ರೇಮಿ ಸುಮಲತಾ ಅವರು ಸ್ಪಷ್ಟಪಡಿಸಿದ್ದಾರೆ. ನೀರನ್ನು ಉಳಿಸಲು ಪ್ರತಿಯೊಬ್ಬರ ಮನೆಗಳಲ್ಲೂ ಮಳೆ ನೀರಿನ ಕೊಯ್ಲು ಮಾಡಬೇಕು. ಮನೆ ತಾರಸಿ ಮೇಲೆ ಬಿದ್ದಿರೋ ನೀರನ್ನ ಇಂಗಿಸುವುದಕ್ಕೆ ಸಂಪ್ನಲ್ಲಿ ಶೇಖರಣೆ ಮಾಡಬೇಕು. ಬಳಸಿರೋ ನೀರನ್ನ ಸಂಸ್ಕರಿಸಿ ಮತ್ತೆ ಪುನರ್ಬಳಕೆ ಮಾಡಬೇಕು ಅಥವಾ ಅದನ್ನ ಗಿಡ-ಮರಗಳಿಗೆ ಹೋಗೋ ತರ ವ್ಯವಸ್ಥೆ ಮಾಡಬೇಕು. ಸ್ನಾನಕ್ಕಾಗಲಿ, ಶೌಚಾಲಯಕ್ಕಾಗಲಿ ನೀರನ್ನು ಫ್ರೀಯಾಗಿ ಹರಿಬಿಡದೆ ಬಕೆಟ್ನಿಂದ ಬಳಸಬೇಕು ಎಂದು ಅವರು ದೈನಂದಿನ ಪರಿಹಾರಗಳನ್ನು ಸೂಚಿಸಿದರು.
ದೈನಂದಿನ ತಪ್ಪುಗಳ ವಿರುದ್ಧ ಆಕ್ರೋಶ: ನಾವು ದಿನ ಬೆಳಗ್ಗೆ ಎದ್ದರೆ ಬಾಗಿಲಿಗೆ ನೀರು ಹಾಕಲು ಮೊದಲೆಲ್ಲಾ ಬಕೆಟ್ ಬಳಸುತ್ತಿದ್ದೆವು. ಆದರೆ ಇವಾಗ ಡೈರೆಕ್ಟ್ ಪೈಪ್ ಎಳೆದು ಹಿಡಿದುಬಿಡುತ್ತೇವೆ. ಫುಲ್ಲಾ ಅಂಗಳಕ್ಕೆ, ತಾರ್ ರೋಡಿಗೆ, ಸಿಮೆಂಟ್ ರೋಡಿಗೆ ಎಷ್ಟು ನೀರು ಹಾಕಿದ್ರೆ ಏನು ಪ್ರಯೋಜನ? ಧೂಳು ಒಂದಿಷ್ಟು ಹೋಗಲಿ ಅನ್ನೋದಕ್ಕೋಸ್ಕರ ಇಷ್ಟೊಂದು ನೀರು ಹಾಕುವುದರಲ್ಲಿ ಅರ್ಥವಿದೆಯೇ? ವಾಹನ ತೊಳೆಯುವಾಗ, ಕಾರ್ ಹಾಗೂ ಬೈಕ್ ವಾಶ್ ಮಾಡುವಾಗ ಪ್ರತಿದಿನ ಫೋರ್ಸ್ ಆಗಿ ನೀರನ್ನು ಬಿಡುತ್ತಿರುವುದರಿಂದ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು.
ರೈತರ ಹೊಲಗಳಲ್ಲಿ ಈಗ ಬದುಗಳೇ ಇಲ್ಲದಿರುವುದನ್ನು ಪ್ರಸ್ತಾಪಿಸಿದ ಅವರು, ಈ ಸಕಾಲದಲ್ಲಿ ಎಲ್ಲಾ ಹೊಲಗಳಲ್ಲೂ ಬದುಗಳ ನಿರ್ಮಾಣ ಮಾಡಬೇಕು. ಅವಶ್ಯಕತೆಗಳಿಗೆ ಅನುಗುಣವಾಗಿ ಕೃಷಿ ಹೊಂಡಗಳು, ಚೆಕ್ ಡ್ಯಾಂಗಳನ್ನು ಮಾಡಿಕೊಳ್ಳುವುದರಿಂದ ನೀರನ್ನು ಅಲ್ಲೇ ಹಿಡಿದಿಟ್ಟು ಭೂಮಿಗೆ ಇಂಗಿಸುವ ಕೆಲಸ ಮಾಡಬೇಕಾಗಿದೆ. ಲಕ್ಷಾಂತರ ವರ್ಷಗಳಿಂದ ಭೂಮಿಯಲ್ಲಿ ಇಂಗಿರುವುದನ್ನು ನಾವು ಈಗಾಗಲೇ ಹೊರತೆಗೆದಿದ್ದೇವೆ, ಈಗ ನಮಗಿರುವ ಏಕೈಕ ದಾರಿ ಎಂದರೆ ಮತ್ತೆ ನೀರನ್ನು ಇಂಗಿಸುವುದು ಮಾತ್ರ ಎಂದರು.

ಮುಂದಿನ ಪೀಳಿಗೆಗೆ ನಾವು ಉತ್ತರದಾಯಿ: ನಾವು ನಮ್ಮ ಪೂರ್ವಜರಿಂದ ಈ ಭೂಮಿಯನ್ನು ಎರವಲಾಗಿ ಪಡೆದಿದ್ದೀವಿ ಅಂತ ಹೇಳ್ತೀವಿ, ಆದರೆ ಹಾಗಿಲ್ಲ. ನಾವು ನಮ್ಮ ಮುಂದೆ ಹುಟ್ಟೋ ಮಕ್ಕಳ, ನೆಕ್ಸ್ಟ್ ಜನರೇಷನ್ನಿಂದ ಅದನ್ನ ಸಾಲವಾಗಿ ಪಡೆದುಕೊಂಡಿದ್ದೀವಿ. ಅವರಿಗೆ ನಾವು ಮತ್ತೆ ಅದನ್ನ ಯಥಾಸ್ಥಿತಿಯಲ್ಲಿ, ಒಳ್ಳೆ ಸ್ಥಿತಿಯಲ್ಲಿ ಬಿಟ್ಟುಕೊಟ್ಟು ಹೋಗಬೇಕಾಗಿದೆ. ಅವರು ಆಕ್ಸಿಜನ್ ಮಾಸ್ಕ್ ಹಾಕಿಕೊಂಡು, ನೀರಿಗೋಸ್ಕರ ಹೋರಾಟ ಮಾಡುತ್ತಾ ಬದುಕುವುದು ಬೇಡ ಎಂದು ಭಾವುಕರಾಗಿ ನುಡಿದರು.
ಈ ನಿಟ್ಟಿನಲ್ಲಿ ಗಿಡಮರಗಳನ್ನು ನೆಡಲು, ಕೃಷಿ ಹೊಂಡಗಳನ್ನು ನಿರ್ಮಿಸಲು ಹಾಗೂ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುವ ಹಣ್ಣಿನ ಮರಗಳನ್ನು ಬೆಳೆಸಲು ಅವರು ಕರೆ ನೀಡಿದರು. “ನಿಜವಾಗ್ಲೂ ಹೇಳ್ಬೇಕಂದ್ರೆ ಒಂದು ಯೋಚನೆ ಮಾಡಿ ಫ್ರೆಂಡ್ಸ್, ಈ ಪ್ರಕೃತಿಗೆ, ಈ ಭೂಮಿಗೆ ಮನುಷ್ಯನ ಅನ್ನೋದರ ಅವಶ್ಯಕತೆ ಇಲ್ಲ. ನಮಗೆ ಪ್ರಕೃತಿ ಅವಶ್ಯಕತೆ ಇದೆ. 40,000 ವರ್ಷದಿಂದ ಮಾತ್ರ ಮಾನವನ ಇತಿಹಾಸ ನೋಡುತ್ತಿದ್ದೇವೆ, ಅದರ ಹಿಂದೆ ಪ್ರಾಣಿ ಪಕ್ಷಿಗಳೆಲ್ಲ ಆರಾಮಾಗಿದ್ದವು. ಮನುಷ್ಯ ಇವತ್ತು ಕಣ್ಮರೆಯಾದರೂ ಅವೆಲ್ಲ ಆರಾಮಾಗಿ ಇರುತ್ತವೆ. ಆದರೆ ನಾವು ಬುದ್ಧಿವಂತ ಅಂದುಕೊಂಡು ಅತ್ಯಾಸೆಯಿಂದ ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಈ ಮನಸ್ಥಿತಿ ಬದಲಾಗಬೇಕು,” ಎಂದರು.
ನಾವು ಒಂದು ಹನಿ ನೀರನ್ನಾಗಲಿ, ಒಂದು ಹಿಡಿ ಮಣ್ಣನ್ನಾಗಲಿ ಸೃಷ್ಟಿಸಲು ಸಾಧ್ಯವಿಲ್ಲದಿರುವಾಗ, ಅದನ್ನು ಹಾಳು ಮಾಡುವ ಅಧಿಕಾರ ನಮಗೆ ಯಾರು ಕೊಟ್ಟರು ಎಂದು ಪ್ರಶ್ನಿಸಿದ ಅವರು, ಈ ಅಭಿಯಾನವನ್ನು ಕೇವಲ ಚಿತ್ರದುರ್ಗ, ಕರ್ನಾಟಕ ಅಥವಾ ಭಾರತಕ್ಕೆ ಸೀಮಿತಗೊಳಿಸದೆ ಇಡೀ ಪ್ರಪಂಚದಾದ್ಯಂತ ಹರಡಲು ನೂರಾರು ಸಮಾಜಮುಖಿ ಸಂಸ್ಥೆಗಳ ಜೊತೆ ನೈಜವಾಗಿ ಕೈಜೋಡಿಸೋಣ ಎಂದು ಜನತೆಯಲ್ಲಿ ವಿನಂತಿಸಿದರು.











