Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸುದ್ದಿಒನ್ ‘ನೀರು ಉಳಿಸಿ’ ಅಭಿಯಾನ : ನೀರು ಉಳಿಸದಿದ್ದರೆ ಮುಂದಿನ ಪೀಳಿಗೆಗೆ ಆಘಾತ ಕಾದಿದೆ; ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಎಚ್ಚರಿಕೆ

---Advertisement---

ಸುದ್ದಿಒನ್, ಚಿತ್ರದುರ್ಗ,ಜೂನ್‌. 22 : ಸುದ್ದಿಒನ್ ಹಮ್ಮಿಕೊಂಡಿರುವ ‘ನೀರು ಉಳಿಸಿ ನೆಲದ ಋಣ ತೀರಿಸಿ’ ಅಭಿಯಾನಕ್ಕೆ ಚಿತ್ರದುರ್ಗದ ನಿವೃತ್ತ ಪ್ರಾಚಾರ್ಯರಾದ ಡಾ. ಸಂಗೇನಹಳ್ಳಿ ಅಶೋಕ್ ಕುಮಾರ್ ಅವರು ತಮ್ಮ ಪೂರ್ಣ ಬೆಂಬಲ ಸೂಚಿಸಿದ್ದಾರೆ. ನೀರು ಉಳಿಸಿ ಜಲ ಸಂರಕ್ಷಣೆ ಮಾಡುವುದು ಈ ಕಾಲದ ಅನಿವಾರ್ಯತೆಯಾಗಿದ್ದು, ಈ ಮಹತ್ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವುದು ನಮ್ಮೆಲ್ಲರ ಪರಮ ಕರ್ತವ್ಯವಾಗಿದೆ ಎಂದು ರು ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಒನ್ ನೀರು ಉಳಿಸಿ ನೆಲದ ಋಣ ತೀರಿಸಿ ಅಭಿಯಾನದಲ್ಲಿ ಮಾತನಾಡಿದ ಅವರು, ನಾವು ನೀರನ್ನು ಏಕೆ ಉಳಿಸಬೇಕು ಎನ್ನುವುದಕ್ಕೆ ಒಂದೇ ಮಾತಿನಲ್ಲಿ ಹೇಳುವುದಾದರೆ—ಯಾವುದೇ ಮುಲಾಜಿಲ್ಲದೆ ನೀರನ್ನು ಉಳಿಸಲೇಬೇಕಾಗಿದೆ. ಮನುಷ್ಯನ ದೇಹದ ಸುಮಾರು 60% ಭಾಗ ನೀರಿನಿಂದಲೇ ಕೂಡಿದೆ. ಇದೇ ಕಾರಣಕ್ಕಾಗಿ ನೀರನ್ನು ‘ಜೀವಜಲ’ ಎಂದು ಕರೆಯಲಾಗುತ್ತದೆ.

ಸನಾತನ ಭಾರತದ ಪರಂಪರೆಯನ್ನು ಗಮನಿಸಿದರೆ, ನೀರನ್ನು ಗಂಗೆ ಎಂದು ಪೂಜಿಸುವ ಮೂಲಕ ಅದಕ್ಕೆ ದೈವತ್ವದ ಸ್ಥಾನ ನೀಡಲಾಗಿದೆ. ಇದು ಭಾರತೀಯ ಸಂಸ್ಕೃತಿಯಲ್ಲಿ ನೀರಿಗಿರುವ ಮಹತ್ವವನ್ನು ಸಾರುತ್ತದೆ. ಪ್ರಾಚೀನ ಆಯುರ್ವೇದ ತಜ್ಞರಾದ ಸುಶ್ರುತಾಚಾರ್ಯರು ಮತ್ತು ಚರಕಾಚಾರ್ಯರು ಕೂಡ ನೀರನ್ನು `ಐಂದ್ರಜಲ’ ಎಂದು ಕರೆದಿರುವುದನ್ನು ನಮ್ಮ ಪುರಾಣಗಳಲ್ಲಿ ಕಾಣಬಹುದು. ವರಕವಿ ದರಾ ಬೇಂದ್ರೆಯವರು ಕೂಡ ‘ಇಳಿದು ಬಾ ತಾಯೆ ಇಳಿದು ಬಾ’ ಎಂದು ಗಂಗೆಯನ್ನು ಭುವಿಗೆ ಕರೆಯುತ್ತಾ ನೀರಿನ ಮಹತ್ವವನ್ನು ಕಾವ್ಯದ ಮೂಲಕ ಸಾರಿದ್ದಾರೆ.

ಮಾನವನ ನಿರ್ಲಕ್ಷ್ಯ ಮತ್ತು ಕೃತಕ ಅಭಾವ

ಇಷ್ಟೊಂದು ಪವಿತ್ರವಾದ ನೀರನ್ನು ಇಂದು ಮಾನವ ಅತ್ಯಂತ ನಿರ್ಲಕ್ಷ್ಯದಿಂದ ಬಳಸುತ್ತಿದ್ದಾನೆ. ಸಾರ್ವಜನಿಕ ಸ್ಥಳಗಳಲ್ಲೋ ಅಥವಾ ಮನೆಗಳಲ್ಲೋ ನಳಗಳಲ್ಲಿ ನೀರು ಸುಮ್ಮನೆ ಪೋಲಾಗುತ್ತಾ ಹರಿಯುತ್ತಿದ್ದರೂ, ಅದನ್ನು ಹೋಗಿ ಬಂದ್ ಮಾಡುವ ಕನಿಷ್ಠ ಸೌಜನ್ಯವನ್ನೂ ಇಂದಿನ ಸಮಾಜ ತೋರುತ್ತಿಲ್ಲ ಎನ್ನುವುದು ವಿಷಾದನೀಯ.
ಚಿತ್ರದುರ್ಗದಂತಹ ನಗರಕ್ಕೆ ಇಂದು ನೀರಿನ ಅಭಾವ ಎದುರಾಗಿದೆ ಎಂದರೆ, ಅದು ನಿಜವಾದ ಅಭಾವವಲ್ಲ, ಬದಲಿಗೆ ಮಾನವನೇ ಸೃಷ್ಟಿಸಿರುವ ಕೃತಕ ಅಭಾವವಾಗಿದೆ. ನಮ್ಮಲ್ಲಿ ಲಭ್ಯವಿರುವ ಜಲಮೂಲಗಳನ್ನು ಸಂರಕ್ಷಿಸಿ, ನಾವು ಜಾಗೃತರಾದರೆ ಚಿತ್ರದುರ್ಗಕ್ಕೆ ಸಾಕಷ್ಟು ನೀರು ಲಭ್ಯವಿದೆ. ಇದಕ್ಕಾಗಿ ನಾವು ವಾಣಿವಿಲಾಸ ಸಾಗರದಿಂಲೋ, ಅಥವಾ ಸೂಳೆಕೆರೆಯಿಂದಲೋ ನೀರನ್ನು ತರುವ ಅವಶ್ಯಕತೆಯೇ ಇಲ್ಲ. ದೈವದತ್ತವಾಗಿ ಸುರಿಯುವ ಮಳೆನೀರನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಶುದ್ಧವಾದ ನೀರನ್ನು ಉಳಿಸಿಕೊಡದಿದ್ದರೆ ನಾವು ಅಧರ್ಮದ ಹಾದಿ ಹಿಡಿದಂತೆ ಹಾಗೂ ಒಂದು ರೀತಿಯ ಪಾಪಕರ್ಮವನ್ನು ಮಾಡಿದಂತೆ ಎಂದು ಅವರು ಎಚ್ಚರಿಸಿದ್ದಾರೆ.

ದೇವರಾಜ್ ರೆಡ್ಡಿಯವರ ಶ್ರಮ ಹಾಗೂ ಮಳೆನೀರು ಕೊಯ್ಲಿನ ಅನಿವಾರ್ಯತೆ

ಚಿತ್ರದುರ್ಗ ಜಿಲ್ಲೆಯವರೇ ಆದ ಜಲತಜ್ಞ ದೇವರಾಜ್ ರೆಡ್ಡಿ ಅವರು ಕಳೆದ 40 ವರ್ಷಗಳಿಂದ ಮಳೆನೀರು ಹಾಗೂ ಜಲ ಸಂರಕ್ಷಣೆಯ ಮಹತ್ವದ ಕುರಿತು ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ತಮ್ಮ ಇಡೀ ಬದುಕನ್ನೇ ಜಲ ಸಂರಕ್ಷಣೆಗಾಗಿ ಮೀಸಲಿಟ್ಟಿರುವ ಅವರ ಕಾರ್ಯ ನಮಗೆಲ್ಲರಿಗೂ ಪ್ರೇರಣೆಯಾಗಬೇಕಿದೆ.

ಹೊಸದಾಗಿ ಮನೆ ಕಟ್ಟುವವರು ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಬೀಳುವ ಪ್ರತಿಯೊಂದು ಹನಿ ಮಳೆನೀರನ್ನು ವೈಜ್ಞಾನಿಕವಾಗಿ ಸಂಗ್ರಹಿಸುವುದರ ಮೂಲಕವೇ ತಮ್ಮ ದೈನಂದಿನ ನೀರಿನ ಸಂಪೂರ್ಣ ಅವಶ್ಯಕತೆಯನ್ನು ಪೂರೈಸಿಕೊಳ್ಳಬಹುದು. ಕಲುಷಿತ ನೀರಿನಿಂದಲೇ ಇಂದು ನೂರಾರು ಮಾರಕ ಕಾಯಿಲೆಗಳು ಹರಡುತ್ತಿವೆ. ಪರಿಶುದ್ಧವಾದ ಮಳೆನೀರನ್ನು ಬಳಸುವುದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಮುಂದಿನ ಪೀಳಿಗೆಗೆ ಕಾದಿದೆ ಆಘಾತಕಾರಿ ಭವಿಷ್ಯ
ಪ್ರಸ್ತುತ ಮಳೆಗಾಲದ ಸೀಸನ್ ಆರಂಭವಾಗಿರುವುದರಿಂದ, ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಮಳೆನೀರು ಕೊಯ್ಲು ಮಾಡಿಕೊಳ್ಳಬೇಕು. ಈಗಲೇ ನಾವು ನೀರನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸದಿದ್ದರೆ, ಭವಿಷ್ಯದಲ್ಲಿ ಎದುರಾಗಲಿರುವ ಅನಾಹುತಗಳು ನಿಜಕ್ಕೂ ಅತ್ಯಂತ ಆಘಾತಕಾರಿ ಮತ್ತು ಊಹಾತೀತವಾಗಿರಲಿವೆ. ಆದ್ದರಿಂದ, ಮಳೆನೀರನ್ನು ಶೇಖರಿಸುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಾಗೂ ಮುಂದಿನ ಪೀಳಿಗೆಗೆ ಸುಭದ್ರ ಭವಿಷ್ಯವನ್ನು ಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಜಾಗೃತ ಮನಸ್ಸು ಮೂಡಲಿ ಎಂದು ಡಾ. ಸಂಗೇನಹಳ್ಳಿ ಅಶೋಕ್ ಕುಮಾರ್ ಅವರು ಅತ್ಯಂತ ಆಗ್ರಹಪೂರ್ವಕವಾಗಿ ಆಶಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now