ಬೆಂಗಳೂರು: ಮತಗಳ್ಳತನದ ವಿಚಾರಕ್ಕೆ ರಾಜಣ್ಣ ಪ್ರತಿಕ್ರಿಯೆ ನೀಡಿದ್ದೆ ತಡ ಸಚಿವ ಸ್ಥಾನದಿಂದಾನೇ ಎತ್ತಂಗಡಿಯಾಗಿದ್ದಾರೆ. ರಾಜಣ್ಣ ಅವರ ಈ ದುಸ್ಥಿತಿ ಕಂಡು ಕಾಂಗ್ರೆಸ್ ನಲ್ಲಿರುವ ವಾಲ್ಮೀಕಿ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ಸದ್ಯ ಕಾಂಗ್ರೆಸ್ ನಲ್ಲಿ ವಾಲ್ಮೀಕಿ ಸಮುದಾಯದಿಂದ ಮೂವರು ನಾಯಕರು ಮಾತ್ರ ಇದ್ರು. ಸತೀಶ್ ಜಾರಕಿಹೊಳಿ, ರಾಜಣ್ಣ, ಬಿ ನಾಗೇಂದ್ರ. ಈಗಾಗಲೇ ಸಿದ್ದರಾಮಯ್ಯ ಸರ್ಕಾರದಲ್ಲಿಯೇ ಮೊದಲ ವಿಕೆಟ್ ನಾಗೇಂದ್ರ ಅವರು ವಜಾಗೊಂಡಿದ್ದರು. ಈಗ ರಾಜಣ್ಣ. ಈಗ ಸಚಿವರಾಗಿ ಉಳಿದಿರುವುದು ಸತೀಶ್ ಜಾರಕಿಹೊಳಿ ಅವರು ಮಾತ್ರ. ಇದೀಗ ಅವರೆಲ್ಲ ಒಂದಾಗೋದಕ್ಕೆ ಈಗ ಎಲ್ಲಾ ರೀತಿಯ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಒಂದಾಗುವುದಕ್ಕೆ ರೆಡಿಯಾಗಿದ್ದಾರೆ. ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಬೇಡಿ. ರಾಜಣ್ಣ ಅವರ ಸಚಿವ ಸ್ಥಾನವನ್ನ ಯಾಕೆ ಕಿತ್ತುಕೊಳ್ಳಬೇಕಿತ್ತು ಎನ್ನುವ ನಿಟ್ಟಿನಲ್ಲಿ ಒಂದಾಗುತ್ತಿದ್ದು, ತೆರವಾಗಿರುವ ಸಚಿವ ಸ್ಥಾನಕ್ಕೆ ನಮ್ಮ ಸಮುದಾಯದವರನ್ನೇ ಮಂತ್ರಿಯನ್ನಾಗಿ ಮಾಡಿ ಎಂಬ ಬೇಡಿಕೆ ಇಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಮೊದಲಿನಿಂದಲೂ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜಣ್ಣ ಅವರೊಟ್ಟಿಗೆ ನಿಂತಿದ್ದಾರೆ. ಹೀಗಾಗಿ ರಾಜಣ್ಣ ಅವರ ಪರವಾಗಿ ದೆಹಲಿಗೆ ನಾಯಕರ ನಿಯೋಗ ಹೋಗುವ ಸಾಧ್ಯತೆ ಇದೆ. ರಾಜಣ್ಣ ಅವರ ವಜಾ ಬಗ್ಗೆ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ರಾಜಕೀಯದಲ್ಲೆಲ್ಲಾ ಇದೆಲ್ಲಾ ಸ್ವಾಭಾವಿಕ. ಇದನ್ನೆಲ್ಲಾ ನೋಡಿನೆ ಹೆಜ್ಜೆ ಇಡಬೇಕು. ರಾಜಕೀಯದಲ್ಲಿ ಹುಷಾರಾಗಿರಬೇಕು. ಆಗ ಇಂತಹ ಘಟನೆಗಳು ನಡೆಯೋದಿಲ್ಲ. ರಾಜಕೀಯದಲ್ಲಿ ಇಂದು ಇದ್ದದ್ದು ನಾಳೆ ಇರೋದಿಲ್ಲ. ಕಾದು ನೋಡಬೇಕಿದೆ ಅಷ್ಟೇ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇದರ ನಡುವೆ ನಾವೆಲ್ಲಾ ಒಗ್ಗಟ್ಟಾಗಬೇಕು ಅಂತಾನು ಸಲಹೆ ನೀಡಿದ್ದಾರೆ.















