ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 23 : ಒಳ ಮೀಸಲಾತಿಯಿಂದ ನಮಗೆ ಅನ್ಯಾಯವಾಗಲು ಬಿಡುವುದಿಲ್ಲ. ಶಾಸಕರು, ಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದೆಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಎಚ್ಚರಿಸಿದರು.
ಬೆಂಗಳೂರಿನ ವಸಂತನಗರದಲ್ಲಿರುವ ಬಂಜಾರ ಭವನದಲ್ಲಿ ಅ.25 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಸಭೆಗೆ ಪೂರಕವಾಗಿ ಇಲ್ಲಿನ ಬಂಜಾರ ಗುರುಪೀಠದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 3600 ಕ್ಕೂ ಹೆಚ್ಚು ತಾಂಡಗಳಿದ್ದು, 30 ಲಕ್ಷಕ್ಕೂ ಅಧಿಕ ಬಂಜಾರರಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ನಮ್ಮ ಜನಾಂಗಕ್ಕೆ ಒಳ ಮೀಸಲಾತಿ ಜಾರಿಯಿಂದ ಅನ್ಯಾಯವಾಗಿದೆ. ಜಾತಿ ಪಟ್ಟಿಯಿಂದ ನಮ್ಮನ್ನು ಹೊರಗಿಡುವ ಹುನ್ನಾರ ಸಹಿಸುವುದಿಲ್ಲ. ಒಳ ಮೀಸಲಾತಿ ಜಾರಿಗೊಳಿಸಿರುವವರಿಗೆ ತಕ್ಕ ಪಾಠ ಕಲಿಸಲು ನಾಳೆ ನಡೆಯುವ ಸಭೆಯಲ್ಲಿ ಜಿಲ್ಲೆಯಲ್ಲಿರುವ ಬಂಜಾರ ಸಮುದಾಯ, ಪರಿಶಿಷ್ಟ ಜಾತಿ ಹಾಗು ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸ್ವಾಮೀಜಿ ಮನವಿ ಮಾಡಿದರು.
ಹಿಂದಿನ ಮುಖ್ಯಮಂತ್ರಿಗೆ ಸರಿಯಾದ ಪಾಠ ಕಲಿಸಿದ್ದೇವೆ. ಎಸ್ಸಿ, ಎಸ್ಟಿ.ಗಳು ಒಂದಾದರೆ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಕ್ಕಳ ಭವಿಷ್ಯ ಕಷ್ಟವಾಗುತ್ತದೆ. ವೈಯಕ್ತಿಕ ಪ್ರತಿಷ್ಟೆಗಳನ್ನು ಬಿಟ್ಟು ಎಲ್ಲರೂ ಸಂಘಟಿತರಾಗಿ ಬಂಜಾರ ಗುರುಪೀಠವನ್ನು ಬಲಪಡಿಸಿ. ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತವೆ. ಬಂಜಾರರಿಗೆ ಅನ್ಯಾಯ ಮಾಡಿದವರು ಅಡ್ರೆಸ್ ಇಲ್ಲದಂತಾಗಿದ್ದಾರೆ.
ಬಂಜಾರ ಜನಾಂಗಕ್ಕೆ ಕಲೆ, ಸಂಸ್ಕøತಿ, ಗುರು ಪರಂಪರೆಯಿದೆ. ಮತ್ತೊಬ್ಬರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡುವವರಲ್ಲ. ಬಸವಣ್ಣನವರ ಆಶಯದಂತೆ ಕಾಯಕವೆ ಕೈಲಾಸ ಎಂದು ನಂಬಿ ಬದುಕುತ್ತಿರುವವರು. ಇಂತಹ ಸಮಾಜಕ್ಕೆ ಯಾರೇ ದ್ರೋಹ ಬಗೆದರು ಸುಮ್ಮನಿರಲ್ಲ ಎಂದು ಗುಡುಗಿದರು.
ನಿವೃತ್ತ ಶಿಕ್ಷಕ ಮಂಜುನಾಥ ನಾಯ್ಕ ಮಾತನಾಡಿ ಒಳ ಮೀಸಲಾತಿಯಿಂದ ಭೋವಿ, ಕೊರಚ, ಕೊರಮ ಹಾಗೂ ಲಂಬಾಣಿ ಜನಾಂಗಕ್ಕೆ ಅನ್ಯಾಯವಾಗಿದೆ. ದೆಹಲಿಯಲ್ಲಿಯೂ ಒಳ ಮೀಸಲಾತಿ ವಿರುದ್ದ ಹೋರಾಟ ನಡೆಯಿತು. ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅನಾಥಾಶ್ರಮ ತೆರೆಯುವ ಚಿಂತನೆಯಲ್ಲಿದ್ದಾರೆ. ಎಲ್ಲರೂ ಕೈಜೋಡಿಸಿ ಎಂದು ವಿನಂತಿಸಿದರು.
ನಿವೃತ್ತ ಅಧಿಕಾರಿ ತಿಮ್ಮನಾಯ್ಕ ಮಾತನಾಡುತ್ತ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಕೊಟ್ಟಿದ್ದಾರೆ. ಅದರಂತೆ ಸೌಲಭ್ಯಗಳು ಹಂಚಿಕೆಯಾಗುತ್ತಿಲ್ಲ. ಶೋಷಿತರು, ಧ್ವನಿ ಇಲ್ಲದವರು, ದಲಿತರು ಹಕ್ಕುಗಳನ್ನು ಕೇಳುತ್ತಿದ್ದೇವೆ. ಯಾರ ವಿರುದ್ದವೂ ಅಲ್ಲ. ಜಾತಿ ವಿಷ ಬಿತ್ತುವವರ ವಿರುದ್ದ ಎಚ್ಚರಿಕೆಯಿಂದಿರಬೇಕಾಗಿದೆ ಎಂದರು.
ಸೂರಗೊಂಡನಕೊಪ್ಪದ ನಿರ್ದೇಶಕ ಕೆ.ಕುಬೇಂದ್ರಪ್ಪ ಮಾತನಾಡಿ ಒಳ ಮೀಸಲಾತಿಯಿಂದಾಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ಹೋರಾಟದ ರೂಪ ರೇಷೆಗಳನ್ನು ತಯಾರಿಸಲು ಬೆಂಗಳೂರಿನಲ್ಲಿ ನಡೆಯುವ ಪೂರ್ವಭಾವಿ ಸಭೆಗೆ ರಾಜ್ಯದ ನಾನಾ ಭಾಗಗಳಿಂದ ಎಸ್ಸಿ, ಎಸ್ಟಿ.ಗಳು ಹಾಗೂ ಬಂಜಾರರು ಪಾಲ್ಗೊಂಡು ಸರ್ಕಾರಕ್ಕೆ ಶಕ್ತಿ ಪ್ರದರ್ಶಿಸಬೇಕಿದೆ. ಜಿಲ್ಲೆಯಲ್ಲಿರುವ ಲಂಬಾಣಿ ಸಮಾಜ ತಪ್ಪದೆ ಭಾಗವಹಿಸುವಂತೆ ಕೋರಿದರು. ಉಮೇಶ್‍ನಾಯ್ಕ, ಶಂಕರ್‍ನಾಯ್ಕ, ಮಲ್ಲೇಶ್‍ನಾಯ್ಕ ಸೇರಿದಂತೆ ಬಂಜಾರ ಸಮಾಜದ ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.












