ಸುದ್ದಿಒನ್, ಚಿತ್ರದುರ್ಗ, ಜೂನ್. 22 : ಛಲವಾದಿ ಗುರುಪೀಠದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ವಾಮೀಜಿ ಹಾಗೂ ಸಮಾಜದ ಮುಖಂಡರ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯ ಮಾಜಿ ಶಾಸಕರಾದ ಎಸ್. ಕೆ. ಬಸವರಾಜನ್ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಗೊಂಡಿದೆ.
ನಗರದ ಹೊರವಲಯದ ಸೀಬಾರ ಸಮೀಪದ ಎಸ್. ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ಇಂದು ಸಭೆ ನಡೆಯಿತು.
ರಾಜ್ಯಸಭಾ ಮಾಜಿ ಸದಸ್ಯರಾದ ಎಚ್. ಹನುಮಂತಪ್ಪನವರು, ಮಾಜಿ ಶಾಸಕರಾದ ಎಸ್. ಕೆ. ಬಸವರಾಜನ್, ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಹಾಗೂ ಛಲವಾದಿ ಸಮುದಾಯದ ಹಲವು ಮುಖಂಡರು ನೇತೃತ್ವ ವಹಿಸಿಕೊಂಡಿದ್ದರು.

ನೆನೆಗುದಿಗೆ ಬಿದ್ದಿರುವ ಛಲವಾದಿ ಮಹಾ ಸಂಸ್ಥಾನ ಮಠದ ಅಭಿವೃದ್ಧಿ ಹಾಗೂ ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚೆ ಅಭಿಪ್ರಾಯಗಳ ಚಿಂತನ ಮಂಥನ ನಡೆಯಿತು. ಸಭೆಯಲ್ಲಿ ಮುಖಂಡರಿಂದ ಹಲವು ಅಭಿಪ್ರಾಯಗಳು ವ್ಯಕ್ತವಾದವು.
ಅಂತಿಮವಾಗಿ ಶ್ರೀಮಠದ ನಿರ್ಮಾಣ ಹಾಗೂ ಅಭಿವೃದ್ಧಿಯ ಮೂಲಕ ಸಮಾಜದ ಸಂಘಟನೆಯ ಸಾಧ್ಯತೆಯ ಕುರಿತು ಎಸ್. ಕೆ. ಬಸವರಾಜನ್ ನೀಡಿದ ಸಲಹೆಗಳಿಗೆ ಸಮ್ಮತಿ ಸೂಚಿಸಿದ ಸಭೆ ಹಿರಿಯರಾದ ಹೆಚ್. ಹನುಮಂತಪ್ಪನವರ ಮಾರ್ಗದರ್ಶನ, ಸಹಕಾರ ಪಡೆದು ಗುರುಪೀಠ ನಿರ್ಮಾಣ ಮಾಡುವ ನಿರ್ಧಾರ ಕೈಗೊಂಡಿತು.
ಸಭೆಯಲ್ಲಿ ಮಾತನಾಡಿದ ಹೆಚ್. ಹನುಮಂತಪ್ಪನವರು ಸರ್ಕಾರ ನೀಡಿದ ಅನುದಾನದ ಬಳಕೆ ಮಾಡಿಕೊಳ್ಳುವಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಭವಿಷ್ಯದಲ್ಲಿ ಭವ್ಯ ಗುರುಪೀಠ ನಿರ್ಮಾಣ ಮಾಡಲು ಇರುವ ಸಾಧ್ಯತೆಗಳ ಬಗ್ಗೆ ವಿವರಿಸಿದರು. ಮಠ ನಿರ್ಮಾಣದ ವಿಷಯದಲ್ಲಿ ಎಸ್.
ಕೆ. ಬಸವರಾಜನ್ ಅವರ ನಿರಂತರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲು ಸಭೆ ನಿರ್ಧರಿಸಿತು. ಸಮಾಜದ ಅಭ್ಯುದಯಕ್ಕಾಗಿ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ತೊರೆಯುವಂತೆ ಬಸವರಾಜನ್ ನೀಡಿದ ಸಲಹೆಗೆ ಮನ್ನಣೆ ನೀಡಿದ ಛಲವಾದಿ ಸಮಾಜದ ಮುಖಂಡರು ಕಳೆದು ಹೋದ ಘಟನೆಗಳನ್ನು ಮತ್ತೆ ಮತ್ತೆ ಚರ್ಚಿಸದೆ ಭವಿಷ್ಯದಲ್ಲಿ ಆಗಬೇಕಿರುವ ಉತ್ತಮ ಕೆಲಸಗಳ ಬಗ್ಗೆ ಮಾತ್ರ ಚರ್ಚೆಸಲು
ನಿರ್ಣಯ ಕೈಗೊಂಡಿದ್ದರಿಂದ ಸಭೆ ಸುಖಾoತ್ಯಗೊಂಡಿತು. ಸಭೆಯಲ್ಲಿ ಸಮಾಜದ ಮುಖಂಡರಾದ ಮಾಜಿ ನಗರಸಭೆ ಅಧ್ಯಕ್ಷ ಹೆಚ್. ಸಿ ನಿರಂಜನಮೂರ್ತಿ, ನಿವೃತ್ತ ಪೊಲೀಸ್ ಅಧಿಕಾರಿ ರುದ್ರಮುನಿ, ಜಿ ಹೆಚ್. ಮೋಹನ್, ರವಿಕುಮಾರ್, ಅಣ್ಣಪ್ಪಸ್ವಾಮಿ,ಶೇಷಣ್ಣ, ಭಾರ್ಗವಿ ದ್ರಾವಿಡ್, ಸೇರಿದಂತೆ ಹಲವಾರು ಪಾಲ್ಗೊಂಡಿದ್ದರು.












