ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೂ ಬರುವ ಮುನ್ನ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಅದರಲ್ಲಿ ಅಕ್ಕಿ ಭಾಗ್ಯವೂ ಒಂದಾಗಿತ್ತು. ಆದರೆ ಈಗ ಅಕ್ಕಿ ಸಿಗದೆ ಆ ಯೋಜನೆಗೆ ಹಣ ನೀಡುತ್ತೇವೆ ಎನ್ನುತ್ತಿದೆ. ಈ ಬಗ್ಗೆ ಕಾಂಗ್ರೆಸ್ – ಬಿಜೆಪಿ ನಡುವೆ ಟಾಕ್ ವಾರ್ ಶುರುವಾಗಿದೆ.
ಈ ಬಗ್ಗೆ ಮಡಿಕೇರಿಯಲ್ಲಿ ಪ್ರತಾಪ್ ಸಿಂಹ ಮಾತನಾಡಿ, ನೀವು ಕೊಡ್ತೀವಿ ಅಂತ ಹೇಳಿದ್ದು 10 ಕೆಜಿ ಅಕ್ಕಿ. ಈಗ ಐದು ಕೆಜಿ ಅಕ್ಕಿ ಬಗ್ಗೆ ಮಾತನಾಡುತ್ತಿದ್ದೀರಿ. ಈಗಲಾದರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯಿರಿ. ನೀವು ನುಡಿದಂತೆ 10 ಕೆಜಿ ಅಕ್ಕಿಗೆ ಹಣ ಹಾಕಿ. ಕೇಂದ್ರದ ಅಕ್ಕಿಗೆ ಅನ್ನ ಭಾಗ್ಯ ಲೇಬಲ್ ಹಾಕಬೇಡಿ ಎಂದಿದ್ದಾರೆ.
ಬಿಜೆಪಿ ನಾಯಕರ ಮಾತಿಗೆ ತಿರುಗೇಟು ನೀಡಿದ ಸಚಿವ ಎಂಬಿ ಪಾಟೀಲ್, ಅಕ್ಕಿ ಕೊಡದಿದ್ದರೆ ಹಣ ಕೊಡಿ ಅಂತ ಹೇಳಿಲ್ವಾ. ನಾವು ಹಣ ಕೊಡ್ತಿದ್ದೀವಿ. ಕೇಂದ್ರ ಬಡವರಿಗೆ ಮೋಸ ಮಾಡಿದೆ. ಅನಿವಾರ್ಯವಾಗಿ ಅಕ್ಕಿ ಬದಲು ಹಣ ಕೊಟ್ಟಿದ್ದೀವಿ. ಬಿಜೆಪಿಯವರು ಬ್ಲಾಕ್ ಮಾರ್ಕೆಟರ್ಸ್ ಇದ್ದ ಹಾಗೆ. ಅಕ್ಕಿ ಕೊಡದೆ ಕೇಂದ್ರ ಸರ್ಕಾರ ಮೋಸ ಮಾಡಿತು. ಅಕ್ಕಿ ಸಿಗುವವರೆಗೂ ಜನರ ಅಕೌಂಟಿಗೆ ಹಣ ಹಾಕ್ತಿವಿ. ಸಿಟಿ ರವಿ ಅಕ್ಕಿ ಸಿಗದಿದ್ದರೆ ಹಣ ಕೊಡಿ ಅಂತಿದ್ರು. ಈಗ ಹಣ ಕೊಡ್ತಿದ್ರೆ ಅಕ್ಕಿ ಕೊಡಿ ಅಂತಾರೆ. ಜನರಿಗೆ ಖುಷಿ ಇದೆ ಅವರಿಗೆ ಯಾವುದೇ ಬೇಸರವಿಲ್ಲ. ಬಿಜೆಪಿಯವರ ರಾಜಕೀಯಕ್ಕೆ ಪಾಠ ಕಲಿಸಿದ್ದೇವೆ ಎಂದಿದ್ದಾರೆ.