ಭೂಮಾಪನ ಇಲಾಖೆಯಲ್ಲಿ ಲಭ್ಯವಿರುವ ಮೂಲ ದಾಖಲೆಗಳ ನಕಲುಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಾದ ಶುಲ್ಕವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ವಿವಿಧ ನಮೂನೆಗಳ ನಕಲುಗಳಿಗೆ ಅಧೀನ ಕಚೇರಿಗಳಲ್ಲಿ ಬೇರೆಬೇರೆ ದರ ವಸೂಲಿ ಮಾಡಲಾಗುತ್ತಿದ್ದು, ಇದರಿಂದ ಉಂಟಾಗುತ್ತಿದ್ದ ಗೊಂದಲ ನಿವಾರಣೆ ಹಾಗೂ ಏಕರೂಪದ ಶುಲ್ಕ ವ್ಯವಸ್ಥೆ ಜಾರಿಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ.
ಇಲಾಖೆ ಪ್ರಕಟಿಸಿರುವ ಹೊಸ ದರಪಟ್ಟಿ ಪ್ರಕಾರ, ಟಿಪ್ಪಣಿ ಅಥವಾ ಅಟ್ಲಾಸ್ ನಕಲುಗಳಿಗೆ ಪ್ರತಿ ಸರ್ವೆ ಅಥವಾ ಹಿಸ್ಸಾ ನಂಬರಿಗೆ ₹35 ನಿಗದಿಪಡಿಸಲಾಗಿದೆ. ಆಕಾರಬಂದು ನಕಲುಗಳಿಗೆ ₹20 ಹಾಗೂ ಹದ್ದುಬಸ್ತು ಸ್ಕೆಚ್ ಅಥವಾ ಪಿ.ಟಿ ಶೀಟ್ ನಕಲುಗಳಿಗೆ ₹35 ಶುಲ್ಕ ವಿಧಿಸಲಾಗಿದೆ.ನಕ್ಷೆಯಲ್ಲಿರುವ ಪ್ರತಿ ಸರ್ವೆ ನಂಬರಿನ ವಿವರಗಳ ನಕಲುಗಳಿಗೆ ₹10 ನಿಗದಿಯಾಗಿದ್ದು, ನೋಟೀಸ್ ಕಾಪಿ, ಅರ್ಜಿಯ ನಕಲು, ಹೇಳಿಕೆ ಅಥವಾ ಮಹಜರು ಪ್ರತಿಗಳಿಗೆ ಪ್ರತಿ ಪುಟಕ್ಕೆ ₹10 ವಸೂಲಿ ಮಾಡಲಾಗುತ್ತದೆ.

ಆದೇಶದ ನಕಲುಗಳಿಗೆ ಮೊದಲ 100 ಪದಗಳಿಗೆ ₹10 ಹಾಗೂ ನಂತರದ ಪ್ರತಿ 100 ಪದಗಳಿಗೆ ಹೆಚ್ಚುವರಿಯಾಗಿ ₹10 ಶುಲ್ಕ ವಿಧಿಸಲಾಗುತ್ತದೆ. ನಗರಮಾಪನ ದಾಖಲೆಗಳಾದ ಪಿ.ಆರ್ ಕಾರ್ಡ್ ನಕಲು, ವಿಚಾರಣಾ ರಿಜಿಸ್ಟರ್ ಎಂಟ್ರಿ ಮತ್ತು ಫೀಲ್ಡ್ ಬುಕ್ ನಕಲುಗಳಿಗೆ ತಲಾ ₹30 ದರ ನಿಗದಿಯಾಗಿದೆ.ಗ್ರಾಮ ನಕಾಶೆ ಅಥವಾ ನಗರಮಾಪನ ಎಲ್.ಎ ನಕಾಶೆಯ ನಕಲು 500 ಚದರ ಇಂಚು ಮೀರಿದಲ್ಲಿ, ನಿಗದಿತ ದರದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಆಯುಕ್ತ ವೆಂಕಟ್ ರಾಜಾ ಅವರು ಮೇ 11, 2026ರಂದು ಆದೇಶ ಹೊರಡಿಸಿದ್ದು, ಇಲಾಖೆಯ ಎಲ್ಲಾ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರ ಕಚೇರಿಗಳಿಗೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.ಇನ್ನು ಮುಂದೆ ಸಾರ್ವಜನಿಕರು ಭೂದಾಖಲೆಗಳ ನಕಲು ಪಡೆಯುವ ವೇಳೆ ಈ ಹೊಸ ಏಕರೂಪದ ದರಗಳನ್ನೇ ಪಾವತಿಸಬೇಕಾಗುತ್ತದೆ.


















