ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಮಾ. 25 : ನಿವೃತ್ತ ನೌಕರರ ಮತ್ತು ಕುಟುಂಬ ಪಿಂಚಣಿದಾರರಿಗೆ ಸಂಬಂಧಪಟ್ಟ ನಿವೃತ್ತಿ ವೇತನ ಮತ್ತು ಕುಟುಂಬ ಪಿಂಚಣಿ ಪರಿಷ್ಕರಣೆ ಮಾಡಲು ಹಾಗೂ ವಾರ್ಷಿಕವಾಗಿ ನೀಡುತ್ತಿರುವ 2 ತುಟ್ಟಿ ಭತ್ಯೆಯನ್ನು ಮುಂದಿನ ದಿನಗಳಲ್ಲಿ ನೀಡಲು ಸಾಧ್ಯವಿಲ್ಲ, ಎಂಬ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ನಗರದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಒನಕೆ ಓಬವ್ವ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಸಂಘದ ಪದಾಧಿಕಾರಿಗಳು ತಮ್ಮ ಎಡಗೈಗೆ ಕಪ್ಪು ಪಟ್ಟಿಯನ್ನು ಧರಿಸುವುದರ ಮೂಲಕ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.
ಕೇಂದ್ರ ಸರ್ಕಾರದ ಆರ್ಥಿಕ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ನಿವೃತ್ತ ನೌಕರರು ಮತ್ತು ಕುಟುಂಬದ ಪಿಂಚಣಿದಾರರಿಗೆ ಸಂಬಂಧಪಟ್ಟಂತೆ, ಮುಂದಿನ ದಿನಗಳಲ್ಲಿ ನಿವೃತ್ತಿ ವೇತನ ಮತ್ತು ಕುಟುಂಬದ ಪಿಂಚಣಿಯನ್ನು ಪರಿಷ್ಕರಣೆ ಮಾಡಲು ಹಾಗೂ ವಾರ್ಷಿಕವಾಗಿ ನೀಡುತ್ತಿರುವ 2 ತುಟ್ಟಿ ಭತ್ಯೆಯನ್ನು ಮುಂದಿನ ದಿನಗಳಲ್ಲಿ ನೀಡಲು ಸಾಧ್ಯವಿಲ್ಲ ಎಂಬುದರ ಬಗ್ಗೆ ಚರ್ಚೆ ಮಾಡಿರುವುದನ್ನು ಮನಗಂಡು. ಅಖಿಲ ಭಾರತ ನಿವೃತ್ತ ನೌಕರರ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಕೇಂದ್ರ ಸಂಘ, ಬೆಂಗಳೂರು, ಇವರುಗಳ ಸಂಯುಕ್ತ ಸೂಚನೆ ಮೇರೆಗೆ ಕೇಂದ್ರ ಸರ್ಕಾರದ ಇಂತಹ ಆಘಾತಕಾರಿ ನೀತಿಯನ್ನು ಖಂಡಿಸಿ. ಸಾಂಕೇತಿಕ ಪ್ರತಿಭಟನೆ ಮೂಲಕ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳವರ ಮೂಲಕ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರವು ಇಂತಹ ಆಘಾತಕಾರಿ ನೀತಿಯನ್ನು ಹಿಂಪಡೆದು, ವೃದ್ಯಾಪ್ಯದ ಹಂತದಲ್ಲಿರುವ ನಮ್ಮ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರಿಗೆ ಹೆಚ್ಚಿನ ಆರ್ಥಿಕ ಸೌಲಭ್ಯವನ್ನು ನೀಡುವುದರ ಮೂಲಕ ನೆಮ್ಮದಿ ಜೀವನ ನಡೆಸಲು ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದ್ದು. ಕೇಂದ್ರ ಸರ್ಕಾರವು ನಿವೃತ್ತ ನೌಕರರ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲು ಹಾಗೂ ವಾರ್ಷಿಕ ಎರಡು ಹಂತದ ತುಟ್ಟಿಭತ್ಯೆ (ಡಿಎ) ನೀಡುವಲ್ಲಿ ಹೊಸ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಈ ನಿರ್ಧಾರವು ನಿವೃತ್ತ ನೌಕರರ ಮತ್ತು ಅವರ ಕುಟುಂಬದ ಹಿತಾಸಕ್ತಿಗೆ ಧಕ್ಕೆ ತರಲಿದೆ ಭಾರತದ ಸಂಚಿತ ನಿಧಿಯಿಂದ ಪಿಂಚಣಿ ಹೊಣೆಗಾರಿಕೆಗಳ ಮೇಲಿನ ವೆಚ್ಚಕ್ಕಾಗಿ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು ಮತ್ತು ತತ್ವಗಳ ಮೌಲ್ಯೀಕರಣ. ಕೇಂದ್ರ ಸರ್ಕಾರವು ತನ್ನ ಪಿಂಚಣಿದಾರರನ್ನು ವರ್ಗೀಕರಿಸಲು ಮತ್ತು ಪಿಂಚಣಿದಾರರ ನಡುವೆ ವ್ಯತ್ಯಾಸವನ್ನು ಕಾಯ್ದುಕೊಳ್ಳಲು ಅಧಿಕಾರ ಹೊಂದಿದೆ ಎಂಬ ತತ್ವವನ್ನು ಮಾನ್ಯ ಮಾಡುವ ಕಾಯ್ದೆಯು ಮಾರ್ಚ್ 25, 2025 ರಿಂದ ಜಾರಿಗೆ ಬಂದಿದೆ ಇದನ್ನು ಯಾವುದೇ ಪೂರ್ವ ಸೂಚನೆ ನೀಡದೆ ಹಣಕಾಸು ಮಸೂದೆಯ ಭಾಗವಾಗಿ ಪರಿಚಯಿಸಲಾಯಿತು ಮತ್ತು ಮಾರ್ಚ್ 25ರ ದಿನದಂದು ಲೋಕಸಭೆಯು ಅಂಗೀಕರಿಸಿತು. ಈ ಕಾಯ್ದೆಯನ್ನು ಅಕ್ಷರಶಃ ಜಾರಿಗೆ ತಂದರೆ, ಪಿಂಚಣಿದಾರರ ನಿವೃತ್ತಿ ದಿನಾಂಕವು ವ್ಯತ್ಯಾಸಗಳ ಆಧಾರವಾಗಿರುತ್ತದೆ ಮತ್ತು ಪಿಂಚಣಿ ಅರ್ಹತೆಗೆ ಸಂಬಂಧಿಸಿದಂತೆ ವರ್ಗೀಕರಣಕ್ಕೆ ಆಧಾರವಾಗಿರುತ್ತದೆ, ಇದರಿಂದಾಗಿ ಕೇಂದ್ರ ವೇತನ ಆಯೋಗದ ಕಾರ್ಯಾಚರಣೆಯ ಅವಧಿಗೆ ಮೊದಲು ಅಸ್ತಿತ್ವದಲ್ಲಿರುವ ಪಿಂಚಣಿದಾರರು ವೇತನ ಆಯೋಗದ ಶಿಫಾರಸುಗಳ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ. ಈ ಕಠಿಣ ಸಮಯದಲ್ಲಿ ಪಿಂಚಣಿಯನ್ನು ಹೆಚ್ಚಿಸಲು ಅರ್ಹರಾಗದೆ ಅಸ್ತಿತ್ವದಲ್ಲಿರುವ ಪಿಂಚಣಿದಾರರು ಭಾರೀ ನಷ್ಟಕ್ಕೆ ಒಳಗಾಗುತ್ತಾರೆ ಎಂದು ದೂರಿದ್ದಾರೆ.

ಇದು ಸರ್ಕಾರವು ತನ್ನ ಎಲ್ಲಾ ನಾಗರಿಕರಿಗೆ ನ್ಯಾಯ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಶ್ರಮಿಸುತ್ತದೆ ಎಂಬ ಘೋಷಿತ ಉದ್ದೇಶಗಳಿಗೆ ವಿರುದ್ಧವಾಗಿದೆ. ಇದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಂಗ ಘೋಷಣೆಗಳಿಗೂ ವಿರುದ್ಧವಾಗಿದೆ. “ಪಿಂಚಣಿಯು ಸಾಮಾಜಿಕ ಕಲ್ಯಾಣ ಕ್ರಮವಾಗಿದ್ದು, ತಮ್ಮ ವೃದ್ಧಾಪ್ಯದಲ್ಲಿ ಅವರು ಸಂಕಷ್ಟದಲ್ಲಿ ಬಿಡುವುದಿಲ್ಲ ಎಂಬ ಭರವಸೆಯೊಂದಿಗೆ ಉದ್ಯೋಗದಾತರಿಗಾಗಿ ನಿರಂತರವಾಗಿ ಶ್ರಮಿಸುವವರಿಗೆ ಸಾಮಾಜಿಕ-ಆರ್ಥಿಕ ನ್ಯಾಯವನ್ನು ಒದಗಿಸುತ್ತದೆ” ಎಂದು ಗಮನಿಸಲಾಗಿದೆ, ಇದು ಪಿಂಚಣಿ ಯೋಜನೆಯ ಗುರಿಗಳು ಪಿಂಚಣಿದಾರರು ಬಡತನದಿಂದ ಮುಕ್ತರಾಗಿ, ಸಭ್ಯತೆ, ಸ್ವಾತಂತ್ರ್ಯ ಮತ್ತು ನಿವೃತ್ತಿ ಪೂರ್ವ ಮಟ್ಟದಲ್ಲಿ ಸಮಾನವಾದ ಮಾನ ದಂಡದೊಂದಿಗೆ ಬದುಕಲು ಬೆಂಬಲ ನೀಡಲು ಪ್ರಯತ್ನಿಸುತ್ತವೆ ಎಂದು ನಿರ್ದಿಷ್ಟಪಡಿಸಿದೆ ಎಂದಿದ್ದಾರೆ.
ಈ ಕಾಯ್ದೆಯು 01/01/2026 ಕ್ಕಿಂತ ಮೊದಲು ನಿವೃತ್ತರಾದ ಪ್ರಸ್ತುತ ಪಿಂಚಣಿದಾರರಿಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡುತ್ತದೆ ಮತ್ತು 01/01/2016 ಕ್ಕಿಂತ ಮೊದಲು ನಿವೃತ್ತರಾದ ಮತ್ತು 01/01/2016 ರಂದು ಮತ್ತು ನಂತರ ನಿವೃತ್ತರಾದ ಹಿಂದಿನ ಪಿಂಚಣಿದಾರರಲ್ಲಿನ ಇಕ್ವಿಟಿಯನ್ನು 7ನೇ ಕೇಂದ್ರ ವೇತನ ಆಯೋಗವು ಶಿಫಾರಸು ಮಾಡಿದೆ ಮತ್ತು ನಿಮ್ಮ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು ಅಂಗೀಕರಿಸಿದೆ ಮೌಲ್ಯೀಕರಣ ಕಾಯ್ದೆಯು ಅಸ್ತಿತ್ವಕ್ಕೆ ಬಂದು ಒಂದು ವರ್ಷವನ್ನು ಪೂರ್ಣಗೊಳಿಸುತ್ತದೆ. ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳ ಕಾಯ್ದೆಯ ಮೌಲ್ಯೀಕರಣವನ್ನು ಹಿಂತೆಗೆದುಕೊಳ್ಳಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಲಾಯಿತು.
ಈ ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಪಿ. ಪ್ರೇಮನಾಥ್ ವಹಿಸಿದ್ದರು, ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಟಿ. ತಿಮ್ಮಪ್ಪ, ಆರ್ ರಂಗಪ್ಪ ರೆಡ್ಡಿ, ವೈ.ಚಂದ್ರಶೇಖರಯ್ಯ, ಟಿ.ಎ.ಮಂಜುನಾಥ್, ಪಿ.ನಾಗರಾಜ್, ಟಿ.ಪಿ.ಜ್ಞಾನಮೂರ್ತಿ, ಕೆ.ಎಸ್. ಜಯ್ಯಣ್ಣ, ಎಫ್ ಆರ್ ಹಾಲಗೇಶಿ ಎನ್.ಆರ್.ಭೈಯ್ಯಣ್ಣ ಎಸ್.ಜಗದೀಶ್ ಸೇರಿದಂತೆವ ಇತರರು ಭಾಗವಹಿಸಿದ್ದರು.















