ವೇದಮೂರ್ತಿ, ಭೀಮಸಮುದ್ರ, ಮೊ : 8088076203
ಸುದ್ದಿಒನ್,ಚಿತ್ರದುರ್ಗ, (ಜೂ.26) : ತಾಲ್ಲೂಕಿನ ಭೀಮಸಮುದ್ರದಲ್ಲಿ ಇಂದು (ಜೂ.26) ರಂದು 131 ವರ್ಷದಷ್ಟು ಹಳೆಯದಾದ ಕರಿಗಲ್ಲು ಮರುಸ್ಥಾಪನೆ ಕಾರ್ಯಕ್ರಮ ವಿಜೃಂಭಣೆಯಿಂದ ಮಾಡಲಾಯಿತು.
ಸೋಮವಾರ ಬೆಳಿಗ್ಗೆ ನಾಲ್ಕು ಗಂಟೆಯಿಂದ ರುದ್ರಾಭಿಷೇಕ, ಕುಂಭಾಭಿಷೇಕ, ಹೋಮ ಹವನ ಹಾಗೂ ಮಹಾಮಂಗಳಾರತಿ ಮೂಲಕ ಹಾಗೂ ಬಾಳೆಯ ಕಂಬವನ್ನು ನೆಟ್ಟು ಅದನ್ನು ಕತ್ತರಿಸಿ ತದನಂತರ ಹೋಮವನ್ನು ಮುಂದುವರಿಸಲಾಯಿತು.
ಭೀಮಸಮುದ್ರ ಕೆರೆಯಿಂದ 101 ಕುಂಭದಲ್ಲಿ ಗಂಗೆಯನ್ನು ತಂದು ಈ ಕಲ್ಲಿಗೆ ಅಭಿಷೇಕ ಮಾಡಿ ಕಲ್ಲನ್ನು ಗ್ರಾಮದ ಎಲ್ಲಾ ದೇವರುಗಳ ಸಮ್ಮುಖದಲ್ಲಿ ಮರು ಸ್ಥಾಪನೆ ಮಾಡಿದರು.
ತದನಂತರ ಗ್ರಾಮದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
1892 ರಲ್ಲಿ ನಂದನ ನಾಮ ಸಂವತ್ಸರ ವೃಷಭ ಲಗ್ನ, ಭರಣಿ ನಕ್ಷತ್ರದಲ್ಲಿ ಈ ಕಲ್ಲನ್ನು ಸ್ಥಾಪನೆ ಮಾಡಲಾಗಿತ್ತು. ಪುಟ್ಟಪ್ಪ ಹಾಗೂ ಗ್ರಾಮಸ್ಥರು ಸೇರಿ ಊರಿನಲ್ಲಿ ಒಂದು ಬಾವಿಯನ್ನು ತೆಗೆದು ಆ ಬಾವಿಯಲ್ಲಿ ಸಿಹಿ ನೀರು ಬಂದ ಮೇಲೆ ಈ ಕಲ್ಲನ್ನು ಸ್ಥಾಪನೆ ಮಾಡಲಾಗಿದೆ ಎಂದು ಪ್ರತೀತಿ ಇದೆ.
ಈ ಕಲ್ಲು ಗ್ರಾಮದ ಒಳಿತಿಗಾಗಿ ಸ್ಥಾಪನೆ ಮಾಡುತ್ತಾರೆ ಎಂಬ ನಂಬಿಕೆಯಿದೆ. ಗ್ರಾಮದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಿ, ಜನರು ಸುಖ ಸಂತೋಷಗಳಿಂದ ನೆಮ್ಮದಿಯಾಗಿ ಇರಲೆಂದು ಕಲ್ಲನ್ನು ಸ್ಥಾಪನೆ ಮಾಡಿದ್ದರು.
ಯಾರಾದರೂ ಗ್ರಾಮದಲ್ಲಿ ಮರಣ ಹೊಂದಿದರೆ ಈ ಕಲ್ಲಿನ ಬಳಿ ಬಂದು ಪೂಜೆ ಮಾಡಿ ತದನಂತರ ಅಂತ್ಯ ಸಂಸ್ಕಾರ ಮಾಡುವ ಪದ್ಧತಿ ಕೂಡ ಇದೆ. ಎತ್ತಿನ ಬೇಸಾಯ ಮಾಡುವ ರೈತರು ಹೊಲದಲ್ಲಿ ಬೇಸಾಯ ಮುಗಿಸಿಕೊಂಡು ಬಂದು ಊರಿನ ಮುಂದೆ ಬಂದಾಗ ಎತ್ತಿನ ಮೇಲಿರುವ ನೊಗವನ್ನು ಬಿಚ್ಚಿ ಹೆಗಲ ಮೇಲೆ ಹೊತ್ತು ಎತ್ತುಗಳನ್ನು ಕರೆದುಕೊಂಡು ಹೋಗುವ ಪದ್ಧತಿಯು ಈಗಲೂ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈಗ ಮರು ಸ್ಥಾಪನೆ ಮಾಡಿರುವ ಕಲ್ಲಿನ ಅಳತೆ ಕಲ್ಲಿನ ಅಳತೆ 7 .1 ಅಡಿ 5.1 ಇಂಚು ಇದೆ. ತೋಟದ ವಂಶಸ್ಥರು ಹಾಗೂ ಗ್ರಾಮದ ಎಲ್ಲಾ ಸಮುದಾಯದ ಜನರು ಸೇರಿ ಈ ಕಲ್ಲನ್ನು ಮರು ಸ್ಥಾಪನೆ ಮಾಡಿದ್ದಾರೆ.
ಇತ್ತೀಚಿಗೆ ಲಾರಿಯ ಅವಘಡದಿಂದ ಈ ಕಲ್ಲು ಮುರಿದುಬಿದ್ದಿದ್ದು ಈ ಕಾರಣಕ್ಕೆ ಕಲ್ಲನ್ನು ಮರುಸ್ಥಾಪನೆ ಮಾಡಲಾಯಿತು ಗ್ರಾಮಸ್ಥರು ತಿಳಿಸಿದ್ದಾರೆ.