ದೆಹಲಿ.ಆಗಸ್ಟ್8: ಡಿಜಿಟಲ್ ಸಾಲದ ಆಪ್‌ಗಳ ಕಿರುಕುಳ ಮತ್ತು ರಿಕವರಿ ಏಜೆಂಟ್‌ಗಳ ದೌರ್ಜನ್ಯದಿಂದ ಸಾಮಾನ್ಯ ಸಾಲಗಾರರು ತೀವ್ರ ಮಾನಸಿಕ ಕಿರುಕುಳ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಠಿಣ ಕ್ರಮಕ್ಕೆ ಮುಂದಾಗಿದೆ. ಸಾಲಗಾರರ ಹಕ್ಕುಗಳನ್ನು ರಕ್ಷಿಸುವ ಮತ್ತು ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳ ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಸಾಲ ವಸೂಲಾತಿ ಮಾರ್ಗದರ್ಶಿ ಸೂತ್ರಗಳನ್ನು ಆರ್‌ಬಿಐ ಬಿಡುಗಡೆ ಮಾಡಿದೆ.
2027ರ ಜನವರಿ 1ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮಗಳು ಸಾಲಗಾರರೊಂದಿಗೆ ಹಣಕಾಸು ಸಂಸ್ಥೆಗಳು ವ್ಯವಹರಿಸುವ ರೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿವೆ. ಈ ನಿಯಮಗಳು ಎಲ್ಲಾ ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು (NBFCs) ಮತ್ತು ಆರ್‌ಬಿಐ ವ್ಯಾಪ್ತಿಗೆ ಬರುವ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಅನ್ವಯವಾಗಲಿವೆ.

ಸಮಯದ ಮಿತಿ ಮತ್ತು ವರ್ತನೆ:

ಸಮಯ: ರಿಕವರಿ ಏಜೆಂಟ್‌ಗಳು ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 7:00 ಗಂಟೆಯ ಒಳಗೆ ಮಾತ್ರ ಸಾಲಗಾರರನ್ನು ಸಂಪರ್ಕಿಸಬೇಕು. ಸಾಲಗಾರರೇ ಸ್ವತಃ ಕೋರಿದ ಹೊರತು ಈ ಸಮಯವನ್ನು ಮೀರಬಾರದು.
ಕಿರುಕುಳ ನಿಷೇಧ: ಬೆದರಿಕೆ ಹಾಕುವುದು, ಅಸಭ್ಯ ಭಾಷೆ ಬಳಸುವುದು, ಹೊಸ ನಂಬರ್‌ಗಳಿಂದ ಕರೆ ಮಾಡಿ ಹೆದರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ವಿನಾಯಿತಿಗಳು: ಕುಟುಂಬದಲ್ಲಿ ಸಾವು ಸಂಭವಿಸಿದಾಗ, ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಅಥವಾ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಸಾಲಗಾರರಿಗೆ ತೊಂದರೆ ನೀಡಬಾರದು.
ಮುಂಗಡ ನೋಟಿಸ್ ಕಡ್ಡಾಯ:
ಪೂರ್ವ ಮಾಹಿತಿ: ರಿಕವರಿ ಏಜೆಂಟ್‌ಗಳು ಮನೆಗೆ ಬರುವ ಕನಿಷ್ಠ 1 ದಿನ ಮುಂಚಿತವಾಗಿ ಸಾಲಗಾರರಿಗೆ ಮಾಹಿತಿ ನೀಡಬೇಕು.
ಗುರುತಿನ ಚೀಟಿ: ಏಜೆಂಟ್‌ಗಳು ಕಡ್ಡಾಯವಾಗಿ ಗುರುತಿನ ಚೀಟಿ, ಬ್ಯಾಂಕ್ ನೀಡಿರುವ ಅಧಿಕೃತ ಪತ್ರ (Authorization Letter) ಮತ್ತು ಸಂಬಂಧಿತ ನೋಟಿಸ್ ಹೊಂದಿರಬೇಕು.
ಭೇಟಿಯಾಗುವ ಸ್ಥಳ: ಯಾವ ಸ್ಥಳದಲ್ಲಿ ಭೇಟಿಯಾಗಬೇಕು ಎಂಬುದನ್ನು ಆಯ್ಕೆ ಮಾಡುವ ಹಕ್ಕು ಸಾಲಗಾರರಿಗೆ ಇರುತ್ತದೆ.
ಸೋಶಿಯಲ್ ಮೀಡಿಯಾ ಕಿರುಕುಳಕ್ಕೆ ಬ್ರೇಕ್:
ಸಾಮಾಜಿಕ ಜಾಲತಾಣಗಳಲ್ಲಿ ಸಾಲಗಾರರ ಫೋಟೋ, ವಿಡಿಯೋ ಅಥವಾ ಆಡಿಯೋಗಳನ್ನು ಹಾಕಿ ಬಹಿರಂಗವಾಗಿ ಅವಮಾನಿಸುವುದು ಗಂಭೀರ ಅಪರಾಧ.
ಡೇಟಾ ಪ್ರೈವಸಿ: ಸಾಲಗಾರರ ವೈಯಕ್ತಿಕ ವಿವರಗಳ ದುರುಪಯೋಗವಾದರೆ ಅದಕ್ಕೆ ಬ್ಯಾಂಕ್‌ಗಳೇ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ.
ಫೋನ್/ಡಿಜಿಟಲ್ ಸಾಧನಗಳ ಲಾಕಿಂಗ್ ನಿಯಮಗಳು:
ನಿರ್ದಿಷ್ಟ ಸಾಲಗಳಿಗೆ ಮಾತ್ರ: ಸ್ಮಾರ್ಟ್‌ಫೋನ್, ಟ್ಯಾಬ್, ಲ್ಯಾಪ್‌ಟಾಪ್ ಖರೀದಿಸಲು ಪಡೆದ ಸಾಲದ ಇಎಂಐ ಪಾವತಿಸದಿದ್ದರೆ ಮಾತ್ರ ಆ ಸಾಧನವನ್ನು ರಿಮೋಟ್ ಆಗಿ ಲಾಕ್ ಮಾಡುವ ಹಕ್ಕಿರುತ್ತದೆ. ಸಾಮಾನ್ಯ ವೈಯಕ್ತಿಕ ಸಾಲಗಳಿಗೆ (Personal Loans) ಇವುಗಳನ್ನು ಲಾಕ್ ಮಾಡುವಂತಿಲ್ಲ.
ಸಮಯದ ಮಿತಿ: ಇಎಂಐ ಬಾಕಿ ಬಿದ್ದ 30 ದಿನಗಳ ನಂತರವಷ್ಟೇ ಭಾಗಶಃ ನಿಯಂತ್ರಣ ವಿಧಿಸಬೇಕು. 60 ದಿನಗಳು ಕಳೆದರೆ ಮಾತ್ರ ಸಂಪೂರ್ಣವಾಗಿ ಲಾಕ್ ಮಾಡಬಹುದು.
ತುರ್ತು ಸೇವೆಗಳು: ಫೋನ್ ಲಾಕ್ ಮಾಡಿದರೂ ಇನ್‌ಕಮಿಂಗ್ ಕರೆಗಳು, ಎಸ್‌ಎಂಎಸ್ ಮತ್ತು ತುರ್ತು ಸೇವೆಗಳು ಕೆಲಸ ಮಾಡಬೇಕು. ಗಿಗ್ ಕಾರ್ಮಿಕರ (ಡೆಲಿವರಿ ಬಾಯ್ಸ್, ಕ್ಯಾಬ್ ಡ್ರೈವರ್ಸ್) ಜೀವನೋಪಾಯಕ್ಕೆ ಅಗತ್ಯವಿರುವ ಆಪ್‌ಗಳು ಲಭ್ಯವಿರಬೇಕು.
ವಿಳಂಬ ಶುಲ್ಕ ಪರಿಹಾರ: ಬಾಕಿ ಹಣ ಪಾವತಿಸಿದ 1 ಗಂಟೆಯೊಳಗೆ ಲಾಕ್ ತೆರವುಗೊಳಿಸಬೇಕು. ವಿಳಂಬವಾದರೆ, ಪ್ರತಿ ಗಂಟೆಗೆ ₹250 ರಂತೆ ಬ್ಯಾಂಕ್‌ಗಳು ಸಾಲಗಾರನಿಗೆ ಪರಿಹಾರ ನೀಡಬೇಕಾಗುತ್ತದೆ.
ಬ್ಯಾಂಕ್‌ಗಳಿಗೇ ಸಂಪೂರ್ಣ ಹೊಣೆ:
ವಸೂಲಾತಿ ಪ್ರಕ್ರಿಯೆಯನ್ನು ಬೇರೆ ಏಜೆನ್ಸಿಗಳಿಗೆ ನೀಡಿದ್ದರೂ, ಯಾವುದೇ ನಿಯಮ ಉಲ್ಲಂಘನೆಯಾದರೆ ಬ್ಯಾಂಕ್‌ಗಳೇ ಸಂಪೂರ್ಣ ಹೊಣೆ ಹೊರಬೇಕು.
ಪ್ರತಿ ರಿಕವರಿ ಕರೆಯನ್ನು ರಿಕಾರ್ಡ್ ಮಾಡಬೇಕು ಮತ್ತು ಆ ಮಾಹಿತಿಯನ್ನು ಕನಿಷ್ಠ 6 ತಿಂಗಳ ಕಾಲ ಭದ್ರವಾಗಿಡಬೇಕು. ಏಜೆಂಟ್‌ಗಳಿಗೆ ಸರಿಯಾದ ತರಬೇತಿ ನೀಡಬೇಕು.
















