ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಬಳಿಕ ಅಸಮಾಧಾನದ ಹೊಗೆ ಕಾಣಿಸಿಕೊಂಡಿದ್ದು, ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಸಚಿವ ಸ್ಥಾನ ರಾಜೀನಾಮೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.ಖಾತೆ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲದ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಅವರೊಂದಿಗೆ ತಡರಾತ್ರಿ ಒನ್-ಟು-ಒನ್ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಸಂಧಾನ ಸಭೆಯಲ್ಲಿ ಪ್ರಮುಖವಾಗಿ ಬೆಂಗಳೂರು ಅಭಿವೃದ್ಧಿ ಖಾತೆ ಕುರಿತೇ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ರಾಮಲಿಂಗಾರೆಡ್ಡಿ ಅವರು ಈ ಖಾತೆ ನೀಡಬೇಕೆಂಬ ಬೇಡಿಕೆಯಲ್ಲಿ ಅಚಲವಾಗಿದ್ದು, ತಮ್ಮ ನಿಲುವಿನಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ ಎನ್ನಲಾಗಿದೆ.
ಸಭೆಯಲ್ಲೂ ಅವರು ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದಿದ್ದು, ಇದೇ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪರಿಸ್ಥಿತಿಯನ್ನು ಶಮನಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಖಾತೆ ಬದಲಾವಣೆ ಕುರಿತು ಪಕ್ಷದ ಹೈಕಮಾಂಡ್ ಜೊತೆ ಚರ್ಚೆ ನಡೆಸುವುದಾಗಿ ರಾಮಲಿಂಗಾರೆಡ್ಡಿ ಅವರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಖಾತೆ ಹಂಚಿಕೆ ಅಥವಾ ಬದಲಾವಣೆ ಕುರಿತ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳಲಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂಬ ಸಂದೇಶವನ್ನು ಸಿಎಂ ರವಾನಿಸಿದ್ದಾರೆ ಎನ್ನಲಾಗಿದೆ.
ಈಗ ಎಲ್ಲರ ಗಮನ ದೆಹಲಿಯತ್ತ ನೆಟ್ಟಿದ್ದು, ಹೈಕಮಾಂಡ್ ರಾಮಲಿಂಗಾರೆಡ್ಡಿ ಅವರ ಬೇಡಿಕೆಗೆ ಮನ್ನಣೆ ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದು ಕುತೂಹಲ ಮೂಡಿಸಿದೆ.
ಒಂದು ವೇಳೆ ಬೇಡಿಕೆ ಈಡೇರದಿದ್ದರೆ ರಾಮಲಿಂಗಾರೆಡ್ಡಿ ತಮ್ಮ ನಿಲುವನ್ನು ಮುಂದುವರಿಸುತ್ತಾರೆಯೇ ಅಥವಾ ಪಕ್ಷದ ಶಿಸ್ತು ಪಾಲಿಸಿ ಹಿಂದೆ ಸರಿಯುತ್ತಾರೆಯೇ ಎಂಬ ಪ್ರಶ್ನೆಗಳು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಬೆಂಗಳೂರು ಅಭಿವೃದ್ಧಿ ಖಾತೆ ಸುತ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ನಾಯಕರು ನಡೆಸುತ್ತಿರುವ ಸಂಧಾನ ಸಭೆಗಳು ಹಾಗೂ ಹೈಕಮಾಂಡ್ ನಿರ್ಧಾರದ ನಿರೀಕ್ಷೆ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಿವೆ. ಮುಂದಿನ ಕೆಲವು ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳುವ ತೀರ್ಮಾನವೇ ಈ ಬೆಳವಣಿಗೆಗಳಿಗೆ ಅಂತಿಮ ರೂಪ ನೀಡುವ ಸಾಧ್ಯತೆ ಇದೆ.









