ಸುದ್ದಿಒನ್, ಚಿತ್ರದುರ್ಗ, ಮೇ 22: ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಂದು ಮುಂಜಾನೆಯಿಂದಲೇ ಉತ್ತಮ ಮಳೆಯಾಗಿದ್ದು, ಒಣಗುತ್ತಿದ್ದ ಭೂಮಿಗೆ ತಂಪೆರೆದಿದೆ.
ಇಂದು ಬೆಳಿಗ್ಗೆ 4 ಗಂಟೆಯಿಂದಲೇ ಜಿಲ್ಲೆಯಾದ್ಯಂತ ಮಳೆ ಆರಂಭವಾಗಿದ್ದು, ಸುಮಾರು 5 ಗಂಟೆಯವರೆಗೆ ಮಳೆಯ ಆರ್ಭಟ ಜೋರಾಗಿತ್ತು. ತದನಂತರವೂ ಜಿಲ್ಲೆಯ ಹಲವೆಡೆ ಬಿಡದೆ ಜಿಟಿಜಿಟಿ ಮಳೆ ಮುಂದುವರಿದಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ. ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ಬೆಳ್ಳಂಬೆಳಿಗ್ಗೆ ಎದ್ದು ಕೆಲಸ ನಿರ್ವಹಿಸುವ ಶ್ರಮಿಕರು ತೊಂದರೆ ಅನುಭವಿಸಿದರು. ಮುಖ್ಯವಾಗಿ ಸೊಪ್ಪು-ತರಕಾರಿ, ಹಾಲು ಮತ್ತು ಹಣ್ಣು ಮಾರಾಟ ಮಾಡುವ ವ್ಯಾಪಾರಿಗಳು ಹಾಗೂ ದಿನಪತ್ರಿಕೆ ವಿತರಕರು ಮಳೆಯಲ್ಲಿಯೇ ಕೆಲಸ ಮಾಡಬೇಕಾಗಿ ಬಂದಿದ್ದರಿಂದ ತೀವ್ರ ಪರದಾಡುವಂತಾಯಿತು.
ಈ ಮಳೆಯು ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಸಂತಸ ಮೂಡಿಸಿದ್ದು, ಅವರು ನಿಟ್ಟುಸಿರು ಬಿಡುವಂತೆ ಮಾಡಿದೆ. ಮಳೆಯ ಕೊರತೆಯಿಂದ ಕಂಗಾಲಾಗಿದ್ದ ರೈತರಿಗೆ ಈ ಮುಂಗಾರು ಪೂರ್ವ ಮಳೆ ಸಂಜೀವಿನಿಯಾಗಿದ್ದು, ಕೃಷಿ ಚಟುವಟಿಕೆಗಳು ಮತ್ತೆ ಚುರುಕುಗೊಳ್ಳಲಿವೆ.
ಹವಾಮಾನ ಇಲಾಖೆಯ ಮುನ್ಸೂಚನೆಗಳ ಪ್ರಕಾರ, ಜಿಲ್ಲೆಯಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ, ಈ ಮಳೆ ಸಾರ್ವಜನಿಕರಿಗೆ ಕೊಂಚ ತೊಂದರೆ ನೀಡಿದರೂ, ಅನ್ನದಾತನ ಮುಖದಲ್ಲಿ ಮಾತ್ರ ಮಂದಹಾಸ ಮೂಡಿಸಿದೆ.










