ಬೆಂಗಳೂರು: ಅಪ್ಪು ಇನ್ನಿಲ್ಲ ಅನ್ನೋ ಸತ್ಯವನ್ನ ಒಪ್ಪಿಕೊಳ್ಳಲೇಬೇಕು. ಯಾಕಂದ್ರೆ ಇಂದು ಬೆಳಗ್ಗೆವರೆಗೂ ಇದ್ದ ಅಪ್ಪು ಪಾರ್ಥಿವ ಶರೀರವೂ ಕಣ್ಮುಂದೆ ಇಲ್ಲ. ಎಲ್ಲಾ ಕಾರ್ಯವೂ ಮುಗಿದಿದೆ. ಆದ್ರೆ ಅಭಿಮಾನಿಗಳ ಮನದಲ್ಲಿ ಇನ್ನು ಆ ಗೊಂದಲ ಹಾಗೇ ಇದೆ. ನಿಜವಾಗಿಯೂ ಅಪ್ಪುನಾ ಕಳೆದುಕೊಂಡಿದ್ದು ನಾವೂ ಅನ್ನೋ ದುಃಖ.
ಎಲ್ಲಾ ಕಾರ್ಯಗಳು ಮುಗಿದ ಮೇಲೆ ರಾಘವೇಂದ್ರ ರಾಜ್‍ಕುಮಾರ್ ಮಾತನಾಡಿದ್ದು, ಭಾವುಕರಾಗಿದ್ದಾರೆ. ಅಪ್ಪು ಇಷ್ಟು ದಿನ ಅಪ್ಪ-ಅಮ್ಮನ ಪೂಜೆ ಮಾಡೋದಕ್ಕೆ ಕರೆದುಕೊಂಡು ಬರುತ್ತಿದ್ದ. ಉಷ್ಟು ಬೇಗ ಅವನು ಹೋಗ್ತಾನೆ ಅಂತ ಗೊತ್ತಿರಲಿಲ್ಲ. ಅಪ್ಪ-ಅಮ್ಮನ ಜೊತೆಗೆ ಅವನ ಪೂಜೆಯನ್ನು ಮಾಡಬೇಕು ಎಂದು ದುಃಖಿತರಾಗಿದ್ದಾರೆ.
ನಮ್ಮ ಕೊನೆಯುಸಿರು ಇರುವವರೆಗೂ ಈ ನೋವಿನ ಭಾರ ಮನದಲ್ಲೇ ಇರುತ್ತೆ. ಅಪ್ಪು ನಮಗಿಂತ ಹೆಚ್ಚಾಗಿ ಅಪ್ಪ ಅಮ್ಮನನ್ನ ಇಷ್ಟಪಟ್ಟಿದ್ದಾನೆ. ಅದಕ್ಕೆ ಅವರ ಬಳಿ ಬೇಗ ಹೋಗಿದ್ದಾನೆ. ಅವನನ್ನ ಮೆರವಣಿಗೆ ಮಾಡಿ ಕರೆ ತರಬೇಕೆಂಬ ಆಸೆ ನಮಗೂ ಇತ್ತು. ಆದ್ರೆ ನಮ್ಮಿಂದ ಬೇರೆಯವರಿಗೆ ತೊಂದರೆಯಾಗಬಾರದು. ಅಪ್ಪಾಜಿ-ಅಮ್ಮ ಹೋದಾಗ ನಡೆದ ಘಟನೆ ಇನ್ನು ನೆನಪಿದೆ. ಅದಕ್ಕೆ ದಾರಿ ಮಾಡಿಕೊಡಬಾರದು ಅಂತ ಈ ನಿರ್ಧಾರಕ್ಕೆ ಬಂದ್ವಿ. ಕಳೆದ ಮೂರು ದಿನಗಳಿಂದಲೂ ಅಭಿಮಾನಿಗಳು, ಮಾಧ್ಯಮದವರು ಮತ್ತು ಪೊಲೀಸರು ಶಾಂತಿ ಕಾಪಾಡಿದ್ದೀರಿ. ನನ್ನ ಕಡೆಯಿಂದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.