ಬರಹಗಾರರಿಗೆ ವೇದಿಕೆ ಒದಗಿಸುವುದರಿಂದ ಆತ್ಮವಿಶ್ವಾಸ ಮೂಡಿಸಿದಂತಾಗುತ್ತದೆ : ಡಾ.ಲೋಕೇಶ್‍ ಅಗಸನಕಟ್ಟೆ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್. 22 : ಬೇರೆಯವರಿಗಿಂತ ನಾನು ಹೇಗೆ ಭಿನ್ನವಾಗಿ ಬರಬೇಕೆಂಬುದು ಬರಹಗಾರರ ಮುಂದಿರುವ ಸವಾಲು ಎಂದು ಕವಿ ಡಾ.ಲೋಕೇಶ್‍ ಅಗಸನಕಟ್ಟೆ ತಿಳಿಸಿದರು.

ಬಿಸಿ ಸುದ್ದಿ ನ್ಯೂಸ್ ಪೋರ್ಟಲ್ ಚಿತ್ರದುರ್ಗ ವತಿಯಿಂದ ಐ.ಎಂ.ಎ. ಹಾಲ್‍ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕೋಟೆ ನಾಡಿನ ಕವಿ ಕಾವ್ಯ ಪರಿಚಯ ಕವಿಗಳ ಸಮ್ಮಿಲನ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ಪ್ರತಿಭೆಗಳನ್ನು ಶೋಧಿಸಿ ಬರಹಗಾರರಿಗೆ ವೇದಿಕೆ ಒದಗಿಸುವುದರಿಂದ ಆತ್ಮವಿಶ್ವಾಸ ಮೂಡಿಸಿದಂತಾಗುತ್ತದೆ. ಬೆಂಬಲ, ಪ್ರೇರಣೆ, ಪ್ರೋತ್ಸಾಹವಿಲ್ಲದೆ ಯಾವ ಕವಿಯೂ ತಾನಾಗಿಯೇ ಬೆಳೆದಿರುವುದು ತುಂಬಾ ಕಡಿಮೆ. ಬರವಣಿಗೆಯನ್ನು ಸಿದ್ದಿಸಿಕೊಂಡು ಬರೆದಾಗ ಮಾತ್ರ ಸಾಹಿತ್ಯದಲ್ಲಿ ಸೃಜನಶೀಲತೆಗೆ ಅರ್ಥ ಬರುತ್ತದೆ. ಬರಹಗಾರರಿಗೆ ಅಧ್ಯಯನ ಮುಖ್ಯ. ಕವಿತೆ, ಬರಹಗಳನ್ನು ಓದುತ್ತಿದ್ದೇನಾ, ಓದಿದ್ದು, ಅರ್ಥವಾಗುತ್ತಿದೆಯಾ ಎನ್ನುವ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಬಸವಣ್ಣ, ಅಕ್ಕಮಹಾದೇವಿ ಇವರುಗಳು ತಲ್ಲಣ ಅನುಭವಿಸಿದ್ದಾರೆ. ಭಾವನೆಗಳನ್ನು ಅಭಿವ್ಯಕ್ತಿಗೊಳಿಸಬೇಕೆಂದು ಹೇಳಿದರು.

ಕವಿತೆಗೆ ಹೊರಮೈ, ಒಳಮೈ ಇರುತ್ತದೆ. ಬರವಣಿಗೆಯಲ್ಲಿ ಹೊಸತನ ಕಾಣಬೇಕು. ಕವಿತೆ ಮೌನವಾಗಿರುವುದರ ಕಡೆ ಗಮನ ಕೊಡಬೇಕು. ಓದಿದವರಿಗೆ ಮೌನ ಮಾತಾಗಬೇಕು. ವ್ಯಕ್ತಿತ್ವದಂತೆ ಬರಹಗಳಿರುತ್ತವೆ. ಒಳ್ಳೆಯವರಾದರೆ ಒಳ್ಳೆ ಕವಿತೆ ಬರೆಯುತ್ತಾರೆ. ಬರಹಗಾರ ಸ್ವಯಂ ವಿಮರ್ಶೆಗೊಳಪಡಿಸಿಕೊಳ್ಳದಿದ್ದರೆ ಬರೆಯಲು ಆಗುವುದಿಲ್ಲ. ಅರ್ಥಾಂತರ ವಿನ್ಯಾಸವಾಗಬಹುದಾದ ಕವಿತೆಗಳನ್ನು ಬರೆಯಬೇಕು. ಮಾತಿನಿಂದ ಮೌನಗಳ ಕವಿತೆಯನ್ನು ಕಟ್ಟಬೇಕೆಂದರು. ಸಾಹಿತಿ ಬಿ.ತಿಪ್ಪಣ್ಣ ಮರಿಕುಂಟೆ ಅಧ್ಯಕ್ಷತೆ ವಹಿಸಿದ್ದರು. ಪರಮೇಶ್ವರಪ್ಪ ಕುದುರಿ, ಶಿಕ್ಷಕ ಮಹೇಶ್ ವೇದಿಕೆಯಲ್ಲಿದ್ದರು. ಹುರುಳಿ ಬಸವರಾಜ್, ಷರೀಫಾಬಿ, ಡಾ.ಗೌರಮ್ಮ, ಚಾಂದಿನಿ, ಜಿ.ಎಸ್.ಉಜ್ಜಿನಪ್ಪ ಸೇರಿದಂತೆ ಅನೇಕ ಕವಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *