ರಾಯಚೂರು: ಮಹೇಶ್ ತಿಮರೋಡಿ ಸದ್ಯ ದಕ್ಚಿಣ ಕನ್ನಡದ ಬೆಳ್ತಂಗಡಿಯಲ್ಲಿದ್ದಾರೆ. ಆದ್ರೆ ಅವರನ್ನ ರಾಯಚೂರಿನ ಮಾನ್ವಿಗೆ ಗಡಿಪಾರು ಮಾಡಲಾಗಿದೆ. ಆದ್ರೆ ರಾಯಚೂರಿನ ಜನತೆ ಇದನ್ನ ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ. ನಮ್ಮ ಜಿಲ್ಲೆಗೆ ಯಾವುದೇ ಕಾರಣಕ್ಕೂ ಅವರನ್ನು ಕಳುಹಿಸಬೇಡಿ ಅಂತಾನೇ ಮನವಿ ಮಾಡಿಕೊಳ್ಳುತ್ತಿದ್ದಾರೆ. ದಲಿತ ಸೇನೆ ಹಾಗೂ ಸಮಾನ ಮನಸ್ಕರ ವೇದಿಕೆಯಿಂದ ವಿರೋಧ ವ್ಯಕ್ತವಾಗಿದೆ. ರಾಯಚೂರಿಗೆ ಕಳುಹಿಸುವ ಬದಲು ಯಾವುದಾದರೂ ಕಾಡಿಗೆ ಕಳುಹಿಸಿ ಬಿಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಹೇಶ್ ತಿಮರೋಡಿ ಸೌಜನ್ಯ ಪ್ರಕರಣದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಮಹೇಶ್ ತಿಮರೋಡಿ ಮೇಲೆ ಸುಮಾರು 32 ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪ ಹೊತ್ತಿದ್ದಾರೆ. ಈ ಬೆನ್ನಲ್ಲೇ ನಿನ್ನೆ ಮಹೇಶ್ ತಿಮರೋಡಿಯನ್ನ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಗಡಿಪಾರು ಮಾಡಿ, ಪುತ್ತೂರು ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದರು. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿತ್ತು.
ಒಂದು ವರ್ಷದ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು. ಈ ಆದೇಶ ರಾಯಚೂರು ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ. ನಮ್ಮ ರಾಯಚೂರು ಜಿಲ್ಲೆಯಲ್ಲಿ ಗೂಂಡಾಗಳಿಗೆ ಜಾಗವಿಲ್ಲ. ಬೇಕಾದರೆ ಮಹೇಶ್ ತಿಮರೋಡಿಯನ್ನ ಕಾಡಿಗೆ ಕಳುಹಿಸಿ ಎಂದಿದ್ದಾರೆ. ಈ ಸಂಬಂಧ ನಾಳೆ ಬೆಳಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆಯನ್ನೇ ಹಮ್ಮಿಕೊಂಡಿದ್ದಾರೆ. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನೆಯ ಬಳಿಕ ತಿಮರೋಡಿಯನ್ನ ರಾಯಚೂರಿಗೆ ಕಳುಹಿಸುತ್ತಾರಾ ಅಥವಾ ಗಡಿಪಾರು ಆದೇಶ ವಾಪಾಸ್ ತೆಗೆದುಕೊಳ್ಳುತ್ತಾರಾ ಎಂಬುದನ್ನ ನೋಡಬೇಕಿದೆ.















