ಸಮಾಜದಲ್ಲಿ ಜಾಗೃತಿ ಮೂಡಿಸಲು ಹಿಂದೂ ಸಂಗಮದಂತಹ ಕಾರ್ಯಕ್ರಮಗಳು ಅಗತ್ಯ : ಶ್ರೀಕಾಂತ್ ಶೆಟ್ಟಿ

3 Min Read

 

ವರದಿ ಮತ್ತು ಫೋಟೋ ಕೃಪೆ
ವೇದಮೂರ್ತಿ. ಎಂ.
ಭೀಮಸಮುದ್ರ, ಚಿತ್ರದುರ್ಗ (ತಾ)
ಮೊ : 8088076203

 

ಸುದ್ದಿಒನ್, ಚಿತ್ರದುರ್ಗ ಫೆ. 04 :
ಭಾರತದ ಶಕ್ತಿಯ ಹಿಂದಿರುವುದು ಆರ್‍ಎಸ್‍ಎಸ್ ಸ್ವಯಂಸೇವಕರ ತ್ಯಾಗ ಮತ್ತು ಬಲಿದಾನ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಯುವ ಭಗವಾಯಿಗಳು ಹಾಗೂ ಸಮಾಜ ಕಾರ್ಯಕರ್ತರಾದ ಶ್ರೀಕಾಂತ್ ಶೆಟ್ಟಿ (ಕಾರ್ಕಳ) ತಿಳಿಸಿದರು.
ಭೀಮಸಮುದ್ರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು, ಆರ್‍ಎಸ್‍ಎಸ್ ಸ್ವಯಂಸೇವಕ ಸಂಘವು ನೂರು ವರ್ಷಗಳ ತ್ಯಾಗ, ಬಲಿದಾನ ಮತ್ತು ಶ್ರಮದ ಮೂಲಕ ದೇಶದಲ್ಲಿ ರಾಷ್ಟ್ರೀಯ ಚೈತನ್ಯವನ್ನು ಬೆಳೆಸಿದೆ. ಸಂಘದ ಪ್ರಚಾರಕರು ಮನೆಮಠ ತ್ಯಜಿಸಿ ಒಂದು ಜೋಳಿಗೆ ಹಿಡಿದು ಬರಿಗಾಲಿನಲ್ಲಿ ದೇಶಾದ್ಯಂತ ಸಂಚರಿಸಿ ಭಾರತಮಾತೆಯ ವೈಭವಕ್ಕಾಗಿ ಶ್ರಮಿಸಿದ್ದಾರೆ. ಆ ತ್ಯಾಗದ ಫಲವಾಗಿಯೇ ಇಂದು “ನಮಸ್ತೇ ಸದಾ ವತ್ಸಲೇ” ಎಂಬ ಮೌಲ್ಯಗಳನ್ನು ಅಳವಡಿಸಿಕೊಂಡ ಧೀಮಂತ ನಾಯಕ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯ ಕುರ್ಚಿಯಲ್ಲಿ ಕುಳಿತಿದ್ದಾರೆ ಎಂದು ಹೇಳಿದರು.

ಹಿಂದಿನ ದಿನಗಳಲ್ಲಿ ಭಾರತದ ರಾಜಕಾರಣಿಗಳು ಪಾಕಿಸ್ತಾನಕ್ಕೆ ಭಯಪಟ್ಟು, ಅಮೆರಿಕಾದ ಮುಂದೆ ಮಂಡಿಯೂರಿ ಸಹಾಯ ಕೇಳುತ್ತಿದ್ದ ಕಾಲವಿತ್ತು. ಆದರೆ ಇಂದು ಭಾರತ ತನ್ನ ಶಕ್ತಿಯಿಂದಲೇ ನೇರವಾಗಿ ಜಾಗತಿಕ ಮಟ್ಟದಲ್ಲಿ ಮಾತಾಡುತ್ತಿದೆ. ಅಮೆರಿಕಾದ ತೆರಿಗೆ ನೀತಿಯಲ್ಲಿ ಬದಲಾವಣೆ ತರಲು ಭಾರತ ಕಾರಣವಾಗಿದ್ದು, ಇದು ನಮ್ಮ ದೇಶದ ತಾಕತ್ತಿನ ಸಾಕ್ಷಿ ಎಂದು ಅಭಿಪ್ರಾಯಪಟ್ಟ ಶೆಟ್ಟಿ ಅಮೆರಿಕಾದಿಂದ ಅಡಿಕೆ ಎಲೆ ಹಾಗೂ ಸುಳ್ಳಪಟ್ಟೆ ನಿಷೇಧದಿಂದ ಸುಮಾರು 2000 ಕೋಟಿ ರೂಪಾಯಿ ವ್ಯಾಪಾರಕ್ಕೆ ಧಕ್ಕೆಯಾಗಿದೆ. ಚಿತ್ರದುರ್ಗದ ಮದಕರಿ ನಾಯಕನ ಶೌರ್ಯವನ್ನು ಸ್ಮರಿಸಿ, ಹೈದರಾಲಿ ಸೇನೆಯನ್ನು ಧ್ವಂಸಗೊಳಿಸಿದ ಈ ಪವಿತ್ರ ಮಣ್ಣಿನಲ್ಲಿ ಹಾಗೂ ಭೀಮಸಮುದ್ರ ಗ್ರಾಮದಲ್ಲಿ ಇಂತಹ ಕಾರ್ಯಕ್ರಮ ನಡೆದಿರುವುದು ವಿಶೇಷವೆಂದರು.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಬಂಜಾರ ಗುರು ಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿಗಳು ಮಾತನಾಡಿ, ಯೋಗಯುಕ್ತ ಹಾಗೂ ರೋಗಮುಕ್ತ ಜೀವನದ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಿದ ದೇಶ ಭಾರತ ಎಂದು ಹೆಮ್ಮೆಯಿಂದ ಹೇಳಿದರು. “ದೇಶ ನಮಗೆ ಏನು ಕೊಡುತ್ತದೆ ಎನ್ನುವುದಕ್ಕಿಂತ, ದೇಶಕ್ಕೆ ನಾವು ಏನು ಕೊಡಬೇಕು ಎನ್ನುವುದು ಮುಖ್ಯ” ಎಂದು ತಿಳಿಸಿದರು. ನಿಜವಾದ ಹಿಂದೂ ಸಂಸ್ಕೃತಿ ಮತ್ತು ಗುರುಪರಂಪರೆ ಭಾರತದಲ್ಲಿದೆ. ಈ ಕಾರಣಕ್ಕಾಗಿ ಅನೇಕ ದೇಶಭಕ್ತರು ಇಲ್ಲಿ ಜನ್ಮ ತಾಳಿದ್ದಾರೆ. ಬಂಜಾರ ಸಮುದಾಯದವರು ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಎಸ್. ಅನಿತ್ ಕುಮಾರ್ ಮಾತನಾಡಿ, ಹಿಂದೂಗಳು ಇರುವ ದೇಶವೇ ಭಾರತ. ಹಿಂದೂಗಳು ಭಾರತವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗಲು ಸಾಧ್ಯವಿಲ್ಲ, ಆದ್ದರಿಂದ ಹಿಂದೂಗಳು ಒಟ್ಟಾಗಿ ನಿಲ್ಲಬೇಕು ಎಂದರು. ಹಿಂದೂ ಧರ್ಮ ರಾಮಾಯಣ ಮತ್ತು ಮಹಾಭಾರತವನ್ನು ನೀಡಿದೆ. ಇದು ಕೇವಲ ಪೂಜೆ-ಪುನಸ್ಕಾರವಲ್ಲ; ಪ್ರಕೃತಿಯೊಂದಿಗೆ ಜೀವನ ನಡೆಸುವ ಶೈಲಿಯಾಗಿದೆ ಎಂದು ವಿವರಿಸಿದರು.

ಬ್ರಿಟಿಷರು ಮತ್ತು ಮೊಘಲರು ನಮ್ಮ ದೇಶದ ಸಂಪತ್ತನ್ನು ದೋಚಿಕೊಂಡು ಹೋದ ಇತಿಹಾಸವಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುತ್ತಿದ್ದು, ಯುವಕರು ಮೊಬೈಲ್‍ಗೆ ಸೀಮಿತರಾಗುತ್ತಿದ್ದಾರೆ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಎಲ್ಲರ ಹೊಣೆ ಎಂದು ಹೇಳಿದರು.

ಸಂಜೆ 4:30ಕ್ಕೆ ಈಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭಗೊಂಡಿತು. ಭಾರತಮಾತೆಯ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಇಡಲಾಗಿತ್ತು. ವೀರಗಾಸೆ, ಚಮ್ಮಳ ಹಾಗೂ ಮಹಿಳೆಯರ ತಪ್ಪಡೆ ವಾದ್ಯಗಳೊಂದಿಗೆ ಜನರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶ್ರೀಮತಿ ಶಾಂತ ಅಶೋಕ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಭಾರತಮಾತೆಯ ಭಾವಚಿತ್ರಕ್ಕೆ ಹೂ ಹಾಕುವ ಮೂಲಕ ಚಾಲನೆ ನೀಡಲಾಯಿತು. ಬೊಮ್ಮೇನಹಳ್ಳಿ ಹಾಗೂ ಭೀಮಸಮುದ್ರ ಹಿಂದೂ ಸಂಘಟನೆಯ ಕಾರ್ಯಕರ್ತರು, ಗ್ರಾಮಸ್ಥರು ಹಾಗೂ ಬಂಜಾರ ಸಮುದಾಯದ ಮಹಿಳೆಯರು ಪರಂಪರ ವೇಷಭೂಷಣದಲ್ಲಿ ಭಾಗವಹಿಸಿದ್ದರು. ಗ್ರಾಮದ ಮಕ್ಕಳು ಭಾರತಮಾತೆಯ ವೇಷಧರಿಸಿ ನೃತ್ಯ ಪ್ರದರ್ಶಿಸಿದರು.

Share This Article
Enable Notifications OK No thanks