Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶ್ರೀರಾಮರ ಬಗ್ಗೆ ಪ್ರೊ. ಕೆ.ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ; ಹರಿಹರ ಕಾರ್ಯಕ್ರಮದಲ್ಲಿ ಹೊಸ ಚರ್ಚೆಗೆ ಕಾರಣ

---Advertisement---

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾಹಿತಿ ಹಾಗೂ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಅವರು ಶ್ರೀರಾಮನ ಕುರಿತು ನೀಡಿದ ಹೇಳಿಕೆ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಹಿಂದೂಗಳ ಆರಾಧ್ಯ ದೈವವಾದ ಶ್ರೀರಾಮಚಂದ್ರರ ಜನನ ಮತ್ತು ರಾಮಾಯಣದ ಕೆಲವು ಪ್ರಸಂಗಗಳ ಬಗ್ಗೆ ಮಾತನಾಡಿದ ಅವರು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಇದೀಗ ಆ ಹೇಳಿಕೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.

ಹರಿಹರದ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಗವಾನ್, ತಾವು ಬರೆದಿರುವ “ರಾಮ ಮಂದಿರ ಏಕೆ ಬೇಕು?” ಕೃತಿಯಲ್ಲಿ ಉಲ್ಲೇಖಿಸಿರುವ ವಿಚಾರಗಳನ್ನು ಪ್ರಸ್ತಾಪಿಸಿದರು. ತಮ್ಮ ಅಭಿಪ್ರಾಯಗಳಿಗೆ ಆಧಾರವಾಗಿ ವಾಲ್ಮೀಕಿ ರಾಮಾಯಣದ ಉಲ್ಲೇಖಗಳನ್ನೇ ಬಳಸಿದ್ದೇನೆ ಎಂದು ಅವರು ಹೇಳಿದರು.ಇದೇ ವೇಳೆ ರಾಮಾಯಣದ ಕೆಲವು ಪಾತ್ರಗಳು ಮತ್ತು ಘಟನೆಗಳ ಕುರಿತು ತಮ್ಮ ವ್ಯಾಖ್ಯಾನವನ್ನು ನೀಡಿದ ಅವರು, ಶಂಭೂಕ, ಸೀತೆ ಹಾಗೂ ಲಕ್ಷ್ಮಣನ ಪ್ರಸಂಗಗಳನ್ನು ಉಲ್ಲೇಖಿಸಿ ಪ್ರಶ್ನೆಗಳನ್ನು ಎತ್ತಿದರು. ಸಮಾಜವು ಅಂಧನಂಬಿಕೆಗಳಿಂದ ದೂರವಾಗಿ ಸ್ವತಂತ್ರ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮನಸೃತಿ ಮತ್ತು ಜಾತಿ ವ್ಯವಸ್ಥೆಯ ಕುರಿತೂ ಮಾತನಾಡಿದ ಭಗವಾನ್, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟವನ್ನು ಶ್ಲಾಘಿಸಿದರು. “ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ದೊರಕಿದರೂ, ಸಾಮಾಜಿಕ ಸಮಾನತೆಗಾಗಿ ಅಂಬೇಡ್ಕರ್ ಮಹತ್ವದ ಹೋರಾಟ ನಡೆಸಿದರು” ಎಂದು ಹೇಳಿದರು.ಮದುವೆ ಸಂಪ್ರದಾಯಗಳ ಬಗ್ಗೆ ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡ ಅವರು, ಮಂತ್ರಗಳ ಅರ್ಥ ತಿಳಿಯದೆ ಆಚರಣೆಗಳನ್ನು ಅನುಸರಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ತಮ್ಮ ಮದುವೆಗೆ ಪುರೋಹಿತರನ್ನು ಆಹ್ವಾನಿಸದಂತೆ ತಂದೆಯವರಿಗೆ ಹೇಳಿದ್ದನ್ನು ನೆನಪಿಸಿಕೊಂಡರು.

ಇದರ ಜೊತೆಗೆ ಸ್ವಾಮಿ ವಿವೇಕಾನಂದರು ಮತ್ತು ಬೌದ್ಧ ಧರ್ಮ ಕುರಿತೂ ಮಾತನಾಡಿದ ಅವರು, ಬೌದ್ಧ ಧರ್ಮವನ್ನು ವೈಜ್ಞಾನಿಕ ಹಾಗೂ ಮಾನವೀಯ ಧರ್ಮ ಎಂದು ಬಣ್ಣಿಸಿದರು.
ತಮ್ಮ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವವರಿಗೆ ಪ್ರತಿಕ್ರಿಯಿಸಿದ ಭಗವಾನ್, “ನನ್ನ ವಿರುದ್ಧ ಪ್ರಕರಣ ದಾಖಲಿಸಬೇಕೆಂದರೆ ಮೊದಲು ವಿಷಯದ ಸಂಪೂರ್ಣ ಮಾಹಿತಿ ತಿಳಿದುಕೊಂಡು ಕ್ರಮ ಕೈಗೊಳ್ಳಿ” ಎಂದು ಹೇಳಿದರು.ಭಗವಾನ್ ಅವರ ಈ ಹೇಳಿಕೆಗಳು ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ವಿವಿಧ ಸಂಘಟನೆಗಳಿಂದ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುವ ಸಾಧ್ಯತೆ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now