ಕರ್ನಾಟಕದಲ್ಲಿ ಚಳಿಗಾಲ ಮುಗಿಯುವ ಮುನ್ನ ಬೇಸಿಗೆಯ ಬಿಸಿ ಪ್ರಾರಂಭವಾಗಿದೆ. ಪ್ರತಿ ವರ್ಷ ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದಿಂದ ಬೇಸಿಗೆಯ ಅನುಭವವಾಗುತ್ತಿತ್ತು. ಆದರೆ, ಈ ಬಾರಿ ಫೆಬ್ರವರಿ ಮೊದಲ ವಾರದಿಂದಲೇ ಬಿಸಿಲಿನ ತಾಪ ಏರಲಾರಂಭಿಸಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ತಾಪಮಾನವು 31°C ನಿಂದ 37°C ವರೆಗೆ ದಾಖಲಾಗುತ್ತಿದೆ.
ಹವಾಮಾನ ತಜ್ಞರ ಪ್ರಕಾರ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.ಕರಾವಳಿ ಭಾಗದಲ್ಲಿ ಒಣಹವೆ ಮುಂದುವರಿಯಲಿದ್ದು, ಶಾಖ ಅಲೆಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ. ಕಾರವಾರ, ಹೊನ್ನಾವರ, ಮಂಗಳೂರು, ಕಲಬುರಗಿ, ಹಾವೇರಿ, ಕೊಪ್ಪಳ, ವಿಜಯಪುರ, ಹಾಸನ, ಬೆಳಗಾವಿ, ಕೋಲಾರ, ರಾಯಚೂರು ಜಿಲ್ಲೆಗಳಲ್ಲಿ ಅಧಿಕ ತಾಪಮಾನ ದಾಖಲಾಗುವ ಸಾಧ್ಯತೆಯಿದೆ.ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಅವಧಿಗೂ ಮುನ್ನ ಆರಂಭವಾಗಿರುವ ಈ ಬಿಸಿಲಿನ ತಾಪ ಸಾರ್ವಜನಿಕರ ಜೀವನದ ಮೇಲೆ ಹಲವು ರೀತಿಯ ಪರಿಣಾಮ ಬೀರಲಿದೆ. ತೀವ್ರ ಬಿಸಿಲಿನಿಂದಾಗಿ ನಿರ್ಜಲೀಕರಣ (Dehydration), ಸನ್ ಸ್ಟ್ರೋಕ್ (ಬಿಸಿಲು ಏಟು), ತಲೆನೋವು ಮತ್ತು ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಅವಧಿಗೂ ಮುನ್ನ ತಾಪಮಾನ ಏರಿಕೆಯಾದರೆ ಮಣ್ಣಿನಲ್ಲಿನ ತೇವಾಂಶ ಕಡಿಮೆಯಾಗಿ ಬೆಳೆಗಳು ಒಣಗಬಹುದು. ಇದು ಇಳುವರಿಯ ಮೇಲೆ ನೇರ ಪರಿಣಾಮ ಬೀರಲಿದೆ.










