ಬೆಟ್ಟಿಂಗ್ ಆಪ್ ಪ್ರಚಾರ ಮಾಡುವ ಸೆಲೆಬ್ರಿಟಿಗಳಿಗೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ. ಸೆಲೆಬ್ರಿಟಿಗಳಾಗಿ ಬೆಟ್ಟಿಂಗ್ ಆಪ್ ಪ್ರಚಾರ ಮಾಡೋದು ಎಷ್ಟು ಸರಿ ಎಂದು ಕೇಳಿದಾಗಲೂ ಅದನ್ನು ವಿರೋಧಿಸದೆ ಪ್ರಚಾರ ಮುಂದುವರೆಸಿದ್ದಾರೆ. ಆದರೆ ಬೆಟ್ಟಿಂಗ್ ಆಪ್ ವಿಚಾರಕ್ಕೇನೆ ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ ಕ್ಷಮೆಯನ್ನ ಕೇಳಿದ್ದಾರೆ.
ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಹಲವು ನಟರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅದರಲ್ಲಿ ಪ್ರಕಾಶ್ ರಾಜ್ ಅವರಿಗೂ ಸಮನ್ಸ್ ನೀಡಲಾಗಿತ್ತು. ನಿನ್ನೆಯೇ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಕೂಡ ಎದುರಿಸಿದ್ದಾರೆ. ಈ ಸಂಬಂಧ ಮಾಧ್ಯಮದವರ ಬಳಿ ಮಾತನಾಡುತ್ತಾ, ಜನತೆಗೆ ಕ್ಷಮೆ ಕೇಳಿದ್ದಾರೆ. 2016ರಲ್ಲಿ ನಾನು ಒಂದು ಗೇಮಿಂಗ್ ಆ್ಯಪ್ ಪ್ರಚಾರ ಮಾಡಿದ್ದೆ. ಆದರೆ ನಂತರ 2017ರಲ್ಲಿ ಅದು ಬೆಟ್ಟಿಂಗ್ ಆಪ್ ಆಗಿ ಬದಲಾಯಿತು. ನನ್ನ ಒಪ್ಪಂದ ಕ್ಯಾನ್ಸಲ್ ಆಯ್ತು. ನಾನು ಗೊತ್ತಿದ್ದು ಮಾಡಿದ್ದರೂ ಗೊತ್ತಿಲ್ಲದೆ ಮಾಡಿದ್ದರೂ ಇದು ತಪ್ಪು. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನಾನು ಎಲ್ಲಾ ದಾಖಲೆಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದೇನೆ.
ಬ್ಯಾಂಕ್ ಮಾಹಿತಿ ಮತ್ತು ಸಂಬಂಧಿಸಿದ ಎಲ್ಲಾ ವಿವರಗಳನ್ನು ತನಿಖಾ ತಂಡಕ್ಕೆ ನೀಡಿದ್ದೇನೆ. ಹಲವು ಯುವಕರು ಇದರಿಂದಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಅವರ ಕುಟುಂಬದವರು ತೊಂದರೆ ಅನುಭವಿಸುವಂತಾಗಿದೆ. ಕಷ್ಟಪಟ್ಟು ದುಡಿದರೆ ಮಾತ್ರ ಹಣ ಮತ್ತು ಯಶಸ್ಸು ಸಿಗುತ್ತದೆ. ಆಪ್ ವಿಷಯದಲ್ಲಿ ನನ್ನನ್ನು ದಯವಿಟ್ಟು ಕ್ಷಮಿಸಿ. ನಾನು ಎಂದಿಗೂ ಈ ರೀತಿಯ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂಬ ಭರವಸೆಯನ್ನ ನೀಡುತ್ತೇನೆ ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.


