ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ಚಲ್ ರೇವಣ್ಣ ಇಂದು ವಿಡಿಯೋ ಮೂಲಕ ಪತ್ತೆಯಾಗಿದ್ದಾರೆ. ಎಸ್ಐಟಿ ಎಷ್ಟೇ ನೋಟೀಸ್ ಕೊಟ್ಟರು ಅದಕ್ಕೂ ಅವರ ವಕೀಲರೇ ಉತ್ತರಿಸಿದ್ದರು. ಇಂದು ವಿದೇಶದಲ್ಲಿದ್ದುಕೊಂಡೇ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಇಷ್ಟು ದಿನ ತಾನೂ ಡಿಪ್ರೆಶನ್ ಹೋಗಿದ್ದೆ ಎಂಬ ವಿಚಾರ ತಿಳಿಸಿದ್ದಾರೆ.
‘ಮೇ 26ಕ್ಕೆ ನಾನು ಫಾರಿನ್ ಹೋಗುವುದು ಮೊದಲೇ ಫಿಕ್ಸ್ ಆಗಿತ್ತು. ನಾನು ಹೋಗುವ ದಿನ ನನ್ನ ಮೇಲೆ ಕೇಸ್ ಆಗಿರಲಿಲ್ಲ. ನನ್ನ ಮೇಲೆ ಆರೋಪ ಬರುತ್ತಿದ್ದಂತೆ ರಾಹುಲ್ ಗಾಂಧಿ ಹಾಗೂ ಇತರೇ ಕಾಂಗ್ರೆಸ್ ನಾಯಕರು ಇದನ್ನು ಪ್ರಚಾರ ಮಾಡಿದರು. ರಾಜಕೀಯ ಪಿತೂರಿ ಮಾಡಿದರು. ಇವೆಲ್ಲ ತಿಳಿದು ನಾನು ಡಿಪ್ರೆಶನ್ ಹೋಗಿದ್ದೆ, ಐಸೋಲೇಶನ್ ನಲ್ಲಿ ಇದ್ದೆ. ಫಾರಿನ್ ಗೆ ಹೋದ ಎರಡು ಮೂರು ದಿನದ ಬಳಿಕ ಚಾನೆಲ್ ನೋಡಿ ಮಾಹಿತಿ ಸಿಕ್ಕಿದೆ. ಎಸ್ಐಟಿ ನೋಟೀಸ್ ಕೊಟ್ಟಿದೆ. ಅದಕ್ಕೆ ನಾನು ಟ್ವಿಟ್ಟರ್ ಹಾಗೂ ಲಾಯರ್ ಮೂಲಕ ಏಳು ದಿನಗಳ ಕಾಲವಕಾಶ ಕೇಳಿದ್ದೆ. ಅದಾದ ಮೇಲೆ ರಾಹುಲ್ ಗಾಂಧಿ ಹಾಗೂ ಇತರೆ ನಾಯಕರು ಇದನ್ನು ಪ್ರಚಾರ ಮಾಡಿದರು. ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಿದರು.
ಹಾಸನದಲ್ಲಿ ಕೆಲವು ಶಕ್ತಿಗಳು ಒಟ್ಟಿಗೆ ಸೇರಿ ಪಿತೂರಿ ಮಾಡಿದ್ದಾರೆ. ರಾಜಕೀಯವಾಗಿ ಬೆಳೆಯುತ್ತಿದ್ದೇನೆ, ಮುಗಿಸಬೇಕು ಅಂತ ಷಡ್ಯಂತ್ರ ಮಾಡಿದ್ದಾರೆ. ಇದರಿಂದ ಆಘಾತ ಆಗಿ, ನಾನೇ ಚೂರು ದೂರ ಇದ್ದೆ. ಇದರ ಬಗ್ಗೆ ಯಾರೂ ತಪ್ಪು ತಿಳಿಯಬೇಡಿ. ಮೇ 31ರಂದು ನಾನೇ ಖುದ್ದಾಗಿ ಬೆಳಗ್ಗೆ 10 ಗಂಟೆಗೆ ಎಸ್ಐಟಿ ಮುಂದೆ ಹಾಜರಾಗುತ್ತೇನೆ ಎಂದಿದ್ದಾರೆ.