ಸುದ್ದಿಒನ್, ಚಿತ್ರದುರ್ಗ, ಆ.31 : ಕರೆಂಟ್…ಕರೆಂಟ್…ಕರೆಂಟ್ ಯಾರ ಬಾಯಲ್ಲಿ ಕೇಳಿದರೂ ಕರೆಂಟ್ ನದ್ದೇ ಸುದ್ದಿ. ಕರೆಂಟ್ ಯಾವಾಗ ಬರುತ್ತೆ, ನಿಮಗೆ ಗೊತ್ತಾ ? ಕೆಇಬಿಯವರು ಫೋನ್ ತೆಗೀತಿಲ್ಲ, ಅಂತ ಇಂದು (ಗುರುವಾರ) ಸಂಜೆ ಬಹುತೇಕ ಎಲ್ಲರ ಬಾಯಲ್ಲೂ ಇದೇ ಮಾತು. ಯಾಕೆಂದರೆ ಇಂದು ಮಧ್ಯಾನ್ಹದಿಂದ ಸಂಜೆ ವರೆಗೂ ನಗರ ಪ್ರದೇಶ ಅಷ್ಟೇ ಅಲ್ಲದೇ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ಜನರು ಸಾಕಷ್ಟು ಪರದಾಡುವಂತಾಯಿತು.
ಸಾಮಾನ್ಯವಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಇದ್ದರೆ ಬೆಸ್ಕಾಂನವರು ಒಂದು ಅಥವಾ ಎರಡು ದಿನಗಳ ಮುಂಚಿತವಾಗಿ ಪ್ರಕಟಣೆಯಲ್ಲಿ ತಿಳಿಸುತ್ತಾರೆ. ಆದರೆ ಇಂದು ಮಾತ್ರ ಹಾಗಾಗಲಿಲ್ಲ. ಇದ್ದಕ್ಕಿದ್ದಂತೆ ಕರೆಂಟ್ ಹೋಗಿ ಸತತ ಆರು ಗಂಟೆಗಳ ಕಾಲ ಕರೆಂಟ್ ಇಲ್ಲದಂತಾಗಿ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಯಿತು.
ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯದ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲದ ಕಾರಣ ಸಾರ್ವಜನಿಕರು, ವಿದ್ಯಾರ್ಥಿಗಳು, ಗೃಹಿಣಿಯರು, ಸಣ್ಣ ಉದ್ಯಮಿಗಳು, ಹೋಟೆಲ್, ದಿನಿಸಿ ಅಂಗಡಿ ಮೊದಲಾದ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ನಡೆಸುವವರು ಹೀಗೆ ಬಹುತೇಕ ಎಲ್ಲಾ ವರ್ಗದ ಎಲ್ಲಾ ವಯೋಮಾನದವರಿಗೂ ಕರೆಂಟ್ ಬಿಸಿ ತಟ್ಟಿತ್ತು.
ಮಳೆ, ಗಾಳಿ ಅಭಾವದಿಂದ ಶೇ. 50 ರಷ್ಟು ವಿದ್ಯುತ್ ಉತ್ಪಾದನೆಯಲ್ಲಿ ಇಳಿಕೆಯಾಗಿದೆ. LDC (Load Dispatch Center) ನಲ್ಲಿ ವಿದ್ಯುತ್ ಸಮತೋಲನೆ ಮಾಡಲು ಕೆಲವು ಸಂದರ್ಭಗಳಲ್ಲಿ ಈ ರೀತಿಯಾಗಿ ಯಾವುದೇ ಮುನ್ಸೂಚನೆ ಇಲ್ಲದೇ ವಿದ್ಯುತ್ ವ್ಯತ್ಯಯ ಮಾಡಲಾಗುತ್ತದೆ ಎಂದು ಬೆಸ್ಕಾಂ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ವಿದ್ಯುತ್ ವ್ಯತ್ಯಯಕ್ಕೆ ವಿಷಾದಿಸಿರುವ ಬೆಸ್ಕಾಂ ಇಲಾಖೆ ಸಹಕರಿಸುವಂತೆ ಮನವಿ ಮಾಡಿದೆ.