ಬೆಂಗಳೂರು: ಮೊದಲೇ ರಾಜ್ಯ ಕಾಂಗ್ರೆಸ್ ನಲ್ಲಿಹಲವು ಸಮಸ್ಯೆಗಳು ತಲೆದೂರಿವೆ. ಅತ್ತ ಮೂಡಾ ಹಗರಣ.. ಇತ್ತ ಸಿಎಂ ಬದಲಾವಣೆಯ ಚರ್ಚೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾದ ಫೋಟೋ ವೈರಲ್ ಆಗಿದೆ. ಇದನ್ನು ಕಂಡು ಸ್ವತಃ ಕಾಂಗ್ರೆಸ್ ಹೈಕಮಾಂಡ್ ಬೇಸರಗೊಂಡಿದೆ. ಮೋದಿಯವರನ್ನು ಭೇಟಿಯಾಗಿದ್ದ ವಿಷಯ ಹೈಕಮಾಂಡ್ ಗೂ ಗೊತ್ತಿಲ್ಲದೆ ಇರುವುದು ಆಶ್ಚರ್ಯವನ್ನುಂಟು ಮಾಡಿದೆ.
ಕಳೆದ ಬಾರಿ ದೆಹಲಿಗೆ ಹೋದಾಗ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ, ಮಾತುಕತೆ ನಡೆಸಿ ಬಂದಿದ್ದಾರೆ. ಈ ವಿಚಾರವೇ ಕಾಂಗ್ರೆಸ್ ಹೈಕಮಾಂಡ್ ಬೇಸರಕ್ಕೆ ಕಾರಣವಾಗಿದೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರ ಬಳಿಯೇ ನೇರವಾಗಿ ರಣದೀಪ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್ ಅವರು ಭೇಟಿ ಹಿಂದಿನ ಸೀಕ್ರೆಟ್ ತಿಳಿಯಲು ಒಂದಷ್ಟು ಪ್ರಶ್ನೆಗಳನ್ನು ಮಾಡಿದ್ದಾರೆ.
ಮೋದಿ ಭೇಟಿ ಸಿಎಂ ಗಳಿಗೆ ಸಿಗುವುದಿಲ್ಲ ನಿಮಗೆ ಸಿಕ್ಕಿದ್ದೇಗೆ..? ಅಷ್ಟಕ್ಕೂ ನೀವೇಕೆ ಮೋದಿಯವರನ್ನು ಭೇಟಿಯಾಗಿದ್ದು..? ಅವರನ್ನು ಭೇಟಿಯಾಗಲು ಹೇಳಿದ್ದು ಯಾರು..? ಅವರು ನಮ್ಮ ರಾಜಕೀಯ ಎದುರಾಳಿ.. ಈಗ ಅವರ ಭೇಟಿಯ ಅವಶ್ಯಕತೆ ಇತ್ತಾ..? ರಾಜ್ಯ ಸಂಘಟನೆಯಲ್ಲಿ ಉನ್ನತ ಅಧಿಕಾರದಲ್ಲಿ ಇದ್ದೀರಿ ನೀವು..!, ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿ ಈ ರೀತಿ ಕೆಲಸ ಮಾಡಬಾರದಿತ್ತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನೇರಾ ನೇರ ಉತ್ತರ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ನಾನು ನನ್ನ ಇಲಾಖೆಯ ವಿಚಾರವಾಗಿ ಅವರನ್ನು ಭೇಟಿ ಮಾಡಿದ್ದೆ. ಯಾವುದೇ ರಾಜಕೀಯ ಉದ್ದೇಶಕ್ಕೆ ಭೇಟಿ ಮಾಡಿಲ್ಲ. ನನ್ನ ಹಾಗೂ ಪ್ರಧಾನಿ ಮೋದಿ ಭೇಟಿಯಲ್ಲಿ ರಾಜಕಾರಣವನ್ನು ಬೆರೆಸುವ ಅಗತ್ಯವಿಲ್ಲ. ಇಲ್ಲಿನ ರಾಜಕೀಯ ಬೆಳವಣಿಗೆಗೂ ನನ್ನ ಭೇಟಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಪ್ರಧಾನಿ ಮೋದಿ ಅವರ ಭೇಟಿ ಅಷ್ಟು ಸುಲಭವಲ್ಲ. ಆದರೆ ಡಿಕೆ ಶಿವಕುಮಾರ್ ಅವರಿಗೆ ಸಿಕ್ಕಿದ್ದು ಹೇಗೆ ಎಂಬುದೇ ಕುತೂಹಲಕಾರಿ ಪ್ರಶ್ನೆಯಾಗಿದೆ. ಪ್ರಧಾನಿ ಅವರನ್ನ ಭೇಟಿಯಾಗಿದ್ದು ಯಾಕೆ ಅಂತ ಅವರ ಹೈಕಮಾಂಡ್ ಪ್ರಶ್ನೆ ಮಾಡಿದೆ. ಸಿಎಂ ರೇಸ್ ನಲ್ಲಿ ಇರೋರದ್ದು ಒಬ್ಬೊಬ್ಬರದ್ದು ಒಂದೊಂದು ಮಾರ್ಗ. ಮುಂದೆ ತೊಂದರೆ ಆಗದಂತೆ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ.