ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಆ. 14 : ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಶ್ಲಾಘಿಸಿದ್ದು, ಈ ಯೋಜನೆಯು ರಾಷ್ಟ್ರಧ್ವಜಕ್ಕೆ ನೀಡುವ ಗೌರವವನ್ನು ಸಾರ್ವಜನಿಕರಲ್ಲಿ ಹೆಚ್ಚಿಸಿದೆ ಎಂದು ಮಾಜಿ ಶಾಸಕರಾದ ಎಸ್.ಕೆ. ಬಸವರಾಜನ್ ಹೇಳಿದ್ದಾರೆ.
ಚಿತ್ರದುರ್ಗ ನಗರದಲ್ಲಿನ ಅವರ ಶುಕ್ರವಾರ ಹರ್ ಘರ್ ತಿರಂಗಾ’ ಅಭಿಯಾನದಡಿಯಲ್ಲಿ ತಮ್ಮ ಮನೆಯ ಮೇಲೆ ಭಾವುಟವನ್ನು ಹಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ದೇಶದ ರಾಷ್ಟ್ರಧ್ವಜವನ್ನು ಮುಟ್ಟಲು ಭಯಪಡುವ ವಾತಾವರಣವಿತ್ತು ಹಾಗೂ ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶಗಳಿರಲಿಲ್ಲ. ಕೇವಲ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭಗಳಲ್ಲಿ, ಅದೂ ಶಾಲಾ-ಕಾಲೇಜುಗಳಲ್ಲಿ ಮಾತ್ರ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸುವ ಪರಿಪಾಠವಿತ್ತು ಎಂದು ಅವರು ನೆನಪಿಸಿಕೊಂಡರು.ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ‘ಹರ್ ಘರ್ ತಿರಂಗಾ’ ಕಲ್ಪನೆಯನ್ನು ಜಾರಿಗೆ ತಂದ ನಂತರ, ಭಾರತದ ಪ್ರತಿಯೊಂದು ಮನೆಯ ಮೇಲೆಯೂ ರಾಷ್ಟ್ರಧ್ವಜ ಹಾರಾಡುವಂತಾಗಿದೆ. ರಾಷ್ಟ್ರಧ್ವಜವು ಕೇವಲ ನಾಲ್ಕು ಗೋಡೆಗಳ ಮಧ್ಯೆ ಅಥವಾ ವರ್ಷದ ಎರಡು ದಿನಗಳಿಗೆ ಮಾತ್ರ ಸೀಮಿತವಾಗಬಾರದು; ಅದು ಪ್ರತಿಯೊಬ್ಬ ಪ್ರಜೆಯ ನಿತ್ಯಜೀವನದಲ್ಲಿ ಗೌರವದ ಸಂಕೇತವಾಗಬೇಕು ಎನ್ನುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಎಸ್.ಕೆ.ಬಿ ತಿಳಿಸಿದರು.
ಮೂರು ದಿನಗಳ ಕಾಲ ಪ್ರತಿಯೊಂದು ಮನೆಯ ಮೇಲೆಯೂ ಧ್ವಜ ಹಾರಿಸುವ ಈ ಅಭಿಯಾನವು ರಾಷ್ಟ್ರಧ್ವಜವನ್ನು ಸಾರ್ವಜನಿಕರ ಹತ್ತಿರಕ್ಕೆ ತಂದಿದೆ. ಹಿಂದೆ ಅನೇಕರಿಗೆ ರಾಷ್ಟ್ರಧ್ವಜದ ಸ್ವರೂಪ, ಬಣ್ಣಗಳು ಹಾಗೂ ಅದರಲ್ಲಿರುವ ಅಶೋಕ ಚಕ್ರದ ಬಗ್ಗೆ ಸ್ಪಷ್ಟ ಅರಿವಿರಲಿಲ್ಲ. ಆದರೆ ಇಂದು ಪ್ರತಿಯೊಂದು ಹಳ್ಳಿ ಹಾಗೂ ಕಾಲೋನಿಗಳ ಮಟ್ಟದಲ್ಲೂ ಜಾಗೃತಿ ಮೂಡಿದ್ದು, ಪ್ರಧಾನಿಗಳ ಈ ಕಲ್ಪನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಅಭಿಪ್ರಾಯಪಟ್ಟ ಅವರು. ‘ಹರ್ ಘರ್ ತಿರಂಗಾ’ ಅಭಿಯಾನವು ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿ ರಾಷ್ಟ್ರಧ್ವಜದ ಬಗ್ಗೆ ಗೌರವ, ಅರಿವು ಮತ್ತು ದೇಶಭಕ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಈ ಸಂದರ್ಭದಲ್ಲಿ ಸಂಸದರಾದ ಗೋವಿಂದ ಕಾರಜೋಳ ಇದ್ದರು.










