ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ನವೆಂಬರ್.18 : ಇಂದಿನ ದಿನಮಾನದಲ್ಲಿ ಮಕ್ಕಳು ಮೊಬೈಲ್ ಬಿಟ್ಟು ಆಟದ ಮೈದಾನದಲ್ಲಿ ಆಡುವುದರ ಮೂಲಕ ಮಾನಸಿಕ ಮತ್ತು ದೈಹಿಕವಾಗಿ ಸಧೃಢರಾಗಲು ಸಾಧ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ತಿಳಿಸಿದರು.
ನಗರದ ಪಾರ್ಶ್ವನಾಥ ವಿದ್ಯಾ ಸಂಸ್ಥೆಯವತಿಯಿಂದ ನಗರದ ಓನಕೆ ಒಬವ್ವ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದ ಪಾರ್ಶ್ವನಾಥ ಸಂಸ್ಥೆ ತನ್ನದೆ ಆದ ಮೌಲ್ಯವನ್ನು ಹೊಂದಿದೆ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿದ್ದಾರೆ. ತಮ್ಮ ದುಡಿಮೆಯ ಜೊತೆಗೆ ಸಮಾಜ ಸೇವೆಯಾಗಿ ವಿದ್ಯಾ ದಾನವನ್ನು ಮಾಡುತ್ತಾ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಶಿಕ್ಷಕರು ಸಹಾ ತಮ್ಮ ಶಾಲೆಯಲ್ಲಿ ಉತ್ತಮವಾದ ಮಕ್ಕಳನ್ನು ನಿರ್ಮಾಣ ಮಾಡಬೇಕಿದೆ ಎಂದರು.
ಮಕ್ಕಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚಿನ ಶ್ರಮವನ್ನು ಹಾಕಬೇಕಿದೆ. ಜಿಲ್ಲಾ, ತಾಲ್ಲೂಕು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬಾಗವಹಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಬೇಕಿದೆ.
ಇದರೊಂದಿಗೆ ಶಾಲಾ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಸಹಾ ಭಾಗವಹಿಸಬೇಕಿದೆ ಎಂದ ಅವರು, ಮಕ್ಕಳು ಇಂದಿನ ದಿನಮಾನದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವುದು ಕಡಿಮೆಯಾಗಿದೆ. ಮೊಬೈಲ್‍ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗುವುದಿಲ್ಲ ಎಂದು ನಾಗಭೂಷಣ ತಿಳಿಸಿದರು.
ಇಂದಿನ ದಿನಮಾನದಲ್ಲಿ ಮಕ್ಕಳು ದೈಹಿಕವಾಗಿ ಕಸರತ್ತ ಮಾಡುವುದು ಕಡಿಮೆಯಾಗಿದೆ. ಇದರಿಂದ ಈ ರೀತಿಯ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಸಾಧ್ಯವಿದೆ. ಪಠ್ಯದ ಜೊತೆಗೆ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಕಲಿಯಬೇಕಿದೆ ಇದರಿಂದ ಮನಸ್ಸು ಮತ್ತು ದೇಹ ಚನ್ನಾಗಿ ಇರಲು ಸಾಧ್ಯವಿದೆ ಎಂದರು.
ನಿವೃತ್ತ ದೈಹಿಕ ನಿರ್ದೆಶಕರಾದ ಜಯ್ಯಣ್ಣ ಮಾತನಾಡಿ, ಜೈನ್ ಸಮುದಾಯದವರು ಮಕ್ಕಳಿಗೆ ಶಿಕ್ಷಣವನ್ನು ಕೂಡಿಸುವುದರ ಮೂಲಕ ಉತ್ತಮವಾದ ಸೇವೆಯನ್ನು ಮಾಡುತ್ತಿದ್ದಾರೆ. ಮಕ್ಕಳು ದೈಹಿಕವಾಗಿ ಚನ್ನಾಗಿ ಇದ್ದರೆ ಉತ್ತಮವಾದ ಸಾಧನೆಯನ್ನು ಮಾಡಲು ಸಾಧ್ಯವಿದೆ. ಮೊಬೈಲ್‍ನಿಂದ ಮಕ್ಕಳು ಮಾನಸಿಕವಾಗಿ ಹಿನ್ನಡೆಯನ್ನು ಸಾಧಿಸುತ್ತಾರೆ. ದೇಶವು ಸಹಾ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.
ಪಾರ್ಶ್ವನಾಥ ವಿದ್ಯಾ ಸಂಸ್ಥೆಯ ಆಧ್ಯಕ್ಷರಾದ ಬಾಬುಲಾಲ್ ಮಾತನಾಡಿ, ಮಕ್ಕಳು ಶಿಕ್ಷಣವನ್ನು ಪಡೆಯುವುದರ ಜೊತೆಗೆ ಕ್ರೀಡೆಗೂ ಸಹಾ ಮಹತ್ವವನ್ನು ನೀಡಬೇಕಿದೆ. ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಮಾನಸಿಕವಾಗಿ ಸದೃಢವಾಗಿರುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಉತ್ತಮಚಂದ್ ನೀರವ್, ಕಾರ್ಯದರ್ಶಿ ಆಶೋಕ ಕುಮಾರ್, ನಿರ್ದೇಶಕರಾದ ಜುನಾರಿಲಾಲ್, ಸುರೇಶ್ ಮುತ್ತಾ, ಮುಕೇಶ್ ಸೇರಿದಂತೆ ಶಾಲಾ ಶಿಕ್ಷಕರು ಸಿಬ್ಬಂದಿಗಳು ಹಾಜರಿದ್ದರು.