ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 27 : ನೂತನ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯ 6.30 ಎಕರೆ ನೀಡಲು ತೋಟಗಾರಿಕೆ ಇಲಾಖೆ ಸಚಿವರು ಅನುಮತಿ ನೀಡಿದ್ದಾರೆ.
ಕುಂಚಿಗನಾಳು ಸಮೀಪ ನಿರ್ಮಾಣ ಮಾಡಲಾಗಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿಯು ನಗರದಿಂದ ದೂರವಿದ್ದು, ಕಚೇರಿ ಕಾರ್ಯಗಳಿಗೆ ಬರುವ ಜಿಲ್ಲೆಯ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗುವ ಕಾರಣದಿಂದ ಈ ನೂತನ ಜಿಲ್ಲಾಧಿಕಾರಿಗಳ ಕಚೇರಿಯನ್ನು ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಚಿತ್ರದುರ್ಗ ನಗರದಲ್ಲಿಯೇ ನೂತನವಾಗಿ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಮಾಡುವ ಸಂಬಂಧ ಕಳೆದ ಒಂದು ವರ್ಷದಿಂದ ಕಂದಾಯ ಇಲಾಖೆ ಸಚಿವರು, ವೈದ್ಯಕೀಯ ಇಲಾಖೆ ಸಚಿವರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜೊತೆ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಶಾಸಕರು ಬೆಂಗಳೂರಿನ ವಿಧಾನಸೌಧ ಹಾಗೂ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿಯೂ ಸಹ ನಿರಂತರವಾಗಿ ಸಭೆ ನಡೆಸಲಾಗಿತ್ತು.
ಫೆಬ್ರವರಿ. 26 ರಂದು ವಿಕಾಸಸೌಧದ ಕೊಠಡಿ ಸಂಖ್ಯೆ 342 ರಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹಾಗೂ ತೋಟಗಾರಿಕೆ ಇಲಾಖೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಇವರುಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಹಾಲಿ ಇರುವ ತೋಟಗಾರಿಕೆ ಇಲಾಖೆಯ 6.10 ಎಕರೆ ಮತ್ತು ಹಾಪ್ ಕಾಮ್ಸ್ ವ್ಯಾಪ್ತಿಯ 0.20 ಎಕರೆ ಸೇರಿ ಒಟ್ಟು 6.30 ಎಕರೆ ಜಮೀನನ್ನು ನೂತನ ಜಿಲ್ಲಾಧಿಕಾರಿಗಳ ನಿರ್ಮಾಣಕ್ಕೆ ನೀಡಲು ತೀರ್ಮಾನಿಸಲಾಗಿರುತ್ತದೆ. ತೋಟಗಾರಿಕೆ ಇಲಾಖೆಯ ಈ ಜಮೀನಿನ ಬದಲಾಗಿ ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಹೋಬಳಿ ಚಿಕ್ಕಪುರ ಗ್ರಾಮದ ರಿ.ಸ.ನಂ.96 ಮತ್ತು ರಿ.ಸ.ನಂ.101 ರಲ್ಲಿ 20.00 ಎಕರೆ ಜಮೀನನ್ನು ಸರ್ಕಾರದಿಂದ ನೀಡಲು ತೀರ್ಮಾನ ಕೈಗೊಳ್ಳಲಾಗಿರುತ್ತದೆ. ಮತ್ತು ಹಾಲಿ ಇರುವ ತೋಟಗಾರಿಕೆ ಇಲಾಖೆ ಕಚೇರಿಗೆ ನೂತನವಾಗಿ ನಿರ್ಮಾಣ ಮಾಡಲಾಗುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಳಾವಕಾಶ ಕಲ್ಪಿಸಿಕೊಡಲು ತೀರ್ಮಾನಿಸಲಾಯಿತು.

ಈ ಸಭೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಶಾಸಕರಾದ ಶ್ರೀ.ಟಿ.ರಘುಮೂರ್ತಿ, ಮೊಳಕಾಲ್ಕೂರು ಕ್ಷೇತ್ರದ ಶಾಸಕರಾದ ಶ್ರೀ.ಎನ್.ವೈ.ಗೋಪಾಲಕೃಷ್ಣ, ಚಿತ್ರದುರ್ಗ ಕ್ಷೇತ್ರದ ಶಾಸಕರಾದ ಶ್ರೀ.ಕೆ.ಸಿ.ವೀರೇಂದ್ರ ಪಪ್ಪಿ ರವರು, ತೋಟಗಾರಿಕೆ ಇಲಾಖೆ ಕಾರ್ಯದರ್ಶಿಗಳು, ತೋಟಗಾರಿಕೆ ಇಲಾಖೆ ನಿರ್ದೇಶಕರು, ಚಿತ್ರದುರ್ಗ ಜಿಲ್ಲಾಧಿಕಾರಿಗಳಾದ ಶ್ರೀ.ಟಿ.ವೆಂಕಟೇಶ್ ರವರು, ಚಿತ್ರದುರ್ಗ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಮತಿ.ಸವಿತ ಮತ್ತಿತರ ಅಧಿಕಾರಿಗಳು ಹಾಜರಿದ್ದರು.







