ಚಿತ್ರದುರ್ಗ: ಅಧಿಕಾರ, ದರ್ಪ, ದೌರ್ಜನ್ಯದಿಂದ ಮೆರೆಯುವವರಿಗೆ ಎಲ್ಲಾ ಜಾತಿ, ಧರ್ಮದವರು ಸೌಹಾರ್ದತೆ ಪ್ರೀತಿಯ ಮೂಲಕ ಉತ್ತರ ಕೊಡಬೇಕೆಂದು ಫಾದರ್ ಎಂ.ಎಸ್.ರಾಜು ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಅಂಕುರ ಪ್ರಕಾಶನ ಚಂದ್ರಕಾಂತ ವಡ್ಡುರವರ ಸೌಹಾರ್ದ ಕರ್ನಾಟಕ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಸೌಹಾರ್ದತೆ ಎನ್ನುವುದು ಪುಸ್ತಕದ ರೂಪದಲ್ಲಿ ಇದ್ದರೆ ಸಾಲದು. ಅದು ಪ್ರತಿಯೊಬ್ಬರ ಜೀವನದಲ್ಲಿಯೂ ಪಾಲನೆಯಾದಾಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ. ನಮ್ಮತನ, ಶ್ರಮ, ಅಸ್ತಿತ್ವ ಎಲ್ಲವೂ ಹದಗೆಟ್ಟಿದೆ. ಪ್ರಜಾಪ್ರಭುತ್ವದಲ್ಲಿ ಸೌಹಾರ್ದತೆ ಎನ್ನುವುದು ಹಾಳಾಗುತ್ತಿದೆ. ಮೂಢನಂಬಿಕೆಯಲ್ಲಿ ಬದುಕುತ್ತಿದ್ದೇವೆ. ಯಾವುದೇ ಒಂದು ವ್ಯವಸ್ಥೆಗೆ ಹೆದರಿ ಫಲಾಯನವಾಗಬಾರದು. ಹೋರಾಡಿ ಅನೇಕರಿಗೆ ಮಾದರಿಯಾಗಬೇಕೆಂದು ಹೇಳಿದರು.
ಎಲ್ಲಾ ದಾರ್ಶನಿಕರು, ಗುರುಗಳು ನಮ್ಮ ನೆಲದಲ್ಲಿ ಜನಿಸಿದ್ದಾರೆ. ಜಡ್ಡುಗಟ್ಟಿ ಮಂದಮತಿಗಳಾಗಿದ್ದೇವೆ. ಸೌಹಾರ್ದತೆ ಕಾರ್ಯತತ್ಪರತೆಯಾಗಬೇಕು. ಮನುಷ್ಯ ಮನುಷ್ಯನನ್ನು ನೆರೆಹೊರೆಯವರನ್ನು ಪ್ರೀತಿಸಬೇಕು ಆಗ ಸೌಹಾರ್ದತೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡುತ್ತ ಸೌಹಾರ್ಧತೆ ಎನ್ನುವುದು ಎಲ್ಲಾ ಜಾತಿ ಧರ್ಮದವರಿಗೆ ಮನವರಿಕೆಯಾಗಬೇಕು. ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಸೌಹಾರ್ಧತೆಯಿಂದ ಬದುಕುತ್ತಿದ್ದೇವೆ. ನಡೆದುಕೊಳ್ಳುವ ರೀತಿ ಬಹಳ ಮುಖ್ಯ. ನಾನು ಓದುವಾಗ ಯಾವ ಜಾತಿ, ಧರ್ಮ ಎಂದು ಯಾರು ಕೇಳುತ್ತಿರಲಿಲ್ಲ, ಹಿಂದೂ, ಮುಸ್ಲಿಂ, ಸಿಖ್, ಜೈನ್, ಕ್ರಿಶ್ಚಿಯನ್ ಎನ್ನವ ಅಸಮಾನತೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೋಮುವಾದ, ಜಾತಿವಾದ ಜಾಸ್ತಿಯಾಗುತ್ತಿದೆ. ಇಂತಹ ಸಂದರ್ಭಕ್ಕೆ ಕರ್ನಾಟಕ ಸೌಹಾರ್ಧ ಪುಸ್ತಕ ಹೊರಬಂದಿರುವುದು ಸಮಯೋಚಿತವಾಗಿದೆ ಎಂದು ಗುಣಗಾನ ಮಾಡಿದರು.
ಎ.ಐ.ಎಂ.ಎಸ್.ಎಸ್.ನ ಸುಜಾತ ಮಾತನಾಡಿ ಸೌಹಾರ್ಧತೆ ಎನ್ನುವುದು ನಮ್ಮೊಳಗೆ ನಮಗೆ ಸ್ಪೂರ್ತಿಯಾಗಬೇಕು. ಕೋಮುಗಲಭೆ, ಜಾತಿವಾದ ಎನ್ನುವುದು ಜಾತಿ ಧರ್ಮಗಳ ನಡುವಿನ ಸೌಹಾರ್ಧತೆಯನ್ನು ಮುರಿಯುತ್ತಿದೆ. ಪ್ರಮುಖರು, ದೊಡ್ಡವರು ಎನಿಸಿಕೊಂಡವರಿಂದಲೆ ಸೌಹಾರ್ಧತೆಗೆ ಧಕ್ಕೆಯಾಗುತ್ತಿದೆ ಎಂದು ವಿಷಾಧಿಸಿದರು.
ಉಪನ್ಯಾಸಕ ಜಗದೀಶ್ ಸೌಹಾರ್ಧ ಕರ್ನಾಟಕ ಪುಸ್ತಕ ಕುರಿತು ಮಾತನಾಡಿದರು.
ಕೃತಿಕಾರ ಚಂದ್ರಕಾಂತ ವಡ್ಡು ವೇದಿಕೆಯಲ್ಲಿದ್ದರು.
ಜಿ.ಎಸ್.ಉಜ್ಜಿನಪ್ಪ, ಅಶೋಕ್ ಸಂಗೇನಹಳ್ಳಿ, ಡಾ.ಕರಿಯಪ್ಪ ಮಾಳಿಗೆ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ರೈತ ಮುಖಂಡ ಟಿ.ನುಲೇನೂರು ಶಂಕರಪ್ಪ ಇನ್ನೂ ಮೊದಲಾದವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿದ್ದರು.