Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬ್ರಿಡ್ಜ್ ಮ್ಯಾನ್ ಖ್ಯಾತಿಯ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ನಿಧನ

---Advertisement---

ಮಂಗಳೂರು: ಬ್ರಿಡ್ಜ್ ಮ್ಯಾನ್ ಖ್ಯಾತಿಯ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. . ಕಳೆದ ಕೆಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಉಷಾ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

1950ರ ಮೇ 2 ರಂದು ಸುಳ್ಯದಲ್ಲಿ ಜನಿಸಿದ ಗಿರೀಶ್ ಭಾರದ್ವಾಜ್ ಅವರು, 1973ರಲ್ಲಿ ಮಂಡ್ಯದ ಪಿಇಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದರು. ಕೇವಲ ಪದವಿಗೆ ಸೀಮಿತವಾಗದ ಇವರ ಇಂಜಿನಿಯರಿಂಗ್ ಜ್ಞಾನ, ಹಳ್ಳಿ ಜನರ ಸಂಕಷ್ಟಕ್ಕೆ ಆಸರೆಯಾಯಿತು. 1989ರಲ್ಲಿ ತಮ್ಮದೇ ಸ್ವಗ್ರಾಮ ಸುಳ್ಯದ ಅರಂಬೂರಿನ ಪಯಸ್ವಿನಿ ನದಿಗೆ ಅಡ್ಡಲಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಮೊದಲ ತೂಗು ಸೇತುವೆ ನಿರ್ಮಿಸುವ ಮೂಲಕ ಇವರು ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದರು.

ದೋಣಿ ಸಂಪರ್ಕವನ್ನೇ ನೆಚ್ಚಿಕೊಂಡಿದ್ದ ನೂರಾರು ಹಳ್ಳಿಗಳು, ರಸ್ತೆ ಕಾಣದ ಕಾಡಿನ ಮಧ್ಯದ ಜನವಸತಿ ಪ್ರದೇಶಗಳಿಗೆ ಇವರು ನಿರ್ಮಿಸಿದ ಪರಿಸರ ಸ್ನೇಹಿ ಸೇತುವೆಗಳು ಜೀವನಾಡಿಯಾದವು. ಕರ್ನಾಟಕ, ಕೇರಳ, ಒಡಿಶಾ, ತೆಲಂಗಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ 140ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿ ಇವರು ಮನೆಮಾತಾಗಿದ್ದರು. ಇವರ ಈ ನಿಸ್ವಾರ್ಥ ಸಾಧನೆಯನ್ನು ಗೌರವಿಸಿ ಭಾರತ ಸರ್ಕಾರ 2017 ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಪುರಸ್ಕರಿಸಿತ್ತು. ಇವರ ನಿಧನಕ್ಕೆ ನಾಡಿನ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Join WhatsApp

Join Now

Join Telegram

Join Now