ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗದ ನೆಲ್ಲಿಕಟ್ಟೆ ಗ್ರಾಮ ದರ್ಶನ

3 Min Read

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ನೆಲ್ಲಿಕಟ್ಟೆ ಗ್ರಾಮವು ಕಾಲಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು,
ಚಿತ್ರದುರ್ಗದಿಂದ 32 ಕಿಲೋಮೀಟರ್ ದೂರ ವಾಯುವ್ಯಕ್ಕೆ ,
ಚಿತ್ರದುರ್ಗ- ಬಸ್ತಿಹಳ್ಳಿ- ನೆಲ್ಲಿಕಟ್ಟೆ (ಭರಮಸಾಗರ- ಬಿದರಕೆರೆ )
ಮಾರ್ಗದಲ್ಲಿದೆ.

ಗ್ರಾಮಕ್ಕೆ ಹಳೆಗ್ರಾಮ ಇರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಗ್ರಾಮದಲ್ಲಿ ಹಿಂದೆ ನೆಲ್ಲಿಕಾಯಿ ಮರಗಳು ಯಥೇಚ್ಛವಾಗಿದ್ದ ಕಾರಣಕ್ಕೆ ಈ ಗ್ರಾಮಕ್ಕೆ ನೆಲ್ಲಿಕಟ್ಟೆ ಎಂಬ ಹೆಸರು ಬಂದಿದೆ.

ಭೌಗೋಳಿಕವಾಗಿ ಇಲ್ಲಿನ ಪ್ರದೇಶವು ಕೂಡ ನೆಲ್ಲಿಕಾಯಿ ಮರಗಳ ಬೆಳವಣಿಗೆಗೆ ಪೂರಕವಾಗಿದೆ. ಆದರೆ ಇಂದು ಗ್ರಾಮದ ಅಕ್ಕಪಕ್ಕ -ಸುತ್ತಮುತ್ತಲ ಪ್ರದೇಶಗಳಲ್ಲಿ ಎಲ್ಲಿಯೂ ಕೂಡ ನೆಲ್ಲಿಕಾಯಿ ಮರಗಳು ಕಂಡುಬರುವುದಿಲ್ಲ.
ಸ್ಥಳೀಯರ ಮಾಹಿತಿಯಂತೆ ಈ ಗ್ರಾಮದ ಮೂಲ ಹೆಸರು ನಲ್ಲೇಕಟ್ಟೆ.ಅಂದರೆ ಈ ಗ್ರಾಮಕ್ಕೆ ಯಾರೇ ಬಂದರೂ ಇಲ್ಲಿನ ನಿವಾಸಿಗಳು ಅತ್ಯಂತ ಪ್ರೀತಿ, ವಿಶ್ವಾಸದಿಂದ.. ಅತಿಥಿಗಳನ್ನು ಆಧರಿಸಿ ಸತ್ಕರಿಸುತ್ತಾರೆ. ಆ ಕಾರಣಕ್ಕೆ ಈ ಹೆಸರು ಬಂದಿದೆ.ಇದೇ ಮುಂದುವರಿದು ನೆಲ್ಲಿಕಟ್ಟೆ ಆಗಿದೆ ಎನ್ನುತ್ತಾರೆ.

ಇತಿಹಾಸ ಹಾಗೂ ದೇವಾಲಯ ಪರಿಚಯ:

1.ಕಲ್ಲೇಶ್ವರ (ಈಶ್ವರ )ದೇವಾಲಯ:
ಗ್ರಾಮದ ಉತ್ತರಭಾಗದ ರಸ್ತೆಯಲ್ಲಿ ಈ ದೇವಾಲಯವಿದ್ದು,ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ.
ಇದರ ಉತ್ತರಕ್ಕೆ ಹಿಂದೆ ಕೆರೆ ಇದ್ದು,ಇಂದು ಅದು ಕಂಡುಬರುವುದಿಲ್ಲ.
ಗರ್ಭಗೃಹದಲ್ಲಿ ಈಶ್ವರ ಲಿಂಗವನ್ನು ಪ್ರತಿಷ್ಠಾಪಿಸಲಾಗಿದ್ದು, ಪೂಜಿಸಲಾಗುತ್ತದೆ.

ಗ್ರಾಮದ ಶಾಸನದ ವಿವರಣೆ:
ಕಲ್ಲೇಶ್ವರ( ಈಶ್ವರ)ಗುಡಿಯ ಎದುರಿನಲ್ಲಿ ಇರುವ ಈ ಶಾಸನದ ವಿವರಣೆಯಂತೆ ಇಲ್ಲಿನ ಕೆರೆಯು 1640ರಲ್ಲಿ ಅಳುತ್ತಿದ್ದ ಇಮ್ಮಡಿ ಮದಕರಿ ನಾಯಕನು ತನ್ನ ಪಟ್ಟದ ನಾಗತಿ ಚಿಕ್ಕಮ್ಮ ರಾಣಿಯ ಹೆಸರಿನಲ್ಲಿ ಕಟ್ಟೆ ಬಸವಯ್ಯನ ಮಗ ಕೆಂಚಯ್ಯನ ಮೂಲಕ ಈ ಗ್ರಾಮದಲ್ಲಿ ಕೆರೆಯನ್ನು ಕಟ್ಟಿಸಿದ ಎಂದು ತಿಳಿದು ಬರುತ್ತದೆ. ಆದರೆ ಇಂದು ಕೆರೆಯ ಕುರುಹುಗಳು ಕಂಡುಬರುವುದಿಲ್ಲ.
ಹಿಂದೆ ಈ ಗ್ರಾಮವು ಬಿಚ್ಚುಗತ್ತಿ ಭರಮಣ್ಣ ನಾಯಕನ ಕಾಲದಲ್ಲಿ ಭರಮಸಾಗರ ಸಮುದ್ರ ಪಟ್ಟಡಿಗಳ 32 ಗ್ರಾಮಗಳಲ್ಲಿ ಪ್ರಮುಖ ಸ್ಥಳವಾಗಿತ್ತು.

2. ಗುರು ಸಿದ್ದೇಶ್ವರ ಸ್ವಾಮಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಹಿಂದೆ ನೆಲೆಸಿದ್ದ ಅವಧೂತ ಪರಂಪರೆಯ ಗುರು ಸಿದ್ದೇಶ್ವರ ಯತಿಗಳದ್ದಾಗಿದೆ. ಇವರು ಯಾವ ಊರಿನಿಂದ ಬಂದು ಇಲ್ಲಿ ನೆಲೆಸಿದ್ದರು ಎಂಬುದು ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಇವರ ಕಾಲಮಾನ 18 ನೇ ಶತಮಾನ ಎನ್ನಲಾಗುತ್ತದೆ.
ಗ್ರಾಮದಲ್ಲಿ ಇವರ ದೇವಾಲಯವಿದ್ದು, ಗರ್ಭಗೃಹದಲ್ಲಿ ಈ ಯತಿಗಳ ಶಿಲಾಮೂರ್ತಿ ಇದ್ದು,ಪೂಜಿಸಲಾಗುತ್ತದೆ.

ಗ್ರಾಮದಿಂದ ಪೂರ್ವಕ್ಕೆ ಇವರ ಮೂಲ ಐಕ್ಯ ಗದ್ದುಗೆ ಸ್ಥಳವಿದೆ.ಇದನ್ನು ಗದ್ದುಗೆ ಬೃಹನ್ಮಠ ಎನ್ನಲಾಗುತ್ತದೆ. ಇದು ಜಗಳೂರು ತಾಲೂಕು, ಬಿದರಕೆರೆ ವ್ಯಾಪ್ತಿಯಲ್ಲಿ ಬರುತ್ತದೆ.
ಇಲ್ಲಿಗೆ ಗ್ರಾಮದ ಪ್ರತಿಯೊಬ್ಬರೂ ಹಿಂದೆ ಪ್ರತಿ ಸೋಮವಾರ ಕಾಲ್ನಡಿಗೆಯಲ್ಲಿ ಆಗಮಿಸಿ ಪೂಜಿಸಿದ ನಂತರವೇ ಭೋಜನ ಸೇವಿಸುತ್ತಿದ್ದರು. ಆದರೆ ಈ ಆಚರಣೆ ಇಂದು ಅಷ್ಟಾಗಿ ಕಂಡು ಬರುವುದಿಲ್ಲ.

ಶಿವರಾತ್ರಿಯ ನಂತರದ ದಿನಗಳಲ್ಲಿ ಈ ಗದ್ದುಗೆ ಬಳಿಯಿಂದ ಆವಿಗೆ (ಪಾದುಕೆ ) ಗಳನ್ನು ಗ್ರಾಮಕ್ಕೆ ಮೆರವಣಿಗೆ ಮೂಲಕ ತೆಗೆದುಕೊಂಡು ಬಂದು ಪೂಜಿಸಿ, ಉತ್ಸವ ನಡೆಸಲಾಗುತ್ತದೆ. ಆಗ ಸಾಮೂಹಿಕ ದಾಸೋಹ ಕೂಡ ನಡೆಸಲಾಗುತ್ತದೆ. ಈ ಆವಿಗೆಗಳು ಊರಿನಲ್ಲಿ ಇರುವ 9 ದಿನಗಳಲ್ಲೂ ಗ್ರಾಮದ ಕರಿಗಲ್ಲಿನ ಒಳಭಾಗಕ್ಕೆ ಯಾವುದೇ ವಾಹನದ ಪ್ರವೇಶ ಇರುವುದಿಲ್ಲ. ಗ್ರಾಮದ ಪ್ರತಿಯೊಬ್ಬರೂ ಕೂಡ ಆ 9 ದಿನ ನಮ್ಮ ಚಪ್ಪಲಿ, ಬೆಲ್ಟ್,ಚರ್ಮದ ಉತ್ಪನ್ನಗಳನ್ನು, ತಮ್ಮ ವಾಹನಗಳನ್ನು ಗ್ರಾಮದ ಹೊರಭಾಗದಲ್ಲಿ ಇಟ್ಟು ಬರಬೇಕಾಗುತ್ತದೆ. ಈ ಆಚರಣೆಯನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತದೆ.ಜೊತೆಗೆ
ಗ್ರಾಮದ ಯಾವುದೇ ಹಸುವು ಕರು ಹಾಕಿದಾಗ ಅದರ ಗಿಣ್ಣನ್ನು ಗದ್ದುಗೆ( ಬೃಹನ್ಮಠ) ಗೆ ತಂದು ನೈವೇದ್ಯ ಮಾಡಲಾಗುತ್ತದೆ. ಈ ದೇವರಿನ ಹೆಸರಿನ ಮೇಲೆ
ಗ್ರಾಮದ ಪ್ರತಿ ಮನೆಯಲ್ಲೂ ಸಿದ್ದೇಶ್, ಸಿದ್ದಮ್ಮ, ಸಿದ್ದೇಶ್ವರ, ಸಿದ್ದಪ್ಪ… ಹೆಸರಿನವರು ಕಂಡು ಬರುತ್ತಾರೆ.

ಇದರ ಜೊತೆಗೆ ಗ್ರಾಮದಲ್ಲಿ ಆಂಜನೇಯ ಸ್ವಾಮಿ,ಕರಿಯಮ್ಮ,ಮಾತಂಗಿ, ಮರಿಯಮ್ಮ,ದುರ್ಗಮ್ಮದೇವಿ, … ದೇವಾಲಯಗಳಿವೆ. ಇವೆಲ್ಲವೂ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯಗಳಾಗಿವೆ.

ವೀರಗಲ್ಲುಗಳು :
ಗ್ರಾಮದ ಮುಖ್ಯರಸ್ತೆಯ ಜಗದೀಶ್ ಎನ್ನುವವರ ಮನೆಯ ಮುಂಭಾಗದಲ್ಲಿ ವೀರಮಾಸ್ತಿಗಲ್ಲು ಇದ್ದು, ಸಂರಕ್ಷಣೆ ಮಾಡಲಾಗಿರುತ್ತದೆ. ಇವು 13-14 ನೇ ಶತಮಾನದ ಕಾಲಕ್ಕೆ ಸೇರಿದೆ ಎಂದು ಸಂಶೋಧಕರಾದ ಮಹೇಶ್ ಕುಂಚಿಗನಾಳ ಹೇಳುತ್ತಾರೆ. ಇದರಲ್ಲಿ ವೀರನ ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದಿದ್ದು, ಸೊಂಟದಲ್ಲಿ ಕಠಾರಿ ಧರಿಸಿದ್ದು,ಅತ್ಯಂತ ವಿಶೇಷವಾಗಿದೆ. ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿರುವುದನ್ನು ಚಿತ್ರಿಸಲಾಗಿದೆ. ಇದರ ಕೆಳಭಾಗದಲ್ಲಿ ಆತನ ಹೆಂಡತಿ ಸತಿ ಆಗಿರುವುದನ್ನು ಚಿತ್ರಿಸಲಾಗಿದೆ. ಸ್ಥಳೀಯರು ಇದನ್ನು ರಾಮ- ಸೀತೆ ಎನ್ನುತ್ತಾರೆ.

Share This Article