Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ ತಾಲ್ಲೂಕಿನ ಸೀಬಾರ ಗ್ರಾಮದ ಪರಿಚಯ

---Advertisement---

ಸುದ್ದಿಒನ್ : ಸೀಬಾರ ಗ್ರಾಮವು ಮಠದಕುರುಬರಹಟ್ಟಿ ಪಂಚಾಯತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ ವಾಯುವ್ಯಕ್ಕೆ 9 ಕಿಲೋಮೀಟರ್ ದೂರದಲ್ಲಿ

ಚಿತ್ರದುರ್ಗ- ದಾವಣಗೆರೆ ರಾ.ಹೆ.4 ರಲ್ಲಿ ಮುಖ್ಯ ರಸ್ತೆಯಲ್ಲಿದೆ.
ಗ್ರಾಮದಿಂದ ಪೂರ್ವಕ್ಕೆ ಒಂದು ಕಿಲೋಮೀಟರ್ ದೂರದಲ್ಲಿ ಇರುವ ಪುರಾತನ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದ ಬಳಿ ಇರುವ ಸೀಬಾರದ ಕಟ್ಟೆಯ(ತ್ರಿಶೂಲದ ಕಟ್ಟೆ) ಹೆಸರಿನ ಮೇಲೆ ಈ ಗ್ರಾಮವು ನಿರ್ಮಾಣ ಮಾಡಲಾಗಿದೆ. ಇದೇ ಗ್ರಾಮದ ಹೆಸರಿನ ಮೂಲವಾಗಿದೆ.

ಈ ಗ್ರಾಮದ ಹಳೇಊರು ಈಗಿನ ಸೀಬಾರ ಕಣಿವೆ ಪ್ರದೇಶದ ಮೈಲಾರಲಿಂಗೇಶ್ವರ ದೇವಾಲಯದ ಬಳಿ ಇದ್ದಿತು.
ನಂತರ ಅಲ್ಲಿಂದ ಸ್ಥಳಾಂತರವಾಗಿ ಈಗಿನ ಗ್ರಾಮದ ಉತ್ತರಕ್ಕೆ ಇರುವ ಭೂತಪ್ಪನ ಗುಡಿಯ ಬಳಿ ನೆಲೆ ನಿಂತು ಆನಂತರ ಮತ್ತೆ ಅಲ್ಲಿಂದ ಸ್ಥಳಾಂತರವಾಗಿ ಈಗಿರುವ ಸ್ಥಳದಲ್ಲಿ ನೆಲೆ ನಿಲ್ಲಲಾಗಿದೆ.

ಗ್ರಾಮದ ಹತ್ತಿರದ ಗುತ್ತಿನಾಡು ಗ್ರಾಮದ ಮೂಲನಿವಾಸಿಗಳು ಈ ಗ್ರಾಮದವರೇ ಆಗಿದ್ದು,ಹಿಂದೆ ಗ್ರಾಮ ವಿಭಜನೆಗೊಂಡು ವಲಸೆ ಹೋಗಿ ಅಲ್ಲಿ ಒಂದು ಗ್ರಾಮವು ನಿರ್ಮಾಣ ಮಾಡಲಾಗಿದೆ. ಗ್ರಾಮದ ಪೂರ್ವ ಭಾಗದಲ್ಲಿ ಸೋಮನಗುಡ್ಡವಿದ್ದರೆ, ದಕ್ಷಿಣದ ಕಡೆಗೆ ಭೀಮನಗುಡ್ಡವಿದೆ. ಇದಕ್ಕೆ ಸೀಬಾರ ಕಣಿವೆಯ ಭೀಮನ ಗುಡ್ಡದ ಸಾಲು ಎನ್ನುತ್ತಾರೆ. ಚಿತ್ರದುರ್ಗದ ನೂತನ ಬೈಪಾಸ್ ರಸ್ತೆ ಗ್ರಾಮದ ಬಳಿಯಿಂದ ಪ್ರಾರಂಭವಾಗುತ್ತಿದ್ದು,ಮುಂದಿನ ದಿನಗಳಲ್ಲಿ ವ್ಯಾಪಾರ, ಆರ್ಥಿಕ ಚಟುವಟಿಕೆಗೆ ಅನುಕೂಲವಾಗುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಭಾರತ್ ಮಾಲಾ ರಾಷ್ಟ್ರೀಯ ಯೋಜನೆಯಂತೆ ಚಿತ್ರದುರ್ಗ-ಬಿ.ಸಿ.ರೋಡ್(ಮಂಗಳೂರು) ರಾಷ್ಟ್ರೀಯ ಹೆದ್ದಾರಿ 13 ಕೂಡ ಗ್ರಾಮದ ಬಳಿ ಹಾದು ಹೋಗುತ್ತದೆ.

ಮಾರಗಟ್ಟ,ಗೂಳಯ್ಯನಹಟ್ಟಿ,ಗುತ್ತಿನಾಡು …ಹತ್ತಿರದ ಗ್ರಾಮಗಳಾಗಿವೆ.
ಇಂದಿಗೂ ಊರಿನ ಹೆಸರು ಹೇಳುವಾಗ ಇಲ್ಲಿನ ಪ್ರತಿಯೊಬ್ಬರೂ ತಮ್ಮ ಗ್ರಾಮವನ್ನು ಸೀಬಾರ- ಗುತ್ತಿನಾಡು ಎಂದೇ ಹೇಳುತ್ತಾರೆ.

ಗ್ರಾಮದಲ್ಲಿರುವ ಮಂದಿರಗಳು:

1.ಆಂಜನೇಯಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯವು ದಕ್ಷಿಣಾಭಿಮುಖಿಯಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಗರ್ಭಗೃಹ ಹಾಗೂ ಸಭಾಮಂಟಪಗಳಿವೆ. ದೇವಾಲಯದ ಗರ್ಭಗೃಹದಲ್ಲಿ ಆಂಜನೇಯನ ಶಿಲ್ಪವಿದೆ . ಸಭಾಮಂಟಪದಲ್ಲಿ ಸರಳ ರಚನೆಯ ಕಂಬಗಳಿವೆ.
ಈ ದೇವಾಲಯದ ವಿಶೇಷ ಉತ್ಸವ ಪ್ರತಿವರ್ಷ ರಾಮನವಮಿ ಹಬ್ಬದಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಇಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪರೇವು ಆಚರಣೆ ನಡೆಸಲಾಗುತ್ತದೆ.

2..ಮೈಲಾರಲಿಂಗೇಶ್ವರ ದೇವಾಲಯ:
ಗ್ರಾಮದ ಪೂರ್ವ ಭಾಗದ ಸಣ್ಣ ಮರಡಿಯ(ಸೀಬಾರ ಬೆಟ್ಟ) ಮೇಲೆ ಇರುವ ಈ ದೇವಾಲಯವು ಪೂರ್ವಾಭಿಮುಖಿಯಾಗಿದ್ದು,17-18 ನೇ ಶತಮಾನದಲ್ಲಿ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹ ಮತ್ತು ಸಭಾಮಂಟಪಗಳಿಂದ ಕೂಡಿದ ಈ ದೇವಾಲಯದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ಶಿಲ್ಪವಿದೆ. ಸುಖಾಸೀನವಾಗಿ ಕುಳಿತ ಈ ಶಿಲ್ಪವು ಕರಂಡ ಮುಕುಟಧಾರಿಯಾಗಿದ್ದು ನಾಲ್ಕು ಕೈಗಳನ್ನು ಹೊಂದಿದೆ.ಅವುಗಳಲ್ಲಿ ತ್ರಿಶೂಲ, ಡಮರು, ಖಡ್ಗ ಮತ್ತು ಪಾನಬಟ್ಟಲುಗಳಿವೆ. ಗರ್ಭಗೃಹದ ಬಾಗಿಲುವಾಡದಲ್ಲಿ ಶೈವ ದ್ವಾರಪಾಲಕರಿದ್ದು ಅವರು ತಮ್ಮ ಕೈಗಳಲ್ಲಿ ಡಮರು, ತ್ರಿಶೂಲ, ಖಡ್ಗ ಮತ್ತು ಅಭಯಹಸ್ತ ಮುದ್ರೆಗಳಲ್ಲಿ ನಿಂತಿರುವರು. ಸಭಾಮಂಟಪದಲ್ಲಿ ನಾಗಶಿಲ್ಪಗಳಿವೆ. ದೇಗುಲದ ಮುಂಭಾಗದಲ್ಲಿ ಸೀಬಾರ ಹಾಗೂ ದೀಪಸ್ತಂಭಗಳಿವೆ .

3.ಹೆಗ್ಗಪ್ಪನ ದೇವಾಲಯ:
ಮೈಲಾರಲಿಂಗೇಶ್ವರ ದೇವಾಲಯದ ಎಡಭಾಗದಲ್ಲಿ ಹೆಗ್ಗಪ್ಪನನ್ನು ಇಟ್ಟು ಪೂಜಿಸಲಾಗುತ್ತದೆ.ಇಲ್ಲಿ ರುಂಡ ಭಾಗವನ್ನು ಮಾತ್ರ ಇಟ್ಟು ಪೂಜಿಸಲಾಗುತ್ತದೆ. ಹೆಗ್ಗಪ್ಪನಿಗೆ ಮೀಸೆ,ಕಣ್ಣು, ಮೂಗುಗಳಿದ್ದು,ತಲೆಗೆ ಟೋಪಿ ಹಾಕಲಾಗಿದೆ.

4.ಗಂಗಮಾಳಮ್ಮನ ದೇವಸ್ಥಾನ:
ಮೈಲಾರಲಿಂಗಪ್ಪನ ದೇವಸ್ಥಾನದ ಎಡಭಾಗದಲ್ಲಿ ಈ ದೇಗುಲವಿದೆ. ಇದು ಗರ್ಭಗೃಹ,ಸಭಾಮಂಟಪ ಮತ್ತು ತೆರೆದ ಸಭಾಮಂಟಪಗಳನ್ನು ಹೊಂದಿದೆ.
ಗರ್ಭಗೃಹದಲ್ಲಿ ಸುಖಾಸನದಲ್ಲಿ ಕುಳಿತ ಕರಂಡ ಮುಕುಟಧಾರಿಯಾದ ಭೈರವಿಯ ಶಿಲ್ಪವಿದೆ. ಭೈರವಿಯು ತನ್ನ ನಾಲ್ಕು ಕೈಗಳಲ್ಲಿ ತ್ರಿಶೂಲ ,ಡಮರು ,ಖಡ್ಗ ಮತ್ತು ಪಾನಬಟ್ಟಲುಗಳನ್ನು ಹಿಡಿದಿರುವಳು. ದೇಗುಲದ ಕಂಬಗಳು ಚಚ್ಚೌಕವಾಗಿವೆ. ಗರ್ಭಗೃಹದ ಬಾಗಿಲುವಾಡವು ಮೈಲಾರಲಿಂಗೇಶ್ವರ ದೇಗುಲದಂತೆ ಶೈವ ದ್ವಾರಪಾಲಕರನ್ನು ಹೊಂದಿದೆ.ಈ ದೇವಾಲಯವನ್ನು ಒಳಗೊಂಡಂತೆ ಪ್ರಾಕಾರವನ್ನು ನಿರ್ಮಿಸಿ ಸುತ್ತಲೂ ಮಂಟಪಗಳನ್ನು ನಿರ್ಮಿಸಿದ್ದಾರೆ. ಈ ದೇವಾಲಯದಲ್ಲಿ ಶಿವರಾತ್ರಿ ಹಬ್ಬದಲ್ಲಿ ವಿಶೇಷ ಉತ್ಸವಾಚರಣೆಗಳು ಜರುಗುತ್ತವೆ.

5.ಈಶ್ವರ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಪೂರ್ವಾಭಿಮುಖಿಯಾಗಿದ್ದು,ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಈ ದೇವಾಲಯದಲ್ಲಿ ಗರ್ಭಗೃಹ ಮಾತ್ರ ಇದ್ದು, ಗರ್ಭಗೃಹದಲ್ಲಿ ಪ್ರತಿಷ್ಟಾಪನಾ ಶಿವಲಿಂಗ ಹಾಗೂ ನಂದಿಯಿದೆ. ಪ್ರತಿ ವರ್ಷ ಶಿವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಮೈಲಾರಲಿಂಗೇಶ್ವರ ದೇವರ ರಥೋತ್ಸವ ಈ ದೇವಾಲಯದ ಬಳಿ ನಡೆಯುತ್ತದೆ.ಗುತ್ತಿನಾಡು ಗ್ರಾಮದ ಬಸವಣ್ಣ ದೇವಾಲಯದಿಂದ ನಂದಿಧ್ವಜ ಪೂಜೆಯ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

6.ಭೂತಪ್ಪ ದೇವಸ್ಥಾನ:
ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯ ಬಳಿ ಇರುವ ಹಳೆ ಊರು ನಿವೇಶನದ ಹತ್ತಿರ ಈ ದೇವಾಲಯವಿದೆ. ಸ್ಥಳೀಯ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿರುವ ಈ ದೇವಾಲಯದಲ್ಲಿ ಭೂತಪ್ಪ ದೇವರನ್ನು ಪೂಜಿಸಲಾಗುತ್ತದೆ.

ಸೀಬಾರ ದನಗಳ ಜಾತ್ರೆ:
ಪ್ರತಿವರ್ಷ ಶಿವರಾತ್ರಿಯ ಮರುದಿನದಿಂದ ಚಾಲನೆ ಪಡೆಯುವ ಈ ಭಾರಿ ದನಗಳ ಜಾತ್ರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಇದನ್ನು ಈಶ್ವರ ದೇವಾಲಯದ ಆವರಣದ ಬಯಲಿನಲ್ಲಿ ನಡೆಸಲಾಗುತ್ತದೆ.
ಇದಕ್ಕೆ ಅಕ್ಕಪಕ್ಕದ ಜಿಲ್ಲೆ ತಾಲ್ಲೂಕುಗಳಿಂದ ದನಗಳನ್ನು ತಂದು ವ್ಯಾಪಾರ ಮಾಡಲಾಗುತ್ತದೆ. ಉತ್ತಮ ತಳಿಯ ವಿವಿಧ ರೀತಿಯ ದನಗಳು ಇಲ್ಲಿ ವ್ಯಾಪಾರ ಮಾಡಲಾಗುತ್ತದೆ.

ಪುಣ್ಯಭೂಮಿ:
ರಾಷ್ಟ್ರ ನಾಯಕ ಎಸ್. ನಿಜಲಿಂಗಪ್ಪನವರ ಸಮಾಧಿ ಸ್ಥಳವಾಗಿದ್ದು, ಇದರ ನಿರ್ವಹಣೆ ಇಲ್ಲಿನ ಟ್ರಸ್ಟ್ ವತಿಯಿಂದ ಮಾಡಲಾಗುತ್ತದೆ. ಸುಂದರವಾದ ಪರಿಸರ, ನಿಜಲಿಂಗಪ್ಪನವರ ಸಾಧನೆ ತಿಳಿಸುವ ಪೋಟೋಗಳು, ಅವರ ಕಾರ್ಯಗಳನ್ನು ಪರಿಚಯಿಸುವ ಸಿಮೆಂಟ್ ಪ್ರತಿಕೃತಿಗಳನ್ನು ಇಲ್ಲಿ ಕಾಣಬಹುದು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now