ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಸುದ್ದಿಒನ್

ಜಾನಕೊಂಡ ಗ್ರಾಮವು ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಚಿತ್ರದುರ್ಗದಿಂದ 9 ಕಿಲೋಮೀಟರ್ ದೂರ ನೈರುತ್ಯಕ್ಕೆ ,ಚಿತ್ರದುರ್ಗ -ಹೊಳಲ್ಕೆರೆ ಮುಖ್ಯ ರಸ್ತೆಯಲ್ಲಿ ಜಾನಕೊಂಡ ಗೇಟ್ ನಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ.ಮೂಲತಃ ಈ ಊರು ಶಾಸನಸ್ತ ಗ್ರಾಮವಾಗಿದೆ.
ಈ ಗ್ರಾಮದ ಪೂರ್ವಕ್ಕೆ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ಪಾಂಡುರಂಗನಾಥ ಸ್ವಾಮಿ ಬೆಟ್ಟದ ಪಶ್ಚಿಮ ಭಾಗದಲ್ಲಿರುವ (ಜನ್ನೇಶ್ವರ)ಜಾನಪ್ಪ ಸ್ವಾಮಿ ದೇವರಿಂದ ಈ ಗ್ರಾಮಕ್ಕೆ ಈ ಹೆಸರು ಬಂದಿದೆ. ಕೊಂಡ ಎಂದರೆ ಬೆಟ್ಟದ ಹತ್ತಿರದ ಗ್ರಾಮ ಎಂದು ಅರ್ಥ. ಇವೆರಡೂ ಸೇರಿ ಜಾನಕೊಂಡ ಹೆಸರಾಗಿದೆ.ಮತ್ತೊಂದು ಐತಿಹ್ಯದ ಪ್ರಕಾರ ಕೊಂಡ ಎನ್ನುವುದಕ್ಕೆ ಇಲ್ಲಿ ಹಿಂದೆ ಯೋಧನ ಪತ್ನಿಯು ಮಹಾಸತಿ ಕಲ್ಲಿಗೆ ಸಂಬಂಧಿಸಿದ ಒಂದು ಕಥೆ ಇದೆ. ಊರು ಬಾಗಿಲಲ್ಲೇ ಎರಡು ಸಮಾಧಿಗಳಿವೆ.
ಒಮ್ಮೆ ಯುದ್ಧಕ್ಕೆ ಹೋದ ಸೈನಿಕ ಎಷ್ಟು ದಿನಗಳಾದರೂ ಬರಲಿಲ್ಲವಂತೆ.ಆಗ ಆತನ ಪತ್ನಿ ತನ್ನ ಗಂಡ ಸತ್ತಿರಬಹುದು ಎಂದುಕೊಂಡು ಊರ ಬಾಗಿಲಲ್ಲಿ ಅಗ್ನಿಕೊಂಡ ಮಾಡಿಸಿ ಬಂಧುಗಳಿಗೆ ತನ್ನ ಗಂಡನ ಸಮಾಧಿಯನ್ನು ತನ್ನ ಸಮಾಧಿಯ ಬಳಿ ಮಾಡಬೇಕೆಂದು ತಿಳಿಸಿ ಅಗ್ನಿಪ್ರವೇಶ ಮಾಡಿದಳಂತೆ. ಆಕೆ ಕೊಂಡ ಪ್ರವೇಶದ ನಂತರ ಆಕೆಯ ಗಂಡ ಬರುತ್ತಾನೆ. ಇದನ್ನು ಕಂಡು ಆತನೂ ಸಾಯುತ್ತಾನೆ.
ಆತನ ಸಮಾಧಿಯನ್ನು ಆಕೆಯ ಸಮಾಧಿಯ ಬಳಿಯೇ ಮಾಡುತ್ತಾರೆ .
ಆ ಸಮಾಧಿಗಳ ಮೇಲೆ ಗಂಡು-ಹೆಣ್ಣಿನ ಚಿತ್ರಗಳನ್ನು ಕೆತ್ತಿ ಸತಿಕಲ್ಲನ್ನು ನಿಲ್ಲಿಸಿದ್ದಾರೆ.ಆ ಕಾರಣದಿಂದಲೂ ಜಾನಕೊಂಡ ಎಂದು ಹೆಸರು ಆಗಿರಬಹುದು ಎಂದು ಹೇಳಲಾಗುತ್ತದೆ. ಗ್ರಾಮದ ಮುಖ್ಯ ರಸ್ತೆಯಲ್ಲಿ ವೀರಯೋಧರ ಸಮಾಧಿ ಇದ್ದು, ಕುದುರೆ ಸವಾರಿಯಲ್ಲಿರುವ ಇಬ್ಬರು ಯೋಧರ ಚಿತ್ರಗಳಿವೆ.ಅವರ ನೆನಪಿಗೆ ನಿರ್ಮಿಸಿದ ಸ್ಮಾರಕ ಇದಾಗಿದ್ದು ವೀರಗಲ್ಲಾಗಿದೆ.
ಅವರ ನೆನಪಿಗಾಗಿ ಎರಡು ಪುಟ್ಟ ಮಂಟಪ ನಿರ್ಮಿಸಲಾಗಿದೆ .
ಗ್ರಾಮದೇವತೆ ಕಾಳಮ್ಮ ದೇವಾಲಯವನ್ನು ಹತ್ತಿರದ ಹುಲ್ಲೂರಿನ ವಿಶ್ವಕರ್ಮ ಜನಾಂಗದವರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. ಪ್ರತಿವರ್ಷ ಈ ಊರಿನವರು ಹೊರಬೀಡು ಆಚರಿಸುವ ಪದ್ಧತಿ ಇದೆ.ಅಂದು ಇಡೀ ಊರಿನ ಜನರು ಊರಿನಿಂದ ಹೊರಗಿನ ಬಯಲಿನಲ್ಲಿ ಇಡೀ ದಿನ ಇದ್ದು,ಹಬ್ಬದ ಅಡುಗೆ ಆಚರಿಸಿ ನೆಂಟರಿಷ್ಟರಿಗೆಲ್ಲ ಕರೆಯುತ್ತಾರೆ .ಸಂಜೆ ವಾಪಸು ಊರಿಗೆ ಬಂದು ಊರುಬಾಗಿಲಿಗೆ ಬಲಿ-ಎಡೆ ಅರ್ಪಿಸಿ ಗ್ರಾಮವನ್ನು ಪ್ರವೇಶಿಸುತ್ತಾರೆ .ಹೀಗೆ ಆಚರಿಸದಿದ್ದರೆ ಊರಿಗೆ ಕೇಡು ಬರುತ್ತದೆ ಎನ್ನುವ ನಂಬಿಕೆ ಇದೆ.
ಗ್ರಾಮದಲ್ಲಿರುವ ಮಂದಿರಗಳು:
1.ಆಂಜನೇಯಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ಮಂದಿರ ದಕ್ಷಿಣಾಭಿಮುಖವಾಗಿ, ಪಾಳೆಗಾರರ ಶೈಲಿಯಲ್ಲಿ 17- 18 ನೇ ಶತಮಾನದಲ್ಲಿ ನಿರ್ಮಾಣವಾಗಿದೆ.ಈ ದೇವಾಲಯದಲ್ಲಿ ಗರ್ಭಗೃಹ ಹಾಗೂ ಸಭಾಮಂಟಪಗಳಿವೆ.
ಗರ್ಭಗೃಹದಲ್ಲಿ ಆಂಜನೇಯನ 3 ಅಡಿ ಎತ್ತರದ ಆಂಜನೇಯನ ಶಿಲ್ಪವಿದೆ.ಈ ದೇವರ ಉಚ್ಚಾಯವನ್ನು ಪ್ರತಿವರ್ಷ ರಾಮನವಮಿ ಹಬ್ಬದಲ್ಲಿ ಮಾಡಲಾಗುತ್ತದೆ. ದೇವಾಲಯದ ಎಡ ಗೋಡೆಯಲ್ಲಿ ಶಾಸನವನ್ನು ಕಾಣಬಹುದು.
2.ಕಾಳಮ್ಮ ದೇವಾಲಯ: ಸ್ಥಳೀಯ ಶೈಲಿಯಲ್ಲಿ ನಿರ್ಮಾಣವಾದ ಈ ಮಂದಿರ ಗ್ರಾಮದ ಮಧ್ಯಭಾಗದಲ್ಲಿದ್ದು, ಪೂರ್ವಾಭಿಮುಖವಾಗಿದೆ. ಈ ದೇವಾಲಯವನ್ನು ಹಿಂದೆ ವಿಶ್ವಕರ್ಮ ಜನಾಂಗದವರು ಈ ದೇವರನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಈ ದೇವರ ತೇರು ಪ್ರತಿವರ್ಷ ನಡೆಯುತ್ತದೆ.
3.ಈಶ್ವರ ದೇವಾಲಯ: ಗ್ರಾಮದ ವಾಯುವ್ಯಕ್ಕೆ ಇರುವ ಈಶ್ವರ ದೇವಾಲಯವು 16- 17 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಪೂರ್ವಾಭಿಮುಖವಾಗಿದ್ದು, ಗರ್ಭಗೃಹ,ಅಂತರಾಳ ಹಾಗೂ ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಮೂರು ಅಡಿ ಎತ್ತರದ ಈಶ್ವರನ ಲಿಂಗವಿದೆ. ಅಂತರಾಳದಲ್ಲಿ ನಂದಿ ಇದೆ.
ಇದರ ಜೊತೆಗೆ ಗ್ರಾಮದಲ್ಲಿ ಬಯಲು ಬಸವೇಶ್ವರ, ಕೊಲ್ಲಾಪುರದಮ್ಮ, ಹೊನ್ನೆತಮ್ಮ ,ಕರಿಯಮ್ಮ,ತಿಮ್ಮಪ್ಪ, ಮರುಳಸಿದ್ಧೇಶ್ವರ, ಸಿದ್ಧರೂಢಸ್ವಾಮಿ ಮುಂತಾದ ದೇವಸ್ಥಾನಗಳಿವೆ.
ಜನ್ನೇಶ್ವರ ಮಂದಿರ:
ಗಂಜಿಗಟ್ಟೆ ಪಾಂಡುರಂಗನಾಥಸ್ವಾಮಿ ಬೆಟ್ಟದ ಪಶ್ಚಿಮ ಭಾಗದಲ್ಲಿ ಜನ್ನೇಶ್ವರ/ಜಾನಪ್ಪ /ಜನತೇಶ್ವರ/ಜನ್ನಾತಪ್ಪ ಎಂದು ಹೇಳಲಾಗುವ ದೇವರ ದೇವಾಲಯ ಇದೆ.
ಪಾಂಡವರ ಕಾಲದಲ್ಲಿ ಧರ್ಮರಾಯನಿಂದ ಇಲ್ಲಿ ಲಿಂಗ ಪ್ರತಿಷ್ಠಾಪಿಸಲ್ಪಟ್ಟಿದೆ ಎನ್ನಲಾಗುತ್ತದೆ. ಆದ್ದರಿಂದ ಇದನ್ನು ಧರ್ಮೇಶ್ವರ ಲಿಂಗವೆಂದು ಹೇಳುತ್ತಾರೆ. ದೇವಾಲಯದ ಬಳಿಯ ಶಾಸನದಿಂದ ಪಲ್ಲವ ರಾಜವಂಶದ,ಹೊಯ್ಸಳರ ಸಾಮಂತನಾದ ಮಾಚಿದೇವನು ತನ್ನ ಹಿರಿಯರಾದ ಸೋಮದೇವ, ಬೊಮ್ಮದೇವರೊಂದಿಗೆ ಹೊನ್ನಕಂದ 30 ಹಾಗೂ ಹೊಳಲ್ಕೆರೆ ನಾಡುಗಳನ್ನು ಆಳುತ್ತಿದ್ದನೆಂದು, ಕ್ರಿಸ್ತಶಕ 1206 ರಲ್ಲಿ ಜನ್ನೇಶ್ವರ ದೇವರಿಗೆ ಧೂಪ,ನೈವೇದ್ಯ, ಜೀರ್ಣೋದ್ಧಾರಕ್ಕಾಗಿ ತೆರಿಗೆ ಮನ್ನಾ ಮಾಡಿ ಭೂದತ್ತಿಯನ್ನು ನೀಡಿದ ವಿಚಾರವನ್ನು ಹಾಗೂ ಇಮ್ಮಡಿ ಬಲ್ಲಾಳನ ಮಗ ನರಸಿಂಗದೇವನು ತಂದೆಯ ಸಾಮ್ರಾಜ್ಯದ ವಿಸ್ತರಣೆಯಲ್ಲಿ ನೆರವಾಗುತ್ತಿದ್ದನೆಂದು ತಿಳಿಸುತ್ತದೆ.
ಶೈವ ಸಂಪ್ರದಾಯಕ್ಕೆ ಸೇರಿದ ಈ ಪ್ರಾಚೀನ ಮಂದಿರ ಇತಿಹಾಸಕ್ಕೆ ಸಾಕ್ಷಿಯಾಗಿ ಪವಿತ್ರ ಸ್ಥಳವಾಗಿ ಇಂದಿಗೂ ಉಳಿದಿದೆ.ಹಿಂದೆ ದೇವರ ದರ್ಶನಕ್ಕೆ ಪಾಳೆಯಗಾರರು ಆಗಮಿಸುತ್ತಿದ್ದರಂತೆ.ಬಂಡೆಗಳ ನಡುವಿನ
ಇಲ್ಲಿನ ಪ್ರಕೃತಿ ಸೌಂದರ್ಯ ಆಹ್ಲಾದಕರವಾಗಿರುತ್ತದೆ.
ದೇವಾಲಯದ ವಿವರಣೆ: ಮಂದಿರವು ಹೊಯ್ಸಳರ ಶೈಲಿಯಲ್ಲಿದ್ದು ,ಗರ್ಭಗೃಹ ಹಾಗೂ ಸಭಾಮಂಟಪಗಳಿಂದ ಕೂಡಿದೆ .
ಗರ್ಭಗೃಹದಲ್ಲಿ ಮೂರು ಅಡಿ ಎತ್ತರದ ಲಿಂಗವಿದೆ.ಸಭಾಮಂಟಪದಲ್ಲಿ ನಾಲ್ಕು ಕಂಬಗಳಿವೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಇಲ್ಲಿ ಸುತ್ತಲಿನ ಗ್ರಾಮದ ಜನರು ಪರೇವು ಆಚರಣೆ ಮಾಡುತ್ತಾರೆ.






















