ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಚಿತ್ರದುರ್ಗ ಜಿಲ್ಲೆಯು ಸಂಪೂರ್ಣ ಕಲ್ಲು ಬೆಟ್ಟಗಳಿಂದ ಆವೃತವಾದ ಒಂದು ಭೂಪ್ರದೇಶವಾಗಿದೆ. ಇದರಲ್ಲಿನ ಹೊಳಲ್ಕೆರೆ ತಾಲ್ಲೂಕು ಸಂಪೂರ್ಣ ಸಮತಟ್ಟು ಭೂ ಪ್ರದೇಶ ಹೊಂದಿದ್ದರೂ ದಕ್ಷಿಣ ಭಾಗದಿಂದ ಉತ್ತರ ಭಾಗಕ್ಕೆ ಲಂಬವಾಗಿ ಗೆರೆ ಕೊರೆದಂತೆ ದೇವರ ಗುಡ್ಡಸಾಲು ಕಂಡು ಬರುತ್ತದೆ. ಇದು ಹೊಸದುರ್ಗ ತಾಲೂಕಿನಿಂದ ಶುರುವಾಗಿ ಉತ್ತರದ ಹರಪನಹಳ್ಳಿ ತಾಲೂಕು ಉಚ್ಚಂಗಿದುರ್ಗದ ತನಕ ಹಬ್ಬಿದೆ. ಹೊಳಲ್ಕೆರೆ ತಾಲೂಕಿನ ದಕ್ಷಿಣ ಭಾಗದಲ್ಲಿ ವ್ಯಾಪಿಸಿರುವ ತಾಳ್ಯ ಹೋಬಳಿಯು ಸಂಪೂರ್ಣ ಒಣ ಭೂಪ್ರದೇಶ ಹೊಂದಿರುವ ಬಯಲುಸೀಮೆಯ ಜಾಗವಾಗಿದೆ.3600 ಅಡಿಗಳಷ್ಟು ಸಮುದ್ರ ಮಟ್ಟಕ್ಕಿಂತ ಅತ್ಯಂತ ಎತ್ತರದ ಬೆಟ್ಟ ಗುಡ್ಡಗಳ ಸಾಲುಗಳು ಹೊಳಲ್ಕೆರೆ ತಾಲೂಕಿನಲ್ಲಿ ಕಂಡುಬರುತ್ತದೆ.ಈ ಪ್ರದೇಶವು ಸಂಪೂರ್ಣ ಕುರುಚಲು ಕಾಡುಗಳಿಂದ ವ್ಯಾಪಿಸಿದ್ದು, ಮಳೆಗಾಲದಲ್ಲಿ ಚಿಕ್ಕಮಗಳೂರು ಕೊಡಗು ಜಿಲ್ಲೆಯ ಹಸಿರಸಿರಿ ಮೈ ವೆತ್ತಂತೆ ಕಂಡುಬಂದರೆ ಬೇಸಿಗೆಯಲ್ಲಿ ಎಲೆ ಉದುರಿಸಿಕೊಂಡು ಒಣಗಿ ಇಲ್ಲಿ ಮತ್ತೆಂದು ಕಾಡು ಕಂಡು ಬರುವುದಿಲ್ಲ ಎಂಬಂತೆ ಕಾಣುತ್ತದೆ. ಹೊಳಲ್ಕೆರೆ ತಾಲೂಕಿನ ಒಂದು ಪ್ರಮುಖ ತಾಣವೇ ಗುಡ್ಡದ ತಿಮ್ಮಪ್ಪ ಸ್ವಾಮಿ ದೇವಾಲಯ. ಇದು ತಾಲೂಕು ಕೇಂದ್ರ ಹೊಳಲ್ಕೆರೆಯಿಂದ ಶಿವಗಂಗ- ಹೊಸದುರ್ಗ ಮಾರ್ಗದಲ್ಲಿ ಕುಮ್ಮಿನಗಟ್ಟ ಗ್ರಾಮದಿಂದ ಒಂದು ಕಿಲೋಮೀಟರ್ ದೂರದಲ್ಲಿದೆ.

ಅಷ್ಟೇನೂ ಎತ್ತರವಿಲ್ಲದ ನೆಲಮಟ್ಟದಿಂದ ಸುಮಾರು 150-200 ಎತ್ತರವಿರುವ ಸಣ್ಣ ಮರಡಿ ಇದಾಗಿದ್ದು ಈ ಜಾಗಕ್ಕೆ ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಹತ್ತಿ ತಲುಪಬೇಕಾಗುತ್ತದೆ. ದೇವಾಲಯದ ಬುಡದ ಬಳಿಯವರೆಗೂ ವಾಹನವನ್ನು ಸಾಗಬಹುದಾದ ಕಚ್ಚಾ ರಸ್ತೆ ಇದೆ.
ಇದು ಒಂದು ಮಧ್ಯಮ ಗಾತ್ರದ ಬೆಟ್ಟವಾಗಿದ್ದು ಇದರ ಮೇಲೆ ಸ್ವಯಂಭೂ ತಿಮ್ಮಪ್ಪ ಸ್ವಾಮಿಯ ದೇವಾಲಯವು ಭಕ್ತರ ನೆಚ್ಚಿನ ತಾಣವಾಗಿದೆ.1940 ರ
ಸುಮಾರಿಗೆ ಇಲ್ಲಿದ್ದ ಸಣ್ಣ ಗುಡಿಯನ್ನು ತೆಗೆದು ನೂತನ ಸ್ಥಳೀಯ ಶೈಲಿಯ ದೇವಾಲಯ ನಿರ್ಮಾಣವಾಗಿದೆ. ಕಿಲೋಮಿಟರ್ ಗಟ್ಟಲೆ ದೂರದಿಂದಲೇ ಈ ದೇವಾಲಯವಿರುವ ಗುಡ್ಡ ಗೋಚರಿಸುತ್ತದೆ.
ಹತ್ತಿರದ ಗ್ರಾಮಗಳ ಬಹಳಷ್ಟು ಜನರು ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಾರೆ ಹಾಗೂ ಇಲ್ಲಿಯೇ ಪರೇವು ಆಚರಣೆ, ಅಡುಗೆ ಪ್ರಸಾದ ಸದಾಕಾಲ ನಡೆಯುತ್ತಲೇ ಇರುತ್ತದೆ. ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ಕುರುಚಲು ಕಾಡು ಇಲ್ಲಿ ಮುಖ್ಯವಾಗಿ ಕಂಡು ಬಂದರೂ ಮಳೆಗಾಲದ ನಂತರ ಬರುವ ಹಿಂಗಾರು ಮಳೆಗೆ ಈ ಪ್ರದೇಶ ಸಂಪೂರ್ಣ ಹಸಿರಿನಿಂದ ಮೈ ತುಂಬಿಕೊಂಡು ಮಲೆನಾಡನ್ನು ಮೀರಿಸುವಂತೆ ಹಸಿರಿನಿಂದ ಕಂಗೊಳಿಸುತ್ತದೆ. ಈ ಪ್ರದೇಶದಲ್ಲಿ ಅಷ್ಟಾಗಿ ಎತ್ತರದ ಮರ ಗಿಡಗಳು ಕಂಡುಬರುವುದಿಲ್ಲ. ಇರುವ ಕುರುಚಲು ಕಾಡು ಪ್ರದೇಶವೇ ಕಿಲೋಮೀಟರ್ ಗಟ್ಟಲೆ ಹರಡಿಕೊಂಡಿದೆ.
ದೇವಾಲಯದ ಮುಂಭಾಗದಿಂದ ದೂರ ದೂರದವರೆಗೆ ಹರಡಿರುವ ವಿಶಾಲವಾದ ಭೂಪ್ರದೇಶ, ದೂರದಲ್ಲಿ ಕಾಣುವ ಗ್ರಾಮಗಳು, ಕಿಲೋಮೀಟರ್ ಗಟ್ಟಲೇ ದೂರದಲ್ಲಿ ಹರಡಿಕೊಂಡಿರುವ, ಗುಡ್ಡ ಸಾಲುಗಳನ್ನು ಗಮನಿಸಬಹುದು. ಜಾನಕಲ್ಲು ಗುಡ್ಡ,ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶ, ನೂರಾರು ಸಂಖ್ಯೆಯಲ್ಲಿ ಹರಡಿಕೊಂಡಿರುವ ಗಾಳಿ ಯಂತ್ರಗಳನ್ನು ಹೊಂದಿರುವ ಗುಡ್ಡಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.
ಬೆಟ್ಟದ ಮೇಲ್ಭಾಗದಿಂದ ಅತ್ಯಂತ ರಮಣೀಯವಾಗಿ ಪ್ರಕೃತಿಯು ಗೋಚರಿಸುತ್ತದೆ. ಬೆಳಗಿನ ಹಾಗೂ ಸಂಜೆಯ ಸಮಯ ಈ ಪ್ರದೇಶಕ್ಕೆ ಭೇಟಿ ನೀಡುವುದು ಅತ್ಯಂತ ಪ್ರಶಸ್ತ ಸಮಯವಾಗಿರುತ್ತದೆ.ಇಲ್ಲಿಂದ
ಸೂರ್ಯಸ್ತಮಾನ, ಸೂರ್ಯೋದಯ ಅತ್ಯಂತ ಸುಂದರವಾಗಿ ಗೋಚರಿಸುತ್ತದೆ. ಮರೆಯಲಾರದ ಆಧ್ಯಾತ್ಮಿಕ ಅನುಭೂತಿ ಪಡೆಯಬಹುದು.
ಮೆಟ್ಟಿಲುಗಳನ್ನು ಏರುವುದು ಅಷ್ಟೇನೂ ಕಷ್ಟಕರವಾಗಿಲ್ಲ ದೇವಾಲಯದ ಹಿಂಭಾಗದಲ್ಲಿ ಇರುವ ಬೃಹತ್ ಮಂಟಪಗಳು ಹಾಗೂ ಬೃಹತ್ ಕಲ್ಲುಗಳ ಮೇಲಿನಿಂದ ನಿಂತು ನೋಡಿದರೆ ಪ್ರಕೃತಿ ಎಷ್ಟು ಸುಂದರವಾಗಿದೆ ಎಂಬುದನ್ನು ಗಮನಿಸಬಹುದು. ಹತ್ತಿ ಬಂದ ಆಯಾಸ ಮನದಲ್ಲಿ ಇರುವ ಚಿಂತೆ ಎಲ್ಲವೂ ಇಲ್ಲಿಗೆ ಆಗಮಿಸಿದ ನಂತರ ಮಾಯವಾಗಿ ಬಿಡುತ್ತದೆ. ವಾರ್ಷಿಕವಾಗಿ ಇಲ್ಲಿ ಭಕ್ತರಿಂದ ಅನ್ನದ ಕೋಟೆ ಎಂಬ ವಿಶಿಷ್ಟ ಸೇವೆ ನಡೆಸಲಾಗುತ್ತದೆ ಇದರಲ್ಲಿ ಅನ್ನ,ಬೆಲ್ಲ ಬಾಳೆಹಣ್ಣು, ವಿವಿಧ ಹಣ್ಣುಗಳು..ಎಲ್ಲವನ್ನು ಮಿಶ್ರಣ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿ ಅನ್ನವನ್ನು ಕೋಟೆಯಂತೆ ಗುಡ್ಡೆ ಹಾಕಿ ಅದನ್ನು ಬಂದ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.
ಖಾಸಗಿ ವಾಹನದಲ್ಲಿ ಹೋಗುವುದು ಉತ್ತಮ ಮುಖ್ಯ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ಶಿವಗಂಗಾ ಗ್ರಾಮದಿಂದ ಇಲ್ಲಿಗೆ ನೇರ ರಸ್ತೆ ಇದ್ದು ಶಿವಗಂಗಾ ಗ್ರಾಮದಿಂದ ಇಲ್ಲಿಗೆ ತಲುಪಲು 15 ಕಿಮೀ ಬರಬೇಕಾಗುತ್ತದೆ.






















