ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಸುದ್ದಿಒನ್
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಭರಮಣ್ಣ ನಾಯಕನದುರ್ಗ ಹೋಬಳಿ (ಬಿ.ದುರ್ಗ)ಯ ಕಡೂರು ಶ್ರೀ ವೀರಭದ್ರ ದೇವಾಲಯವು ಅತ್ಯಂತ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ. ದೇವಾಲಯವು ಈ ಭಾಗದ ಹೆಚ್ಚು ಭಕ್ತರು ಜನರಿಂದ ನಡೆದುಕೊಳ್ಳುವ ಜಾಗವಾಗಿದೆ.
ಹೊಳಲ್ಕೆರೆ ದಾವಣಗೆರೆ ಮುಖ್ಯರಸ್ತೆಯಿಂದ 5 km ಪಶ್ಚಿಮಕ್ಕೆ ಇರುವ ಈ ಸ್ಥಳಕ್ಕೆ ತಲುಪಲು ಉತ್ತಮ ಸಾರಿಗೆ ಹಾಗೂ ರಸ್ತೆ ಸೌಲಭ್ಯವಿದೆ. ದೇವಾಲಯವು ಸಣ್ಣಮಟ್ಟದ ಬೆಟ್ಟದ ಮೇಲೆ ಇದ್ದು ಇದನ್ನು ತಲುಪಲು ಮೆಟ್ಟಿಲುಗಳ ಮೇಲೆ ಹೋಗಬೇಕು. ಇದಕ್ಕೆ ಕಡವೂರು ಎಂಬ ಹೆಸರು ಇದ್ದಿತು. 16 ನೇ ಶತಮಾನದಲ್ಲಿ ವಿಜಯನಗರ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾದ ಈ ದೇವಾಲಯದ ಹಿಂಭಾಗದ ಮೇಲೆ ಬಂಡೆ ಶಾಸನಗಳಿದ್ದು ಹಿಂದೆ ವಿಜಯನಗರದ ಅರಸರು ಈ ದೇವಾಲಯಕ್ಕೆ ದಾನ -ದತ್ತಿ ನೀಡಿದ ವಿವರವಿದೆ.
ಗರ್ಭಗೃಹ,ಅಂತರಾಳ ಸಭಾಮಂಟಪ ಉಯ್ಯಾಲೆಕಂಬ ಮತ್ತು ದೀಪ ಸ್ತಂಭಗಳಿಂದ ಕೂಡಿದ ದೇವಾಲಯವಿದು. ಗರ್ಭಗೃಹವನ್ನು ಬೃಹತ್ತಾದ ಗುಂಡಿನ ಕೆಳಗಡೆ ನಿರ್ಮಿಸಲಾಗಿದ್ದು,ಅದರಲ್ಲಿ ವೀರಭದ್ರನ ನಾಲ್ಕು ಅಡಿ ಎತ್ತರದ ಶಿಲ್ಪವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿರುವರು. ಅಂತರಾಳದ ಬಾಗಿಲುವಾಡದಲ್ಲಿ ಶೈವ ದ್ವಾರಪಾಲಕರನ್ನು ಕಡೆದಿದ್ದಾರೆ. ನವರಂಗದಲ್ಲಿ ನಂದಿಯ ಮೂರ್ತಿ ಇದೆ. ನವರಂಗದಲ್ಲಿ 4 ಕಂಬಗಳಿದ್ದು ಬಹುಮುಖಗಳಲ್ಲಿ ಕಡೆದಿದ್ದಾರೆ. ಇಲ್ಲಿನ ಶಾಸನಗಳು 1540 ರಲ್ಲಿ ವೀರಭದ್ರ ದೇವರಿಗೆ ದಾನ ನೀಡಿದ ವಿವರ ಹಾಗೂ ಮತ್ತೊಂದು ಶಾಸನ 1492 ರಲ್ಲಿ ಮಲ್ಲರಾಜ ನಾಯ್ಕರು ಕೆರೆಯನ್ನು ಕಟ್ಟಿಸಿ, ಜೀರ್ಣೋದ್ಧಾರ ಮಾಡಿದ ಬಗ್ಗೆ ವಿವರವನ್ನು ನೀಡುತ್ತವೆ. ಈ ದೇವರ ಜಾತ್ರೆಯು ಯುಗಾದಿಗೆ ಮುನ್ನ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗುತ್ತದೆ.
ಗುಗ್ಗುಳ,ರಥೋತ್ಸವ, ಓಕುಳಿ ಕಂಕಣ ಮುಂತಾದ ಧಾರ್ಮಿಕ ಆಚರಣೆಗಳು ಜರುಗುತ್ತವೆ. ಬೆಟ್ಟದ ಮೇಲೆ ಪುಷ್ಕರಣಿ ಇದ್ದು ಚರ್ಮರೋಗವನ್ನು ನಿವಾರಿಸುವ ನಂಬಿಕೆಯಿಂದ ಭಕ್ತರು ಇಲ್ಲಿ ಉಳಿದುಕೊಳ್ಳುತ್ತಾರೆ. ಬೆಟ್ಟದ ಮೇಲೆ ದೇವಾಲಯದ ಬಳಿಯಲ್ಲಿ ಪಾತಾಳಗಂಗೆ, ಕೆಂಚಮ್ಮನ ಮಂದಿರ,ಕೋಟೆ ಅವಶೇಷ ಹಾಗೂ ಉಯ್ಯಾಲೆ ಕಂಬವನ್ನು ಕಾಣಬಹುದು. ಗುಡ್ಡದ ತುದಿಯಲ್ಲಿ ಶಿಲಾಯುಗದ ಶಿಲಾನೆಲೆ ಇದ್ದು ಪ್ರತಿ ವರ್ಷ ವಿಜಯದಶಮಿ ಹಬ್ಬದಂದು ಭಕ್ತರು ಮಂಡಕ್ಕಿ ಅರ್ಪಿಸುವ ಆಚರಣೆ ಜರುಗುತ್ತದೆ.







