ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ತುಮಕೂರು ಜಿಲ್ಲೆಯು ಹತ್ತು ಹಲವರು ಕೌತುಕಗಳು, ವಿಸ್ಮಯಗಳನ್ನು ಒಳಗೊಂಡ ಒಂದು ಜಿಲ್ಲೆಯಾಗಿದೆ. ಜಿಲ್ಲೆಯ ತುರುವೇಕೆರೆ ತಾಲೂಕು ಆಧುನಿಕವಾಗಿ ಎಷ್ಟೇ ಬೆಳವಣಿಗೆ ಆಗುತ್ತಾ ಜಾಗತಿಕ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದ್ದರೂ ಇಂದಿಗೂ ತನ್ನ ಹಳೆಯ ಮೂಲ ಬೇರುಗಳಾದ ಗ್ರಾಮಾಂತರ ಸೊಗಡು,ಗ್ರಾಮ್ಯ ಸಂಸ್ಕೃತಿಯಿಂದ ಹೊರ ಬಂದಿಲ್ಲ.. ಇಂತಹ ಗ್ರಾಮೀಣ ಪರಿಸರವಿರುವ ಈ ತಾಲೂಕಿನಾದ್ಯಂತ ಹತ್ತಾರು ಪ್ರವಾಸಿ ತಾಣಗಳನ್ನು ಕಾಣಬಹುದು. ಅದರಲ್ಲಿ ಪ್ರಮುಖವಾಗಿ ಕಂಡುಬರುವುದೇ ಮಲ್ಲಾಘಟ್ಟ ಗಂಗಾ ಕ್ಷೇತ್ರ.
ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಐತಿಹಾಸಿಕವಾಗಿ ಈ ಕ್ಷೇತ್ರವು ಪ್ರಸಿದ್ಧಿ ಪಡೆದಿದೆ.
ತಾಲೂಕಿನ ಅತಿದೊಡ್ಡ ಕೆರೆಯಾದ ಮಲ್ಲಾಘಟ್ಟ ಕೆರೆಯು ಸುಂದರ ಪ್ರಾಕೃತಿಕ ತಾಣದಲ್ಲಿದ್ದು, ಹೇಮಾವತಿ ನಾಲಾ ನೀರಿನ ಆಶ್ರಯದೊಂದಿಗೆ ವರ್ಷದ ಎಲ್ಲಾ ದಿನಗಳಲ್ಲೂ ತುಂಬಿದ್ದರೂ ಅಕ್ಟೋಬರ್ ನಲ್ಲಿ ಮಾತ್ರ ಕೆಲವೊಮ್ಮೆ ಕೆರೆಯು ತುಂಬಿ ಕೋಡಿ ಬೀಳುತ್ತದೆ. ಆ ಸಮಯದಲ್ಲಿ ಕೋಡಿಯ ನೀರು ಜಲಪಾತದಂತೆ ಹರಿಯುತ್ತಾ ಸಹಸ್ರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.
ಅದರಲ್ಲೂ ಹಿಂಗಾರು ಮಳೆಗೆ ತನ್ನ ವೈಭವವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಮೈ ತುಂಬಿಕೊಂಡು ಕೆರೆ ಭರ್ತಿಯಾಗಿ ಜಲಪಾತದಂತೆ ನೀರು ರಭಸವಾಗಿ ಹರಿಯುವುದನ್ನು ನೋಡುವುದೇ ಒಂದು ಸೊಗಸು. ಈ ಕೆರೆಗೆ ಹಿಂಭಾಗದ ನೊಣವಿನಕೆರೆಯ ನೀರು ಹರಿದು ಬಂದು ಸೇರಿ ಮುಂದೆ ಈ ಕೆರೆಯು ತುಂಬಿದ ನಂತರ ತುರುವೇಕೆರೆ ಕೆರೆಗೆ ತಲುಪಿ ನಂತರ ಕುಣಿಗಲ್ ತಾಲೂಕು ಮಾರ್ಕೋನಹಳ್ಳಿ ಜಲಾಶಯಕ್ಕೆ ತಲುಪಿ ಮುಂದೆ ಕಾವೇರಿ ನದಿಗೆ ಸಂಗಮವಾಗುತ್ತದೆ.
ಅಕ್ಟೋಬರ್‌ನಿಂದ ಜನವರಿವರೆಗೆ ಹೇಮಾವತಿ ನಾಲೆಯ ನೀರಿನಿಂದ ಮೈದುಂಬಿ ಕೋಡಿ ಹರಿಯುವ ಈ ಕೆರೆಯ ನೀರು ಒಂದು ಸಣ್ಣ ಜಲಪಾತದ ರೋಚಕ ಅನುಭವಗಳನ್ನು ಪ್ರವಾಸಿಗರಿಗೆ ನೀಡುತ್ತದೆ. ಕೆರೆಯ ಎರಡು ದಿಕ್ಕಿನ ಎರಡೂ ಕಡೆಯ ಕೋಡಿಗಳಲ್ಲಿ ಈಶ್ವರ ದೇವಾಲಯಗಳಿವೆ. ಇದೊಂದು ಪವಿತ್ರ ಕ್ಷೇತ್ರವೆಂದು ಗುರುತಿಸಲ್ಪಡುತ್ತದೆ. ಕೆರೆಯ ಏರಿಯ ಮೇಲೆ ನಿಂತು ನೋಡಿದಾಗ ಸುತ್ತಮುತ್ತಲು ಹರಡಿರುವ ವಿಶಾಲವಾದ ಭತ್ತದ ಗದ್ದೆಗಳು, ಸುಂದರ ಗದ್ದೆ ಬಯಲು,ತೋಪಿನ ವಿಶಾಲ ಅಂಗಳ, ತೂಬಿನ ಮೂಲಕ ರಭಸವಾಗಿ ರೈತರ ಜಮೀನುಗಳತ್ತ ನುಗ್ಗುತ್ತಿರುವ ನೀರನ್ನು ನೋಡುತ್ತಾ ನಿಂತರೆ ದಿನ ಕಳೆಯುವುದೇ ಗೊತ್ತಾಗುವುದಿಲ್ಲ.
ಸೂರ್ಯಾಸ್ತದ ಸಮಯದಲ್ಲಿ ನೇಸರನ ಹೊಂಗಿರಣ ಇಡೀ ಕೆರೆಯನ್ನು ಕೆಂಬಣ್ಣಕ್ಕೆ ತಿರುಗಿಸಿ ಅವಿಸ್ಮರಣೀಯ ಅನುಭವವನ್ನು ಪ್ರವಾಸಿಗರಿಗೆ ನೀಡುತ್ತದೆ.
ಕಿಲೋಮಿಟರ್ ಗಟ್ಟಲೆ ಹಿನ್ನೀರು ಪ್ರದೇಶ ಈ ಕೆರೆಗೆ ಇದ್ದು ಸಾವಿರಾರು ಎಕರೆ ಜಮೀನುಗಳಿಗೆ ನೀರುಣಿಸುತ್ತದೆ. ಹತ್ತಾರು ಚಲನಚಿತ್ರಗಳು ಈ ಭಾಗದಲ್ಲಿ ಚಿತ್ರೀಕರಣಗೊಂಡಿವೆ. ಜಗ್ಗೇಶ್ ಅಭಿನಯದ ಮನ್ಮಥ ಚಿತ್ರದ ಬಹುತೇಕ ಭಾಗವನ್ನು ಇಲ್ಲಿ ಚಿತ್ರೀಕರಿಸಲಾಗಿದೆ.
ಇದೊಂದು ಗಂಗಾ ಕ್ಷೇತ್ರವಾಗಿದ್ದು ಇತ್ತೀಚಿಗೆ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಕೂಡ ಇಲ್ಲಿಗೆ ಬಂದು ಗಂಗಾಪೂಜೆ ನೆರವೇರಿಸಿದ್ದರು. ಇಲ್ಲಿಗೆ ಭೇಟಿ ನೀಡಿ ಗಂಗಾ ಪೂಜೆ ನೆರವೇರಿಸಿದರೆ ನಮ್ಮ ಮನದ ಆಸೆ ಈಡೇರುವುದೆಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಅಕ್ಕ ಪಕ್ಕದ ತಾಲೂಕು, ಗ್ರಾಮಗಳ ಸಾವಿರಾರು ದೇವರುಗಳನ್ನು, ಗ್ರಾಮದೇವತೆಗಳನ್ನು ಹೊಳೆ ಪೂಜೆಗೆಂದು ಇಲ್ಲಿಗೆ ಕರೆದು ತರುತ್ತಾರೆ.
ಉತ್ಸವಮೂರ್ತಿಗಳಿಗೆ ಗಂಗಾಪೂಜೆಯ ಪವಿತ್ರ ಸ್ಥಳವಾಗಿ, ಮಕ್ಕಳಾಗದವರಿಗೆ ಗಂಗಾಪೂಜೆಯ ಸ್ಥಳವಾಗಿ ಈ ಜಾಗವು ಗುರುತಿಸಿಕೊಂಡಿದೆ.
ಮಲ್ಲಾಘಟ್ಟ ಕೆರೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಮತ್ತಷ್ಟು ಅಗತ್ಯ ಸೌಲಭ್ಯಗಳು ದೊರಕಬೇಕಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













