Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಸಿದ್ದೇಶ್ವರ ಸ್ವಾಮಿ ದೇವಾಲಯ ಚಾರಣ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಚಿತ್ರದುರ್ಗ ಜಿಲ್ಲೆಯ ಬಹುತೇಕ ಭಾಗವು ಶಿಲಾ ಪದರಗಳಿಂದಲೇ ಕೂಡಿದೆ. ಜೊತೆಗೆ ಸಂಪೂರ್ಣ ಕಲ್ಲು ಬೆಟ್ಟಗಳಿಂದ ಆವೃತವಾದ ಒಂದು ಭೂಪ್ರದೇಶವಾಗಿದೆ. ಇದರಲ್ಲಿ ಕೆಲವು ಕಡೆ ಹಸಿರು ತುಂಬಿದ ಕುರುಚಲು ಕಾಡುಗಳು ಮಳೆಗಾಲದಲ್ಲಿ ಹಸಿರಿನಿಂದ ತುಂಬಿ ಭೂಲೋಕವೇ ಸ್ವರ್ಗಕ್ಕೆ ಇಳಿಸಿದಂತೆ ಕಂಡು ಬಂದರೆ ಅದೇ ಗುಡ್ಡಗಳು ಬೇಸಿಗೆ ಕಾಲದಲ್ಲಿ ಬಿಸಿಲಿಗೆ ಎಲೆ ಉದುರಿಸಿಕೊಂಡು ಮರುಭೂಮಿಯಂತೆ ಕಂಡುಬರುತ್ತವೆ.

ಇದರಲ್ಲಿನ ಹೊಸದುರ್ಗ ತಾಲ್ಲೂಕು ಸಂಪೂರ್ಣ ಸಮತಟ್ಟು ಭೂ ಪ್ರದೇಶ ಹೊಂದಿದ್ದರೂ ದಕ್ಷಿಣ ಭಾಗದಿಂದ ಉತ್ತರ ಭಾಗಕ್ಕೆ ಲಂಬವಾಗಿ ಗೆರೆ ಕೊರೆದಂತೆ ದೇವರ ಗುಡ್ಡಸಾಲು ಕಂಡು ಬರುತ್ತದೆ.
ಇದು ಹೊಸದುರ್ಗ ನಗರದಿಂದಲೇ ಪ್ರಾರಂಭವಾಗುತ್ತದೆ. ಈ ಗುಡ್ಡ ಸಾಲುಗಳಲ್ಲಿ ಹತ್ತಾರು ದೇವಾಲಯಗಳು,ಹತ್ತಾರು ದೈವ ಸ್ಥಳಗಳು,ಧಾರ್ಮಿಕ ಸ್ಥಳಗಳು ಕಂಡುಬರುವ ಕಾರಣದಿಂದಲೇ ಇದಕ್ಕೆ ಅನ್ವರ್ಥಕವಾಗಿ ದೇವರ ಗುಡ್ಡಸಾಲು ಎನ್ನಲಾಗುತ್ತದೆ. ಸ್ಥಳೀಯವಾಗಿ ಒಂದೊಂದು ಊರಿನ ಪಕ್ಕದಲ್ಲಿರುವ ಒಂದೊಂದು ಗುಡ್ಡಕ್ಕೂ ಒಂದು ಹೆಸರಿದೆ.

 

ಹೊಸದುರ್ಗ ಪಟ್ಟಣದ ಉತ್ತರಕ್ಕೆ ಕಂಡು ಬರುವ ಅತ್ಯಂತ ಎತ್ತರದ ಗಿರಿ ಸಾಲುಗಳಲ್ಲಿ ಸಿದ್ದಪ್ಪನ ಬೆಟ್ಟ ಒಂದು ಇದರ ಕೆಳಭಾಗದಲ್ಲಿ ಸಿದ್ದೇಶ್ವರ ಸ್ವಾಮಿ ದೇವಾಲಯವಿದೆ. ಇದು ತಾಲೂಕು ಕೇಂದ್ರ ಹೊಸದುರ್ಗದಿಂದ ಹೊಳಲ್ಕೆರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 73 ರ ಬಲಭಾಗಕ್ಕೆ ಒಂದೂವರೆ ಕಿಲೋಮೀಟರ್ ಪೂರ್ವಕ್ಕಿದ್ದು ಹೊಸದುರ್ಗದಿಂದ 5 ಕಿ.ಮೀ ದೂರವಿದೆ. ಮುಖ್ಯರಸ್ತೆಯಿಂದ ಇಲ್ಲಿಗೆ ಕಲ್ಲು ಮಣ್ಣಿನ ರಸ್ತೆ ಇದ್ದು ಟಾರ್ ರಸ್ತೆ ಇರುವುದಿಲ್ಲ. ಆದರೆ ದ್ವಿಚಕ್ರ ವಾಹನಗಳು, ಕಾರು ಸಿಗಬಹುದಾದ ರಸ್ತೆಯಿದ್ದು ದೇವಾಲಯದ ವರೆಗೂ ತಲುಪಬಹುದು.

ಅಷ್ಟೇನೂ ಎತ್ತರವಿಲ್ಲದ ನೆಲಮಟ್ಟದಿಂದ 50 ಅಡಿಗಳಷ್ಟು ಎತ್ತರದ ಜಾಗ ಇದಾಗಿದ್ದು ಕಾಲ್ನಡಿಗೆಯಲ್ಲಿ ಸುಲಭವಾಗಿ ಮೆಟ್ಟಿಲುಗಳು ಇದ್ದು ಹತ್ತಿ ತಲುಪಬೇಕಾಗುತ್ತದೆ. ಇಲ್ಲಿ ಸಿದ್ದೇಶ್ವರ ಸ್ವಾಮಿಯ ದೇವಾಲಯವು ಭಕ್ತರ ನೆಚ್ಚಿನ ತಾಣವಾಗಿದೆ. ಪ್ರತಿದಿನ ಬೆಳಿಗ್ಗೆ ಇಲ್ಲಿ ಪೂಜೆ ನಡೆಯುತ್ತದೆ.
ಶಿವರಾತ್ರಿಯಂದು ನೂರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಪ್ರತಿ ಸೋಮವಾರ ಹಾಗೂ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ.

 

ಕುರುಚಲು ಕಾಡು ಇಲ್ಲಿ ಮುಖ್ಯವಾಗಿ ಕಂಡು ಬಂದರೂ ಮಳೆಗಾಲದ ನಂತರ ಬರುವ ಹಿಂಗಾರು ಮಳೆಗೆ ಈ ಪ್ರದೇಶ ಸಂಪೂರ್ಣ ಹಸಿರಿನಿಂದ ಮೈ ತುಂಬಿಕೊಂಡು ಮಲೆನಾಡನ್ನು ಮೀರಿಸುವಂತೆ ಹಸಿರಿನಿಂದ ಕಂಗೊಳಿಸುತ್ತದೆ. ದಿನವಿಡೀ ಇಲ್ಲೇ ಇದ್ದು ಮನ ತಣಿಯೇ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಒಂದು ದಿನದ ಪಿಕ್ನಿಕ್ಕಿಗೆ ಹೇಳಿ ಮಾಡಿಸಿದ ಸ್ಥಳ ಇದಾಗಿದ್ದು ವಾಹನಗಳಲ್ಲಿ ಬರುವ ಬದಲು ಕಾಲ್ನಡಿಗೆ ಆಗಮಿಸಿದರೆ ಹಕ್ಕಿ ಪಕ್ಷಿಗಳ ಕಲರವ, ಹಸಿರು ಸಿರಿಯಿಂದ ಮೈ ತುಂಬಿಕೊಂಡಿರುವ ಬೆಟ್ಟ ಗುಡ್ಡಗಳು, ಪ್ರಶಾಂತತೆ, ವಾಹನಗಳ ಭರಾಟೆಯಿಂದ ಮುಕ್ತವಾದ ನಿಶ್ಯಬ್ದ ತಾಣವನ್ನು ಸವಿಯಬಹುದು.

ಈ ಪ್ರದೇಶದಲ್ಲಿ ಅಷ್ಟಾಗಿ ಎತ್ತರದ ಮರ ಗಿಡಗಳು ಕಂಡುಬರುವುದಿಲ್ಲ.
ಇರುವ ಕುರುಚಲು ಕಾಡು ಪ್ರದೇಶವೇ ಕಿಲೋಮೀಟರ್ ಗಟ್ಟಲೆ ಹರಡಿಕೊಂಡಿದೆ.‌ದೇವಾಲಯದ ಎದುರು ಭಾಗದಲ್ಲಿ ದೊಡ್ಡ ಬಂಡೆಯು ವೀಕ್ಷಣಾ ಸ್ಥಳದಂತೆ ಇದ್ದು ಇಲ್ಲಿ ನಿಂತು ನೋಡಿದರೆ ಮುಂಭಾಗದಿಂದ ದೂರ ದೂರದವರೆಗೆ ಹರಡಿರುವ ವಿಶಾಲವಾದ ಭೂಪ್ರದೇಶ, ಗುಡ್ಡ ಸಾಲುಗಳನ್ನು ಗಮನಿಸಬಹುದು.

 

ಅತ್ಯಂತ ರಮಣೀಯವಾಗಿ ಪ್ರಕೃತಿಯು ಸ್ಥಳದಿಂದ ಗೋಚರಿಸುತ್ತದೆ.
ಮೆಟ್ಟಿಲು ಹತ್ತುವ ಎಡಪದಿಯಲ್ಲಿ ಬೇಡರ ಕಣ್ಣಪ್ಪ ಎನ್ನಲಾಗುವ ವಿಜಯನಗರ ಕಾಲದ ವೀರಗಲ್ಲು ಇದ್ದು ಇದರಲ್ಲಿ ವೀರನು ಕುದುರೆ ಸವಾರನಾಗಿದ್ದು ಯುದ್ಧದಲ್ಲಿ ಹುತಾತ್ಮನಾಗಿರುವುದನ್ನು ಚಿತ್ರಿಸಲಾಗಿದೆ. ದೇವಾಲಯದ ಗರ್ಭಗೃಹದಲ್ಲಿ ಈಶ್ವರ ಲಿಂಗ ಹಾಗೂ ನಂದಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಪೂಜಿಸಲಾಗುತ್ತದೆ.

ಬೆಳಗಿನ ಹಾಗೂ ಸಂಜೆಯ ಸಮಯ ಈ ಪ್ರದೇಶಕ್ಕೆ ಭೇಟಿ ನೀಡುವುದು ಅತ್ಯಂತ ಪ್ರಶಸ್ತ ಸಮಯವಾಗಿರುತ್ತದೆ. ಖಾಸಗಿ ವಾಹನದಲ್ಲಿ ಹೋಗುವುದು ಉತ್ತಮ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...