Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಹೊಸದುರ್ಗದ ಕಲ್ವೇ ರಂಗನಾಥ ಸ್ವಾಮಿ ಬೆಟ್ಟ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಚಿತ್ರದುರ್ಗ ಜಿಲ್ಲೆಯು ಸಂಪೂರ್ಣ ಕಲ್ಲು ಬೆಟ್ಟಗಳಿಂದ ಆವೃತವಾಗಿದ್ದರೂ ಹಚ್ಚಹಸುರಿನ ಭೂ ಮೇಲ್ಮೈ ಹೊಂದಿರುವ ಗುಡ್ಡಗಳ ಸಾಲುಗಳು ಕೂಡ ಕಂಡುಬರುತ್ತವೆ. ಇಲ್ಲಿನ ಹೊಸದುರ್ಗ ತಾಲೂಕಿನಿಂದ ಪ್ರಾರಂಭಿಸಿ ಹೊಳಲ್ಕೆರೆ,ದಾವಣಗೆರೆ ತಾಲೂಕು, ಜಗಲೂರು ತಾಲೂಕು, ಹರಪನಹಳ್ಳಿ ತಾ.ವರೆಗೂ ನೇರ ಗುಡ್ಡ ಸಾಲು ಕಿ.ಮೀಗಟ್ಟಲೆ ಚಾಚಿಕೊಂಡಿದೆ. ಇದನ್ನು ಸ್ಥಳೀಯವಾಗಿ ದೇವರಗುಡ್ಡದ ಕಾಡು ಎಂದೇ ಪರಿಗಣಿಸಲಾಗುತ್ತದೆ. ಈ ಗುಡ್ಡದ ಸಾಲು ಸಾಗುವ
ಹೊಳಲ್ಕೆರೆ ತಾಲ್ಲೂಕು ಸಂಪೂರ್ಣ ಸಮತಟ್ಟು ಭೂ ಪ್ರದೇಶ ಹೊಂದಿದ್ದರೂ ದಕ್ಷಿಣ ಭಾಗದಿಂದ ಉತ್ತರ ಭಾಗಕ್ಕೆ ಲಂಬವಾಗಿ ಗೆರೆ ಕೊರೆದಂತೆ ದೇವರ ಗುಡ್ಡಸಾಲು ಕಂಡು ಬರುತ್ತದೆ.

 

ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ ಎತ್ತರದ ಗಿರಿ ಶಿಖರಗಳನ್ನು ಹೊಂದಿದ್ದರೆ ಮುಂದುವರಿದಂತೆ ಅಲ್ಲಲ್ಲಿ ಎತ್ತರದ ಹಾಗೂ ಸಣ್ಣ ಪ್ರಮಾಣದ ಗಿರಿ ಸಾಲುಗಳು ಕಂಡುಬರುತ್ತವೆ. . ಹೊಳಲ್ಕೆರೆ ತಾಲೂಕಿನ ಭಾಗದಲ್ಲಿ ವ್ಯಾಪಿಸಿರುವ ಸಂಪೂರ್ಣ ಒಣ ಭೂಪ್ರದೇಶ ಹೊಂದಿರುವ ಈ ಬೆಟ್ಟ ಗುಡ್ಡಗಳು ಬಯಲುಸೀಮೆಯ ಜಾಗವಾಗಿದೆ.3600 ಅಡಿಗಳಷ್ಟು ಸಮುದ್ರ ಮಟ್ಟಕ್ಕಿಂತ ಅತ್ಯಂತ ಎತ್ತರದ ಬೆಟ್ಟ ಗುಡ್ಡಗಳ ಸಾಲುಗಳು ಹೊಳಲ್ಕೆರೆ ತಾಲೂಕಿನಲ್ಲಿ ಕಂಡುಬರುತ್ತದೆ.

 

ಮಳೆಗಾಲ ಹಾಗೂ ನಂತರದ ದಿನಗಳಲ್ಲಿ
ಈ ಈ ಸ್ಥಳ ಹಾಗೂ ಬೆಟ್ಟ ಸಾಲುಗಳ ಪ್ರದೇಶ ಹಸಿರಸಿರಿ ಮೈ ವೆತ್ತಂತೆ ಕಂಡುಬರುತ್ತವೆ . ಈ ಗುಡ್ಡ ಸಾಲುಗಳಲ್ಲಿ ಬಹಳಷ್ಟು ವೈವಿಧ್ಯಮಯ ಧಾರ್ಮಿಕ ಆಧ್ಯಾತ್ಮಿಕ ಕೇಂದ್ರಗಳು ಕಂಡುಬರುತ್ತವೆ. ಪ್ರಕೃತಿಯಲ್ಲಿ ದೇವರಿದ್ದಾನೆ ಎಂಬುದನ್ನು ಇಂತಹ ಸ್ಥಳಗಳು ತೋರಿಸಿಬಿಡುತ್ತವೆ. ಪ್ರಕೃತಿಯ ಜೊತೆಗೆ ಧಾರ್ಮಿಕ ಮಹತ್ವವನ್ನು ಪ್ರತಿ ಮನುಷ್ಯನು ಪಡೆದುಕೊಳ್ಳಬೇಕೆಂದು ನಮ್ಮ ಹಿರಿಯರು ಮಾಡಿದ ಒಂದು ಸರಳ ಉಪಾಯದಂತೆ ಇದು ಕಂಡುಬಂದರೂ ಪ್ರಕೃತಿಯಿಂದ ದೂರವಾಗಿ ಎಂದಿಗೂ ಯಾವ ಮನುಷ್ಯನು ಬಾಳಬಾರದು ಎಂಬುದೇ ಈ ಬೆಟ್ಟದ ಮೇಲೆ ಇರುವ ದೇವರುಗಳ ಮಹತ್ವವಾಗಿದೆ.
ಜನರಿಂದ ದೂರ ಉಳಿದು ಜನಜಂಗುಳಿಯಿಂದ ಸದಾ ಕಾಲ ಅಂತರ ಕಾಯ್ದುಕೊಂಡಿರುವ ಒಂದು ಪ್ರಮುಖ ಸ್ಥಳವೇ ಇಲ್ಲಿನ ಶ್ರೀ ಕಲ್ವೇ ರಂಗನಾಥ ಸ್ವಾಮಿ ಬೆಟ್ಟ. ಇದು
ಹೊಳಲ್ಕೆರೆ ತಾಲೂಕಿನಲ್ಲಿ ಕಂಡು ಬರುವ ಒಂದು ಪ್ರಮುಖ ಧಾರ್ಮಿಕ ತಾಣ.

 

ಇದು ತಾಲೂಕು ಕೇಂದ್ರ ಹೊಳಲ್ಕೆರೆಯಿಂದ ಚಿತ್ರಹಳ್ಳಿ- ಅಮೃತಾಪುರ- ಕೇಶವಪುರ ಮಾರ್ಗದಲ್ಲಿದ್ದು, ಕೇಶವಾಪುರ ಗ್ರಾಮದಿಂದ ಪಶ್ಚಿಮಕ್ಕೆ 3 ಕಿಲೋಮೀಟರ್ ಬೆಟ್ಟ ಕಾಡುಗಳ ಹಾದಿಯಲ್ಲಿ ಸಾಗಬೇಕು. ಬೆಟ್ಟದ ಬುಡದವರೆಗೂ ಬೈಕ್ ಕಾರು ಹಾದಿಯಿದ್ದು ನಂತರ ಒಂದು ಕಿಲೋಮೀಟರ್ ಕಾಲು ನಡಿಗೆಯಲ್ಲಿ ಬೆಟ್ಟವನ್ನು ಹತ್ತಬೇಕಾಗುತ್ತದೆ. ದೂರದಿಂದ ನೋಡಿದರೆ ಒಂದು ಸಣ್ಣ ಬೆಟ್ಟದಂತೆ ಕಂಡುಬರುವ ಈ ಬೆಟ್ಟಸಾಲು ಹತ್ತಿದಂತೆಲ್ಲ ತನ್ನ ಬೃಹದಾಕಾರದ ಎತ್ತರವನ್ನು ಅನಾವರಣ ಗೊಳಿಸಿ ಆಯಾಸವನ್ನು ಚಾರಣಿಗರಿಗೆ ಗೊತ್ತಾಗುವಂತೆ ಮಾಡುತ್ತದೆ. ಹತ್ತಿದಂತೆ ಏದುಸಿರು ಹೆಚ್ಚಾಗುತ್ತಾ ಸಾಗುತ್ತದೆ. ಎಷ್ಟೇ ಚಳಿ ಮಳೆ ಜಿನುಗುತ್ತಿದ್ದರೂ ಹತ್ತುವಾಗ ಬೆವರಿನಿಂದ ಸುಸ್ತಾಗಿ ಬಿಡುತ್ತದೆ.

 

ನೆಲಮಟ್ಟದಿಂದ ಸುಮಾರು 400 -600ಅಡಿ ಎತ್ತರವಿರುವ ಬೆಟ್ಟ ಇದಾಗಿದ್ದು ಈ ಜಾಗಕ್ಕೆ ಕಾಲ್ನಡಿಗೆಯಲ್ಲಿಯೇ ಹತ್ತಿ ತಲುಪಬೇಕಾಗುತ್ತದೆ.
ಇದು ಒಂದು ಮಧ್ಯಮ ಗಾತ್ರದ ಬೆಟ್ಟವಾಗಿದ್ದು ಇದರ ಮೇಲೆ ಸ್ವಯಂಭೂ ರಂಗನಾಥ ಸ್ವಾಮಿಯು ಬಂಡೆಯಲ್ಲಿ ಒಡ ಮೂಡಿದ್ದು 20ನೇ ಶತಮಾನದ ಆದಿಯಲ್ಲಿ ಸ್ಥಳೀಯ ಕಲ್ಲುಗಳನ್ನು ಬಳಸಿ ಸ್ಥಳೀಯ ಶೈಲಿಯಲ್ಲಿ ದೇವಾಲಯವನ್ನು ಹಿಂದೆ ನಿರ್ಮಿಸಲಾಗಿತ್ತು.
ತದನಂತರ ಇತ್ತೀಚಿಗೆ ಇದರ ನವೀಕರಣ ನಡೆಸಲಾಗಿ ಇದೀಗ ನೂತನ ದೇವಾಲಯವನ್ನು ನಿರ್ಮಿಸಲಾಗಿದೆ.
ಈ ದೇವಾಲಯವು ಭಕ್ತರ ನೆಚ್ಚಿನ ತಾಣವಾಗಿದೆ.
ದೂರದಿಂದ ನೋಡಿದಾಗ ಇಂತಹ ದೊಡ್ಡ ದೇವಾಲಯವು ಮರ ಗಿಡಗಳ ಹಾಗೂ ಬೆಟ್ಟದ ಮಧ್ಯದಲ್ಲಿ ಅತ್ಯಂತ ಸಣ್ಣ ಗಾತ್ರದಲ್ಲಿ ಕಂಡು ಬರುತ್ತದೆ.
ಹತ್ತಿರದ ಗ್ರಾಮಗಳ ಬಹಳಷ್ಟು ಜನರು ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಾರೆ ಹಾಗೂ ಇಲ್ಲಿಯೇ ಪರೇವು ಆಚರಣೆ, ಅಡುಗೆ ಪ್ರಸಾದ ಸದಾಕಾಲ ನಡೆಯುತ್ತಲೇ ಇರುತ್ತದೆ.

 

ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ.
ಕುರುಚಲು ಕಾಡು ಇಲ್ಲಿ ಮುಖ್ಯವಾಗಿ ಕಂಡು ಬಂದರೂ ಮಳೆಗಾಲದ ನಂತರ ಬರುವ ಹಿಂಗಾರು ಮಳೆಗೆ ಈ ಪ್ರದೇಶ ಸಂಪೂರ್ಣ ಹಸಿರಿನಿಂದ ಮೈ ತುಂಬಿಕೊಂಡು ಮಲೆನಾಡನ್ನು ಮೀರಿಸುವಂತೆ ಹಸಿರಿನಿಂದ ಕಂಗೊಳಿಸುತ್ತದೆ. ಈ ಪ್ರದೇಶದಲ್ಲಿ ಅಷ್ಟಾಗಿ ಎತ್ತರದ ಮರ ಗಿಡಗಳು ಕಂಡುಬರುವುದಿಲ್ಲ.ಇರುವ ಕುರುಚಲು ಕಾಡು ಪ್ರದೇಶವೇ ಕಿಲೋಮೀಟರ್ ಗಟ್ಟಲೆ ಹರಡಿಕೊಂಡಿದೆ. ದಾರಿಯ ಮಧ್ಯದಲ್ಲಿ ಹತ್ತಾರು ವೈವಿಧ್ಯಮಯ ಪ್ರಾಣಿ ಪಕ್ಷಿಗಳು ಕಣ್ಣಿಗೆ ಬೀಳುತ್ತವೆ.

ದೇವಾಲಯದ ಮುಂಭಾಗದಿಂದ ದೂರ ದೂರದವರೆಗೆ ಹರಡಿರುವ ವಿಶಾಲವಾದ ಭೂಪ್ರದೇಶ, ದೂರದಲ್ಲಿ ಕಾಣುವ ಗ್ರಾಮಗಳು, ಕಿಲೋಮೀಟರ್ ಗಟ್ಟಲೇ ದೂರದಲ್ಲಿ ಹರಡಿಕೊಂಡಿರುವ, ಗುಡ್ಡ ಸಾಲುಗಳನ್ನು ಗಮನಿಸಬಹುದು. ಪೂರ್ವ ದಿಕ್ಕಿಗೆ ವಿಶಾಲವಾಗಿ ಚಾಚಿಕೊಂಡಿರುವ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಪ್ರದೇಶ ಸುಮಾರು ಇಲ್ಲಿಂದ 45km -50 km ದೂರವಿದ್ದು ದೇವಾಲಯದ ಮುಂಭಾಗದಿಂದ ವಾತಾವರಣವು ಶುಭ್ರವಾಗಿದ್ದಾಗ ಅತ್ಯಂತ ಸ್ಪಷ್ಟವಾಗಿ ಬರಿಗಣ್ಣಿಗೆ ಗೋಚರಿಸುತ್ತದೆ.

 

ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶದ ಬಳಿಯ ಗುಡ್ಡ ಸಾಲುಗಳು, ಅಲ್ಲಿ ಚಾಚಿಕೊಂಡಿರುವ ನೂರಾರು ಗಾಳಿ ಯಂತ್ರಗಳು ಚಿತ್ರದುರ್ಗದ ಬೆಟ್ಟ- ಕೋಟೆ , ಹೊರಕೆರೆದೇವರಪುರ ಹಾಗೂ ಪೂರ್ವ ದಿಕ್ಕಿನ ಹತ್ತಾರು ಸಣ್ಣ ದೊಡ್ಡ ಪಟ್ಟಣಗಳನ್ನು ಗುರುತಿಸಬಹುದು. ಈ ಗುಡ್ಡ ಸಾಲಿನಲ್ಲಿ ಗಾಳಿಯಂತ್ರಗಳು ಅಳವಡಿಸಲಾಗಿಲ್ಲ. ಹತ್ತಿರದ ಗುಡ್ಡದ ಮೇಲೆ ಮಾತ್ರ ಇವುಗಳನ್ನು ಕಾಣಬಹುದು. ಆ ಕಾರಣಕ್ಕೆ ಜನರೇ ಸಣ್ಣದಾಗಿ ನಿರ್ಮಿಸಿಕೊಂಡಿರುವ ರಸ್ತೆಗಳು ಮಾತ್ರ ಕಂಡುಬರುತ್ತವೆ.‌ ದೇವಾಲಯದ ಮುಂಭಾಗದಲ್ಲಿ ವಿಶಾಲ ಸಮತಟ್ಟು ಜಾಗವಿದ್ದು ಇಲ್ಲಿಂದ ನಿಂತು ನೋಡಿದರೆ ಪ್ರಕೃತಿಯ ವಾತಾವರಣವು ರಮಣೀಯವಾಗಿ ಗೋಚರಿಸುತ್ತದೆ. ಬೆಳಗಿನ ಹಾಗೂ ಸಂಜೆಯ ಸಮಯ ಈ ಪ್ರದೇಶಕ್ಕೆ ಭೇಟಿ ನೀಡುವುದು ಅತ್ಯಂತ ಪ್ರಶಸ್ತ ಸಮಯವಾಗಿರುತ್ತದೆ.ಇಲ್ಲಿಂದ ಸೂರ್ಯೋದಯ ಅತ್ಯಂತ ಸುಂದರವಾಗಿ ಗೋಚರಿಸುತ್ತದೆ. ಮರೆಯಲಾರದ ಆಧ್ಯಾತ್ಮಿಕ ಅನುಭೂತಿ ಪಡೆಯಬಹುದು. ದೇವಾಲಯದ ಹಿಂಭಾಗದ ಪ್ರಕೃತಿಯು ಹಿಮವತ್ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಅರಣ್ಯ ಪ್ರದೇಶವನ್ನು ನೆನಪಿಸಿಬಿಡುತ್ತದೆ.

ವಾರ್ಷಿಕವಾಗಿ ಇಲ್ಲಿ ಭಕ್ತರಿಂದ ಮಳೆ ತಡವಾದರೆ,ಮಳೆಯು ಬಾರದಿದ್ದರೆ ವಿಶೇಷ ಪೂಜೆಗಳನ್ನು ಈ ಜಾಗದಲ್ಲಿ ನಡೆಸಲಾಗುತ್ತದೆ. ಖಾಸಗಿ ವಾಹನದಲ್ಲಿ ಹೋಗುವುದು ಉತ್ತಮ. ಮುಖ್ಯ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಹೊಳಲ್ಕೆರೆ -ಚಿತ್ರದುರ್ಗ ಮಾರ್ಗದ ಮಧ್ಯದಲ್ಲಿ ಇರುವ ಚಿತ್ರಹಳ್ಳಿ ಗ್ರಾಮದಿಂದ ಇಲ್ಲಿಗೆ ನೇರ ರಸ್ತೆ ಇದ್ದು ನಾವು ತಿರುವು ತೆಗೆದುಕೊಳ್ಳುವ ಕೇಶವಾಪುರ ಕ್ರಾಸ್ ನಲ್ಲಿರುವ ಹನುಮನಕಟ್ಟೆ ಶ್ರೀ ಕೆಂಚಾಂಬಿಕ ದೇವಾಲಯವನ್ನು ಕೂಡ ಭಕ್ತರು ಸಂದರ್ಶಿಸಬಹುದು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now