Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಹೊಸದುರ್ಗ – ಗವಿ ರಂಗನಾಥ ಸ್ವಾಮಿ ದೇವರ ಬೆಟ್ಟ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಹತ್ತಾರು ಪುಣ್ಯಕ್ಷೇತ್ರಗಳು, ಹತ್ತಾರು ಪ್ರವಾಸೋದ್ಯಮ ಸ್ಥಳಗಳು ಕಂಡುಬರುತ್ತವೆ. ತಾಲೂಕಿನ ಬಹಳಷ್ಟು ಕಡೆ ಬೆಟ್ಟ ಗುಡ್ಡಗಳ ಸಾಲುಗಳು ಕಂಡುಬರುತ್ತವೆ. ಅದರಲ್ಲಿ ನೈಸರ್ಗಿಕ ಒಡಮೂಡಿದ ದೇವರುಗಳು, ಮಾನವ ನಿರ್ಮಿತ ದೇವಾಲಯಗಳು ಕಂಡುಬರುತ್ತವೆ.

 

ತಾಲೂಕಿನ ಹಾಗೂ ಜಿಲ್ಲೆಯ ಒಂದು ಪ್ರಸಿದ್ಧ ಪ್ರಮುಖವಾದ ನೈಸರ್ಗಿಕ ದೈವ ಸ್ಥಾನವೇ ಶ್ರೀ ಗವಿರಂಗನಾಥ ಸ್ವಾಮಿ ದೇವಾಲಯ. ಇದು ಹೊಸದುರ್ಗ ತಾಲ್ಲೂಕು ಶ್ರೀರಾಂಪುರ ಹೋಬಳಿಯಲ್ಲಿ ಕಂಡುಬರುವ ಪ್ರಮುಖವಾದ ರಾಜ್ಯದ ಮುಜರಾಯಿ ಇಲಾಖೆಯ ಎ ಗ್ರೇಡ್ ದೇವಾಲಯವಾಗಿದೆ. ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ರಾಜ್ಯದ ಎಲ್ಲಾ ಕಡೆಗಳಿಂದ ಈ ದೇವರ ದರ್ಶನಕ್ಕೆ ಆಗಮಿಸುತ್ತಾರೆ. ನೂರಾರು ಸಿನಿಮಾ ತಾರೆಯರು ,ಚಿತ್ರನಟರು, ಖ್ಯಾತನಾಮರ ಮನೆ ದೇವರಾಗಿರುವ ಈ ದೇವರಿಗೆ ಲಕ್ಷಾಂತರ ಭಕ್ತರು ನಡೆದುಕೊಳ್ಳುತ್ತಾರೆ. ಬಂದ ಭಕ್ತರಿಗೆ ಇಲ್ಲಿ ವಸತಿಗೃಹಗಳು ಊಟದ ಸೌಲಭ್ಯ ಉಳಿದುಕೊಳ್ಳಲು ಹಾಗೂ ಅಡುಗೆ ಮಾಡಿಕೊಳ್ಳಲು ಎಲ್ಲಾ ಅನುಕೂಲಗಳಿವೆ.
ಗುಡ್ಡದ ಕೆಳಭಾಗದ ದಕ್ಷಿಣ ದಿಕ್ಕಿನಲ್ಲಿ ಪ್ರತ್ಯೇಕವಾಗಿ ಮಾಂಸಹಾರ ನೈವೇದ್ಯ ಮಾಡಲು ಭೂತಪ್ಪ ಸ್ವಾಮಿ ದೇವಾಲಯ ಕೂಡ ಇರುತ್ತದೆ.

 

 

ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶದ ಶ್ರೀಕಾಕುಳಂ ಬಿಟ್ಟರೆ ಇಲ್ಲಿ ಮಾತ್ರ ಕೂರ್ಮಾವತಾರದಲ್ಲಿ (ಆಮೆ )ವಿಷ್ಣು ಪ್ರಕಟಗೊಂಡಿದ್ದಾನೆ.
ಹಾಗಾಗಿ ಇದೊಂದು ವಿಶಿಷ್ಟ ಸ್ಥಾನವಾಗಿದೆ. ನೆಲಮಟ್ಟದಿಂದ ಬೆಟ್ಟದ ಮೇಲಿನ ರಂಗನಾಥ ಸ್ವಾಮಿಯ ಗುಹಾಂತರ ದೇವಾಲಯಕ್ಕೆ ಮೆಟ್ಟಿಲುಗಳ ವ್ಯವಸ್ಥೆ ಇದ್ದು ಸುಲಭವಾಗಿ ಹತ್ತಿ ನಡೆದು ತಲುಪವುದು. ಇದೀಗ ನೇರ ದೇವಾಲಯದ ಬಳಿಯವರೆಗೂ ಸಾಗಲು ರಸ್ತೆ ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ಕೂರ್ಮ ಕ್ಷೇತ್ರವೆಂದು ಪ್ರಸಿದ್ಧವಾದ ಸ್ಥಳ ಇದೊಂದೇ ಆಗಿದೆ. ಮೈಸೂರಿನಲ್ಲಿರುವ ಬೆಟ್ಟದ ಚಾಮುಂಡೇಶ್ವರಿ ದೇವಿಗೆ ನಡೆಯುವ ಪೂಜಾ ವಿಧಿ ವಿಧಾನಗಳೇ ಈ ದೇವರಿಗೂ ಸಲ್ಲಿಸಲಾಗುತ್ತದೆ. ಹಿಂದೆ ಇಲ್ಲಿಗೆ ಆಗಮಿಸಿದ್ದ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಇಲ್ಲಿನ ಭಕ್ತಿಯೊಬ್ಬಳು ಇದರ ಬಗ್ಗೆ ಕೋರಿಕೆ ಸಲ್ಲಿಸಿದ ಕಾರಣ ಮಹಾರಾಜರು ಇದೇ ರೀತಿ ಪೂಜೆ ನಡೆಸುವ ಬಗ್ಗೆ ಒಪ್ಪಿಗೆ ಸೂಚಿಸಿದ್ದರಂತೆ.

 

17 -18 ನೇ ಶತಮಾನದ ಪಾಳೇಗಾರರ ಶೈಲಿಯಲ್ಲಿ ಉತ್ತರಭಿಮುಖವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ನೈಸರ್ಗಿಕ ಬಂಡೆ ಗುಹಾ ದೇವಾಲಯವಾಗಿರುವ ಈ ದೇವಸ್ಥಾನದಲ್ಲಿ ಗೃಹ ಗರ್ಭಗೃಹ,ಸಭಾಮಂಟಪ ಹಾಗೂ ಮಹಾಮಂಟಪಗಳಿವೆ.

ವಿಷ್ಣುವಿನ ಉದ್ಭವ ರಂಗನಾಥ ಸ್ವಾಮಿಯ ಮೂರ್ತಿ ಇದೆ. ದೇವಾಲಯದ ಸಭಾಮಂಟಪದಲ್ಲಿ ಭೂತಪ್ಪ, ಕೆಂಚರಾಯ, ಕಾಡವರಾಯ, ಆಂಜನೇಯ..ಮುಂತಾದ ದೇವಾಲಯಗಳು ಇವೆ. ಇಲ್ಲಿ ನಡೆಯುವ ದೊಡ್ಡೆಡೆ ಸೇವೆಯು ರಾಜ್ಯದಾದ್ಯಂತ ಭಕ್ತರನ್ನು ಸೆಳೆಯುತ್ತದೆ. ಈ ಸೇವೆಯಲ್ಲಿ ಅನ್ನ,ಬಾಳೆಹಣ್ಣು, ಸಕ್ಕರೆ, ತುಪ್ಪಗಳನ್ನು ಹಾಕಿ ಕಲಸಿ ವೃತ್ತಾಕಾರವಾಗಿ ಕೋಟೆಯಂತೆ ಕಟ್ಟಿ ನಂತರ ದೇವರಿಗೆ ಶಂಖ, ಕಹಳೆ, ಗಂಟೆಗಳನ್ನು ಬಾರಿಸುತ್ತ ಪೂಜೆಯನ್ನು ಮಾಡುತ್ತಾರೆ ಪೂಜೆಯ ಬಳಿಕ ದೀಕ್ಷೆ ಪಡೆದ ದಾಸಯ್ಯಗಳು ಅನ್ನವನ್ನು ಸೇವಿಸುವ ಪರಿಪಾಠವಿದೆ.

 

ಪ್ರತಿ ವರ್ಷ ಇಲ್ಲಿ ಪೂಜಾ ಉತ್ಸವ ಜಾತ್ರೆಗಳು ಅದ್ದೂರಿಯಾಗಿ ನಡೆಯುತ್ತವೆ.
ವಿಜಯನಗರ ಕಾಲದ ಮಂಟಪಗಳನ್ನು ಸ್ಪಷ್ಟವಾಗಿ ಇಲ್ಲಿ ಗುರುತಿಸಬಹುದು.
ಹೊಸದುರ್ಗ, ತಿಪಟೂರುಗಳಿಂದ ಇಲ್ಲಿಗೆ ನೇರ ಸಾರಿಗೆ ವ್ಯವಸ್ಥೆ ಇರುತ್ತದೆ ಖಾಸಗಿ ವಾಹನಗಳಲ್ಲೂ ಭಕ್ತರು ಆಗಮಿಸುತ್ತಾರೆ.
ದೇವಾಲಯದ ಮೇಲ್ಭಾಗಕ್ಕೆ ತಲುಪಲು ಕಾಲ್ನಡಿಗೆಯಲ್ಲಿ ಗುಡ್ಡದ ತುದಿಗೆ ಹೋಗಬಹುದಾಗಿದ್ದು,ಇಲ್ಲಿ ಒಂದು ಮಂಟಪವನ್ನು ನಿರ್ಮಿಸಲಾಗಿದ್ದು ಇಲ್ಲಿಂದ ಸುತ್ತಮುತ್ತಲ ಪರಿಸರವನ್ನು ಸುಂದರವಾಗಿ ವೀಕ್ಷಣೆ ಮಾಡಬಹುದು. ಈ ಗವಿರಂಗಾಪುರ ಗ್ರಾಮವು ಚಿತ್ರದುರ್ಗ ಜಿಲ್ಲೆಯ ಕೊನೆಯ ಗಡಿಗ್ರಾಮವಾಗಿದ್ದು ಮುಂದೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾ.ಪ್ರಾರಂಭವಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...