Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ನಮ್ಮ ಊರು ನಮ್ಮ ಹೆಮ್ಮೆ | ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಕರ್ನಾಟಕದ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯಲ್ಲಿ ಬರುವ ಒಂದು ಪ್ರಸಿದ್ಧ ಧಾರ್ಮಿಕ ವೈಷ್ಣವ ಕ್ಷೇತ್ರವಾಗಿದೆ. ಈ ಬೆಟ್ಟವು ಸಮುದ್ರ ಮಟ್ಟಕ್ಕಿಂತ ಸುಮಾರು 4771 ಅಡಿಗಳಷ್ಟು ಎತ್ತರವಾಗಿದೆ. ಜೊತೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಅತ್ಯಂತ ಎತ್ತರದ ಶಿಖರವಾಗಿದೆ.

 

ಮೈಸೂರಿನಿಂದ 80 ಕಿಲೋಮೀಟರ್, ಗುಂಡ್ಲುಪೇಟೆಯಿಂದ ಇಪ್ಪತ್ತು ಕಿಲೋಮೀಟರ್ ದೂರವಿರುವ ಈ ಸ್ಥಳಕ್ಕೆ ಗುಂಡ್ಲುಪೇಟೆ- ಬಂಡೀಪುರ-ಊಟಿ ಹೆದ್ದಾರಿಯಲ್ಲಿ ಬರುವ ಹಂಗಳದಿಂದ ಪಶ್ಚಿಮಕ್ಕೆ 7 ಕಿಲೋಮೀಟರ್ ದೂರಕ್ಕೆ ಇರುವ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿಗೆ ತಲುಪಿ ಅಲ್ಲಿಂದ ಸರ್ಕಾರಿ ಬಸ್ಗಳಲ್ಲಿ ದೇವಾಲಯ ತಲುಪಬೇಕು.
ಈ ಬೆಟ್ಟವು ಸದಾಕಾಲ ಹಿಮದಿಂದ ಆವೃತವಾಗಿರುವ ಕಾರಣಕ್ಕೆ ಜೊತೆಗೆ ಬೆಟ್ಟದ ಮೇಲೆ ಶ್ರೀ ಗೋಪಾಲಸ್ವಾಮಿ ದೇವಸ್ಥಾನ ಇರುವುದರಿಂದ ಈ ಬೆಟ್ಟಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಬಂದಿದೆ.

 

ಪ್ರಕೃತಿಯ ಅತ್ಯಂತ ರಮಣೀಯ ಸ್ಥಳವಾದ ಈ ಬೆಟ್ಟದ ಜಾಗವು ಹಸಿರು ಮರ -ಗಿಡಗಳ ದಟ್ಟ ಕಾಡಿನ ಮಧ್ಯದಲ್ಲಿ ಇದ್ದು ಮೈ ಮನಸ್ಸುಗಳಿಗೆ ರೋಮಾಂಚನವನ್ನು ನೀಡುತ್ತದೆ.
ಸಾಂಪ್ರದಾಯಿಕವಾಗಿ ಈ ಸ್ಥಳವನ್ನು ಕಮಲಾದ್ರಿ ಎಂದು ಕರೆಯಲಾಗುತ್ತದೆ. ಪಶ್ಚಿಮ ಘಟ್ಟ ಶ್ರೇಣಿಯ ಭಾಗವಾಗಿರುವ ಈ ಸ್ಥಳವು ರಾಜ್ಯದ ಪ್ರಮುಖ ಗಿರಿಧಾಮಗಳಲ್ಲಿ ಒಂದಾಗಿದೆ. ಬೇಸಿಗೆಯ ಸಮಯದಲ್ಲಿ ಎಲೆ ಉದುರಿಸಿಕೊಂಡು ಕುರುಚಲು ಕಾಡಿನಂತೆ ಗೋಚರಿಸಿದರೂ ದೇವಾಲಯದ ಮುಂಭಾಗದಿಂದ ಕಿಲೋಮೀಟರ್ ಗಟ್ಟಲೇ ದೂರದಲ್ಲಿ ಕಾಣುವ ನೀಲಗಿರಿ ಬೆಟ್ಟ ಶ್ರೇಣಿ ಹಾಗು ಪಶ್ಚಿಮ ಘಟ್ಟಗಳ ಸಾಲುಗಳನ್ನು ಅತ್ಯಂತ ನಯನ ಮನೋಹರವಾಗಿ ವೀಕ್ಷಿಸಬಹುದು. ಮಳೆಗಾಲ ಹಾಗೂ ಚಳಿಗಾಲದಲ್ಲಿ ಈ ಸ್ಥಳವು ಸಂಪೂರ್ಣ ಮಂಜಿನಿಂದ ಆವೃತವಾಗಿರುತ್ತದೆ.

 

ಇತಿಹಾಸ:
ಹೊಯ್ಸಳರ ಆಳ್ವಿಕೆಯ 1315 ರ ಕನ್ನೇಗಾಲ ಶಾಸನದಲ್ಲಿ ಗೋವರ್ಧನ ಗಿರಿ ಎಂದೇ ಈ ಸ್ಥಳವನ್ನು ಕರೆಯಲಾಗಿದ್ದು ಮುಮ್ಮಡಿ ಬಲ್ಲಾಳರಾಯನು ಈ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದು ಅವನ ಮಹಾ ಪ್ರಧಾನ ಮಾಧವ ದಂಡನಾಯಕನು ಈ ಸ್ಥಳದಲ್ಲಿ ಗೋಪಾಲಸ್ವಾಮಿ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಹಾಗೂ ದೈನಂದಿನ ಖರ್ಚು ವೆಚ್ಚಕ್ಕೆ ಕಣವಗಾಲ ಗ್ರಾಮವನ್ನು ದತ್ತಿ ಬಿಟ್ಟ ಬಗ್ಗೆ ತಿಳಿಸುತ್ತದೆ.
1537 ಮತ್ತೊಂದು ಶಾಸನವೂ ಕೂಡ ಈ ದೇವರಿಗೆ ಸಮೀಪದ ಇಂಗಳವಾಡಿ ಗ್ರಾಮವನ್ನು ದತ್ತಿಬಿಟ್ಟ ಬಗ್ಗೆ ದಾಖಲಿಸುತ್ತದೆ. ನಂತರದ ಕಾಲದಲ್ಲಿ ಈ ದೇವಾಲಯವು ಹಂತಹಂತವಾಗಿ ಅಭಿವೃದ್ಧಿ ಹೊಂದುತ್ತಾ ಸಾಗಿ ಮೈಸೂರು ಒಡೆಯರ ಕಾಲದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಿತು.

ಈ ಬೆಟ್ಟದ ಹತ್ತಿರದಲ್ಲಿ ಗದ್ದೆಹಳ್ಳದ ಗುಡ್ಡ,ಒಡೆಯರ ಕಲ್ಲು ಗುಡ್ಡ,ಕೆಂಪನಾಯಕನ ದುರ್ಗ,ಬಂಡಿಕಲ್ಲು ಬೆಟ್ಟ.. ಮುಂತಾದ ಗುಡ್ಡಗಳಿವೆ. ಬೆಟ್ಟದ ಅಕ್ಕಪಕ್ಕದ ಪರಿಸರದಲ್ಲಿ ಸುಮಾರು 77 ನೀರಿನ (ಕೊಳ )ತೀರ್ಥಗಳಿವೆ.

 

ಐತಿಹ್ಯ:
ಪುರಾಣದಲ್ಲಿ ತಿಳಿಸಿದಂತೆ ಹಿಂದೆ ಅಗಸ್ತ್ಯ ಮಹಾಮನಿಗಳು ವಿಂದ್ಯ ಪರ್ವತದ ಬೆಳವಣಿಗೆಯ ನಿಲ್ಲಿಸಿ ಕರ್ನಾಟಕದ ಕಟ್ಟ ಕಡೆಯ ಪವಿತ್ರ ಕ್ಷೇತ್ರವಾದ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದು ಗೋಪಾಲಸ್ವಾಮಿಯನ್ನು ಕುರಿತು ತಪಸ್ಸು ಮಾಡಿದಾಗ ಸ್ವಾಮಿಯು ಅಗಸ್ತ್ಯ ಮುನಿಗಳಿಗೆ ದರ್ಶನ ನೀಡಿ ಇಲ್ಲೇ ನೆಲೆಸಿದ ಬಗ್ಗೆ ಐತಿಹ್ಯವಿದೆ.

ಈ ಸ್ವಾಮಿಯನ್ನು ಸಂತಾನ ಭಾಗ್ಯ ಕರುಣಿಸುವ, ಪ್ರಧಾನಿಸುವ ಗೋಪಾಲಸ್ವಾಮಿ ದೇವರೆಂದು ಭಕ್ತರು ನಂಬುತ್ತಾರೆ. ಜೊತೆಗೆ ದೇವಾಲಯದ ಆವರಣದಲ್ಲಿ ನೂರಾರು ತೊಟ್ಟಿಲುಗಳು ಭಕ್ತರು ಕೋರಿಕೆ ನೆರವೇರಿದ ನಂತರ ತಂದು ಸಮರ್ಪಿಸಿರುವುದನ್ನು ಕಾಣಬಹುದು.
ದೇವಾಲಯವು ಗರ್ಭಗೃಹ, ಅಂತರಾಳ, ನವರಂಗವನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಹೊಯ್ಸಳ ಶೈಲಿಯ ವೇಣುಗೋಪಾಲ ಸ್ವಾಮಿಯ ಶಿಲ್ಪವನ್ನು ಪೂಜಿಸಲಾಗುತ್ತದೆ. ಇದರ ಜೊತೆಗೆ ಸತ್ಯಭಾಮೆ ಹಾಗೂ ಗೋವುಗಳ ಶಿಲ್ಪವನ್ನು ಕೂಡ ಕಾಣಬಹುದು.

 

ಪ್ರಕೃತಿ ತಾಣ :
ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಬರುವ ಈ ಸ್ಥಳದಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ತಂಪಾದ ಹಾಗೂ ಹಿತಕರ ಹವಾಮಾನವಿರುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಸದಾ ಮಂಜು ಮುಸುಕಿದ ವಾತಾವರಣವಿದ್ದು 15 -20 ಅಡಿಗಳ ಮುಂದೆ ಇರುವ ಸ್ಥಳವೇ ಗೋಚರಿಸಿದಷ್ಟು ಮಂಜು ಆವೃತವಾಗಿರುತ್ತದೆ. ಸದಾ ಕಾಲ ಕಾಡುಪ್ರಾಣಿಗಳ ಓಡಾಟ ಜಿಂಕೆ,ಆನೆ,ನವಿಲು ಕಾಡುಕೋಣ,ಕಾಡು ಹಂದಿಗಳ ಮುಕ್ತ ಓಡಾಟದ ಜಾಗ ಇದಾಗಿರುವ ಕಾರಣಕ್ಕೆ ಪ್ರವಾಸಿಗರು ಇಲ್ಲಿ ಮುಕ್ತವಾಗಿ ಓಡಾಡಲು ಸಾಧ್ಯವಾಗುವುದಿಲ್ಲ.
ಕೆಲ ತಿಂಗಳುಗಳ ಹಿಂದೆ ಇಡೀ ದೇವಾಲಯದ ಕಾಂಪೌಂಡ್ ವ್ಯಾಪ್ತಿಗೆ ವಿದ್ಯುತ್ ಬೇಲಿ ಅಳವಡಿಸಲಾಗಿದ್ದು ಪ್ರವಾಸಿಗರು ದೇವಾಲಯದಿಂದ ಹೊರ ಆವರಣದಲ್ಲಿ ಹೋಗಲು ಸಾಧ್ಯವಿಲ್ಲ. ಜೊತೆಗೆ ಕಾಡು ಪ್ರಾಣಿಗಳು ಕೂಡ ದೇವಾಲಯದ ಬಳಿಗೆ ಬರಲು ಸಾಧ್ಯವಾಗುವುದಿಲ್ಲ. ಬಂಡಿಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವುದರಿಂದ ಪ್ರವಾಸಿಗರಿಗೆ ಎಲ್ಲ ಕಡೆ ಮುಕ್ತವಾಗಿ ಓಡಾಡುವ ಅವಕಾಶವಿಲ್ಲ.

ಸಮಯ: ಬೆಳಿಗ್ಗೆ: ೮.೩೦ ರಿಂದ ಸಂಜೆ ೪.೦೦ (ಇದು ಅರಣ್ಯ ಇಲಾಖೆ ವಿಧಿಸಿರುವ ಸಮಯ)
ಖಾಸಗಿ ವಾಹನಗಳಿಗೆ ಬೆಟ್ಟದ ಮೇಲೆ ಪ್ರವೇಶ ನಿಷೇಧಿಸಿದೆ. ಬೆಟ್ಟದ ಪ್ರವೇಶ ದ್ವಾರದಿಂದ ಕ.ರಾ.ರ.ಸಾ.ನಿದ ಬಸ್ಸುಗಳಲ್ಲಿ ಮಾತ್ರ ಬೆಟ್ಟದ ಮೇಲೆ ಹೋಗಲು ಅವಕಾಶವಿದೆ. ಬಸ್ಸುಗಳಲ್ಲಿ ಒಬ್ಬರಿಗೆ ಬೆಟ್ಟದ ಮೇಲೆ ಹೋಗಿ ಬರುವ ದರ ೭೦ ರೂಪಾಯಿಗಳು. ಮೊಬೈಲ್ ಪೋನ್ ಹೊರತುಪಡಿಸಿ ಇತರೆ ಯಾವುದೇ ಕ್ಯಾಮೆರಾಗಳಿಗೆ ಅವಕಾಶವಿಲ್ಲ.
ಕಾರು, ಬಸ್ಸು, ಇತರೆ ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವಿದೆ. ಬೆಟ್ಟದ ಮೇಲೆ ದೇವಸ್ಥಾನದಲ್ಲಿ ಮದ್ಯಾಹ್ನ ಉಚಿತ ಅನ್ನ ಪ್ರಸಾದವಿರುತ್ತದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...