Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ : ಗಾರೆಹಟ್ಟಿಯಲ್ಲಿರುವ ಚೋಳೇಶ್ವರ ದೇವಾಲಯದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಚಿತ್ರದುರ್ಗ ನಗರದ ರೈಲ್ವೆ ನಿಲ್ದಾಣದ ಹಿಂಭಾಗದ ಗಾರೆ ಹಟ್ಟಿ ರಸ್ತೆಯಿಂದ ಕವಾಡಿಗರಹಟ್ಟಿಗೆ ಹೋಗುವ ದಾರಿಯ ಬಲಬದಿಯಲ್ಲಿರುವ ಶ್ರೀ ಚೋಳೇಶ್ವರ ದೇವಾಲಯವಿದೆ. ಇದು ಪೂರ್ವಾಭಿಮುಖಿಯಾಗಿದ್ದು ,ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ಕ್ರಿಸ್ತಶಕ 1124 ರಲ್ಲಿ ನಿರ್ಮಾಣ ಮಾಡಲಾಗಿದೆ.

 

ಗರ್ಭಗೃಹ ,ಅಂತರಾಳ ಮತ್ತು ನವರಂಗವನ್ನು ಹೊಂದಿರುವ ದೇವಾಲಯ ಇದಾಗಿದೆ. ಗರ್ಭಗೃಹದಲ್ಲಿ ಮೂರು ಅಡಿಗಳಷ್ಟು ಎತ್ತರದ ಪ್ರತಿಷ್ಟಾಪನ ಶಿವಲಿಂಗವಿದೆ .ಅಂತರಾಳದಲ್ಲಿ ಒಂದೂವರೆ ಅಡಿ ಎತ್ತರದ ಪೀಠದ ಮೇಲೆ ಒಂದೂವರೆ ಅಡಿ ಎತ್ತರ ಹಾಗೂ ಎರಡು ಅಡಿ ಉದ್ದದ ನಂದಿಯ ಶಿಲ್ಪವನ್ನು ಪ್ರತಿಷ್ಠಾಪಿಸಿರುವರು.ನವರಂಗದಲ್ಲಿ ನಾಲ್ಕು ಕಂಬಗಳಿದ್ದು ಇವುಗಳನ್ನು ಚಚ್ಚೌಕ-ವೃತ್ತ- ಅಷ್ಟಮುಖಗಳಲ್ಲಿ ಕಡೆದಿರುವರು.

 

ನವರಂಗದ ಭುವನೇಶ್ವರಿಯಲ್ಲಿ ಮುಗುಚಿದ ಪದ್ಮವಿದೆ.ಹೊರಬದಿಯಲ್ಲಿ ವಿಷ್ಣುವಿನ ಶಿಲ್ಪವಿದೆ. ಸಮಭಂಗಿಯಲ್ಲಿ ನಿಂತಿರುವ ಹಾಗೂ ಕರಂಡಮುಕುಟಧಾರಿಯಾದ ವಿಷ್ಣು ನಾಲ್ಕು ಕೈಗಳನ್ನು ಹೊಂದಿದ್ದಾನೆ .ಬಲಗೈಗಳಲ್ಲಿ ಚಕ್ರ ಮತ್ತು ಗದೆಗಳನ್ನು,ಎಡಗೈಗಳಲ್ಲಿ ಶಂಖ ಮತ್ತು ಪದ್ಮಗಳನ್ನು ಹಿಡಿದಿರುವನು. ಕೆಳಭಾಗದಲ್ಲಿ ಛಾಮರ ಧಾರಿಯರನ್ನು ಕಡೆಯಲಾಗಿದೆ. ನವರಂಗದ ಬಲಬದಿಯಲ್ಲಿ ಕ್ರಿಸ್ತಶಕ 1124 ಕ್ಕೆ ಸೇರಿದ ಶಿಲಾಶಾಸನವಿದೆ.

 

ಇದು ಕಲ್ಯಾಣ ಚಾಲುಕ್ಯರ ಅರಸನಾದ ತ್ರಿಭುವನಮಲ್ಲನೆಂದೇ ಖ್ಯಾತನಾದ ಆರನೇ ವಿಕ್ರಮಾದಿತ್ಯನಿಗೆ ಸೇರಿದ ಶಾಸನವಾಗಿದೆ .ಇದರಲ್ಲಿ ಈ ದೇಗುಲವನ್ನು ಕಟ್ಟಿಸಿ ದಾನ ದತ್ತಿ ನೀಡಿದ ವಿವರವಿದೆ.ಶಾಸನದಲ್ಲಿ ಹೇಳಿರುವಂತೆ ಚಾಲುಕ್ಯ ವಿಕ್ರಮನ ಕಾಲ 48ನೇ ವರ್ಷದ ಶೋಭಕೃತ ಸಂವತ್ಸರ, ವೈಶಾಖ ಶುದ್ಧ ಮೂರು ಬೃಹಸ್ಪತಿವಾರ ಅಂದರೆ ಗುರುವಾರ ಸಂಕ್ರಾಂತಿಯ ಸಂದರ್ಭದಲ್ಲಿ ಅಂದರೆ ಕ್ರಿಸ್ತಶಕ 1124 ರಲ್ಲಿ ಕಲ್ಯಾಣ ಚಾಲುಕ್ಯರ ಅರಸನಾದ ಆರನೇ ವಿಕ್ರಮಾದಿತ್ಯನು ರಾಜ್ಯ ಭಾರ ಮಾಡುತ್ತಿರುವಾಗ ಅವನ ಮಹಾಮಂಡಲೇಶ್ವರನಾದ ತ್ರಿಭುವನಮಲ್ಲ ಪಾಂಡ್ಯನು ನೊಳಂಬವಾಡಿ 32000 ವನ್ನು ಆಳುತ್ತಿದ್ದನು.ತ್ರಿಭುವನಮಲ್ಲ ಪಾಂಡ್ಯನ ಮಹಾಸಾಮಂತನಾದ ಉದಯಾದಿತ್ಯನು ಚಿಮ್ಮಚನೂರಿನಲ್ಲಿ ಸುಖಸಂಕಥಾ ವಿನೋದದಿಂದ ಆಳುತ್ತಿದ್ದನು.

 

ಈ ಸಂದರ್ಭದಲ್ಲಿ ಸದ್ಭಕ್ತಿಯಿಂದ ಲಿಂಗವನ್ನು ಪ್ರತಿಷ್ಠಾಪಿಸಿ ಉತ್ತುಂಗ ಪ್ರಾಸಾದವನ್ನು ಒಳಗೊಂಡಂತೆ ಕಲ್ಲಿನ ದೇವಾಲಯವನ್ನು ನಿರ್ಮಿಸಿ, ದೇವಾಲಯದ ಪೂಜಾ ಕಾರ್ಯ ಮೊದಲಾದವುಗಳಿಗೆಂದು ಶ್ರೀ ರುದ್ರ ಶಕ್ತಿ ಪಂಡಿತರ ಕಾಲಂಕರ್ಚಿ ಧಾರಾಪೂರ್ವಕವಾಗಿ ಬಿಟ್ಟ ದಾನದತ್ತಿಗಳನ್ನು ಬಿಟ್ಟಿರುವ ಸಂಗತಿ ಸ್ಪಷ್ಟವಾಗುತ್ತದೆ.ಶಾಸನದಲ್ಲಿ ಈ ದೇವಾಲಯವನ್ನು ಚೋಳೇಶ್ವರ ದೇವರೆಂದೇ ಹೇಳಿದೆ.ಅಲ್ಲದೆ ಉದಯಾದಿತ್ಯನನ್ನು ಶ್ರೀ ಚೋಳೇಶ್ವರ ದೇವಲಬ್ದ ವರಪ್ರಸಾದ ಎಂದೇ ಹೊಗಳಲಾಗಿದೆ .ದಾನಗಳನ್ನು ಯಾವ ಯಾವ ಉದ್ದೇಶಕ್ಕೆ ಬಿಡಲಾಯಿತೆಂಬ ವಿವರ ಶಾಸನದಲ್ಲಿದೆ.

 

ಅದರಲ್ಲಿ ಹೇಳುವಂತೆ ಶ್ರೀ ಚೋಳೇಶ್ವರ ದೇವರ ಅಂಗಭೋಗ, ಸ್ನಾನ ನೈವೇದ್ಯ, ಚೈತ್ರಪವಿತ್ರ, ಪಾತ್ರ ಪಾವುಳ,ತಪೋಧನರ ಆಹಾರ, ಖಂಡಸ್ಫುಟಿತ ಜೀರ್ಣೋದ್ಧಾರ,ಪುರಾಣ ಹೇಳುವ ಬ್ರಾಹ್ಮಣರು ,ವಿದ್ಯಾದಾನಕ್ಕಾಗಿ ಶ್ರೀ ರುದ್ರ ಶಕ್ತಿ ಪಂಡಿತರಿಗೆ ಬಿಟ್ಟು ಕೊಟ್ಟನೆಂಬುದು ಸ್ಪಷ್ಟವಾಗುತ್ತದೆ. ಇದೇ ದೇವಾಲಯಕ್ಕೆ ಕ್ರಿ.ಶ.1282 ರಲ್ಲಿ ಬೆಮ್ಮತ್ತನೂರನ್ನು ನೋಡಿಕೊಳ್ಳುತ್ತಿದ್ದ ಹೊಯ್ಸಳ ಅರಸ ವೀರನರಸಿಂಹನಮಹಾ ಪ್ರಧಾನನಾದ ಪೆರುಮಾಳೆದೇವ ದಣ್ಣಾಯಕನು ಶ್ರೀ ಚೋಳೇಶ್ವರ ದೇವರ ಅಮೃತಪಡಿಗೆಂದು ಗದ್ದೆಯನ್ನು ದಾನ ನೀಡಿದ್ದನೆಂದು ಚಿತ್ರದುರ್ಗದ ಬೆಟ್ಟದ ಮೇಲೆ ಇರುವ ಹಿಡಿಂಬೇಶ್ವರ ದೇವಾಲಯದ ಶಾಸನವು ತಿಳಿಸುತ್ತದೆ.

 

ಇನ್ನೊಂದು ಶಾಸನದಲ್ಲಿ ರಾಜಸ್ಥಾನ ಚೋಳೇಶ್ವರ ದೇವರ ವೊಳಗಣಸ್ಥಾನ ಶ್ರೀ ಧರ್ಮೇಶ್ವರ ಭೀಮೇಶ್ವರದ ರಾಜಗುರು ಚೋಳ ಗುರು ಎಂದಿದೆ .ಇದರಿಂದ ಚೋಳ ಗುರುಗಳು ಕಾಲದ ಪ್ರಮುಖ ಯತಿಗಳಾಗಿದ್ದುದು ಗೊತ್ತಾಗುತ್ತದೆ .ಒಟ್ಟಿನಲ್ಲಿ ಚೋಳೇಶ್ವರ ದೇವಾಲಯವು ಚಿತ್ರದುರ್ಗ ಪರಿಸರದ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು ಇದೊಂದು ಧಾರ್ಮಿಕ ಕೇಂದ್ರವಲ್ಲದೆ ಪ್ರಾಚೀನ ವಿದ್ಯಾಕೇಂದ್ರವೂ ಆಗಿದ್ದುದು ಸ್ಪಷ್ಟವಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...