Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ : ಕಾವಾಡಿಗರಹಟ್ಟಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಾಲಯದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಚಿತ್ರದುರ್ಗ ನಗರದ ಹೊರವಲಯದ ಕಾವಾಡಿಗರಹಟ್ಟಿ ಶ್ರೀ ಗಂಗಾಧರೇಶ್ವರ ದೇವಾಲಯ 17 -18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣವಾದ ಈ ಮಂದಿರದಲ್ಲಿ ಗರ್ಭಗೃಹ, ಅಂತರಾಳ ,ನವರಂಗ ಹಾಗೂ ಇತ್ತೀಚಿಗೆ ಮಹಾ ಮಂಟಪವನ್ನು ಒಳಗೊಂಡ ವಿಶಾಲವಾದ ದೇವಾಲಯವಾಗಿದೆ. ಗರ್ಭಗೃಹದಲ್ಲಿ 2 ಅಡಿ ಎತ್ತರದ ಪ್ರತಿಷ್ಠಾಪನ ಲಿಂಗವಿದೆ .ಗರ್ಭಗೃಹದ ಬಾಗಿಲುವಾಡದಲ್ಲಿ ಪೂರ್ಣಕುಂಭ ದ್ವಾರಬಂಧದಲ್ಲಿ ರಚನೆಗಳಿವೆ .ಅಂತರಾಳದಲ್ಲಿ ಎರಡು ಅಡಿ ಎತ್ತರ ಹಾಗೂ ಮೂರು ಅಡಿ ಉದ್ದದ ನಂದಿಯ ಶಿಲ್ಪವಿದೆ. ಅಂತರಾಳದ ಬಾಗಿಲುವಾಡದಲ್ಲಿ ಶೈವ ದ್ವಾರಪಾಲಕರಿದ್ದು, ಇವರಿಗೆ ಕೀರ್ತಿ ಪ್ರಭಾವಳಿಗಳನ್ನು ಕಡೆದಿರುವರು. ಈ ಬಾಗಿಲುವಾಡದ ಲಲಾಟದಲ್ಲಿ ಗಣೇಶನ ಉಬ್ಬು ಶಿಲ್ಪವನ್ನು ಕೆತ್ತಿರುವರು. ಅಂತರಾಳದ ಮುಂಬದಿ ಹಾಗೂ ದೇಗುಲದ ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣಾ ಪಥವಿದೆ .ನವರಂಗದಲ್ಲಿ ನಾಲ್ಕು ಕಂಬಗಳಿದ್ದು ಇವುಗಳನ್ನು ಚಚ್ಚೌಕ, ಅಷ್ಟ ಹಾಗೂ ಹದಿನಾರು ಮುಖಗಳಲ್ಲಿ ಕಳೆದಿದ್ದು ಮೇಲ್ಭಾಗದಲ್ಲಿ ಪುಷ್ಪ ಬೋದಿಗೆಗಳನ್ನು ಕೂಡಿಸಲಾಗಿದೆ .ಸಭಾಮಂಟಪದ ಮೇಲ್ಭಾಗದಲ್ಲಿ ಅಷ್ಪಕೋನಾಕಾರದಲ್ಲಿ ಜೋಡಿಸಲಾದ ಬಂಡೆಗಳಲ್ಲಿ ಪದ್ಮವಿದೆ.ಸಭಾಮಂಟಪದ ಬಾಗಿಲುವಾಡದಲ್ಲಿ ಶೈವ ದ್ವಾರಪಾಲಕರಿದ್ದು, ಅದರ ಲಲಾಟದಲ್ಲಿ ಪದ್ಮವಿದೆ.ಗರ್ಭಗೃಹದ ಮೇಲ್ಭಾಗದಲ್ಲಿ ಗುಮ್ಮಟಾಕಾರದಲ್ಲಿ ನಿರ್ಮಿಸಲಾದ ಶಿಖರವಿದೆ. ಈ ದೇವಾಲಯದ ಜಾತ್ರೆಯು ಸಾಮಾನ್ಯವಾಗಿ ಬಸವ ಜಯಂತಿಯಲ್ಲಿ ಜರುಗುವುದು .ಶಿವರಾತ್ರಿ ಹಬ್ಬದಲ್ಲಿ ಜಾಗರಣೆ ಮತ್ತು ಅಡ್ಡಪಲ್ಲಕ್ಕಿ ಉತ್ಸವಗಳನ್ನು ನಡೆಸಲಾಗುವುದು.ಹಿಂಭಾಗದಲ್ಲಿ ಶೈವ ಗುರುಗಳ ಕಲ್ಲಿನ ಗದ್ದುಗೆ ಇದೆ.ಈ ದೇವಾಲಯದ ಬಲಭಾಗದಲ್ಲಿ ವಿಸ್ತಾರವಾದ ಹಾಗೂ ಆಳವಾಗಿರುವ ನೀರಿನ ಹೊಂಡವಿದೆ.ಈ ಹೊಂಡವನ್ನು ದಳವಾಯಿ ಹೊಂಡವೆಂದು ಕರೆಯಲಾಗುತ್ತದೆ.ಇದನ್ನು ಚಿತ್ರದುರ್ಗದ ಪಾಳೆಯಗಾರರು ದೇವಾಲಯ ಹಾಗೂ ಗ್ರಾಮದ ಬಳಕೆಗೆ ಕಟ್ಟಿಸಿದ್ದಾರೆ .ವಿಶಾಲವಾದ ರಚನೆಯನ್ನು ಗಮನಿಸಿದರೆ ವಿಜಯನಗರ ಕಾಲದಲ್ಲಿ ನಿರ್ಮಿಸಿದಂತೆ ಕಾಣುತ್ತದೆ.ಇಲ್ಲಿ ಗಂಗಾಧರೇಶ್ವರ ಸ್ವಾಮಿಯ ತೆಪ್ಪೋತ್ಸವವು ಜರುಗುತ್ತಿದ್ದಿರಬೇಕು.
ಕಾವಾಡಿಗರಹಟ್ಟಿ ಎಂಬ ಹೆಸರು ಪ್ರಾಚೀನವಾಗಿದೆ.ಕ್ರಿ.ಶ.7ನೇ ಶತಮಾನದ ಗಂಜಿಗಟ್ಟೆಯ ಶಾಸನದಲ್ಲಿ ಕಾವಾಳಿಗ,ಭಟಾರರು ಎಂಬ ಪದ ಬಳಕೆಯಾಗಿದೆ.ಇವರು ದೇವಾಲಯದ ಯತಿಗಳಾಗಿದ್ದು ಜೀಯರು, ಭಟಾರರು ಎಂಬುದಾಗಿಯೂ ಕರೆಯಲಾಗುತ್ತಿತ್ತು. ಇವರು ದೇವಾಲಯವನ್ನು ನಿರ್ವಹಿಸುವ ಹಾಗೂ ಧಾರ್ಮಿಕ ಬೋಧನೆಗಳನ್ನು ನೀಡುತ್ತಿದ್ದರು. ಆದುದರಿಂದ ಕಾವಾಳಿಗ ಹೆಸರಿನಲ್ಲಿ ಈ ಗ್ರಾಮಕ್ಕೆ ಕಾವಾಡಿಗರಹಟ್ಟಿ ಎಂಬುದು ಬಂದಿರುವ ಸಾಧ್ಯತೆ ಇದೆ. ಇನ್ನೊಂದು ಮೂಲದ ಪ್ರಕಾರ ಇಲ್ಲಿ ಹಾಲು ಮಾರುವ ಕಾವಾಡಿಗರು (ಗೋಪಾಲಕರು) ನೆಲೆಸಿದ್ದರಿಂದ ಕವಾಡಿಗರಹಟ್ಟಿ ಆಗಿದೆ ಎಂದು ಕೂಡ ಹೇಳಲಾಗುತ್ತದೆ

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...