ಬೆಂಗಳೂರು : ಅನಾರೋಗ್ಯದಿಂದ ಸಾಲುಮರದ ತಿಮ್ಮಕ್ಕ ಇಂದು ನಿಧನರಾಗಿದ್ದಾರೆ. 114 ವರ್ಷಗಳ ಕಾಲ ಜೀವಿಸಿ, ಬಹಳ ಮುಖ್ಯವಾಗಿ ಮರಗಿಡಗಳ ಜೊತೆಗೆ ಜೀವಿಸಿದ್ದಂತ ಜೀವ ಇಂದು ಇಲ್ಲದಂತಾಗಿದೆ. ತುಮಕೂರಿನ ಗುಬ್ಬಿ ತಾಲೂಕಿನಲ್ಲಿ 1911ರಲ್ಲಿ ಜನಿಸಿದ ತಿಮ್ಮಕ್ಕ ಅವರು ಸಾಲುಮರದ ತಿಮ್ಮಕ್ಕನಾಗಿ ಬೆಳೆದ ರೀತಿಯೇ ರೋಚಕ.
ತಿಮ್ಮಕ್ಕ ಮತ್ತು ಅವರ ಪತಿ ಚಿಕ್ಕಯ್ಯನವರು ಇಬ್ಬರು ಸೇರಿ ರಾಮನಗರ ಜಿಲ್ಲೆಯ ಹುಲಿಕಲ್ ಮತ್ತು ಕುದೂರು ನಡುವೆ ಮರಗಳನ್ನು ನೆಡುವುದಕ್ಕೆ ಶುರು ಮಾಡಿದ್ದರು. ಸುಮಾರು 4.5 ಕಿಮೀಟರ್ ವರೆಗೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ 385ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು. ಸುಮಾರು ಕಿಮೀಟರ್ ನಿಂದ ನೀರನ್ನು ಹೊತ್ತುಕೊಂಡೆ ತಂದು ಹಾಕಿ ಬೆಳೆಸಿದರು. ಪ್ರಾಣಿಗಳಿಂದ ಆ ಗಿಡಗಳನ್ನು ರಕ್ಷಿಸುವುದಕ್ಕೆ ಬೇಲಿಯನ್ನು ಕಟ್ಟಿದರು. ಇದು ಅವರಿಗಿದ್ದ ಪರಿಸರ ಕಾಳಜಿಯನ್ನು ತೋರಿಸುತ್ತದೆ.

ಸಾಲುಮರದ ತಿಮ್ಮಕ್ಕ ಮಕ್ಕಳಿಲ್ಲವೆಂದು ಗಿಡಗಳನ್ನು ಬೆಳೆಸಿದರು, ಸಾಕಿದರು. ಅಲ್ಲಿಂದ ಸಾಮಾನ್ಯ ತಿಮ್ಮಕ್ಕನಾಗಿದ್ದವರು ಸಾಲುಮರದ ತಿಮ್ಮಕ್ಕನಾದರು. ಇವರನ್ನ ಎಲ್ಲರೂ ವೃಕ್ಷಮಾತೆ ಅಂತಾನೇ ಕರೆಯುತ್ತಾರೆ. ಇತ್ತೀಚೆಗೆ ವೀಲ್ ಚೇರ್ ಮೇಲೆ ಕೂತು ಎಲ್ಲಾ ಕಡೆ ಓಡಾಡುತ್ತಿದ್ದರು. ಸಿನಿಮಾಗಳ ಪ್ರಚಾರಕ್ಕೂ ಬರ್ತಾ ಇದ್ದರು. ಕಾಡು, ಮರಗಿಡಗಳಿಗೆ ಸಂಬಂಧಿಸಿದಂತೆ ಸಿನಿಮಾಗಳಿದ್ದರೆ ಸಿನಿಮಾ ತಂಡದವರು ತಿಮ್ಮಕ್ಕ ಅವರನ್ನೇ ಕರೆಸುತ್ತಿದ್ದರು. ಇತ್ತೀಚೆಗೆ ಸಿನಿಮಾವೊಂದರಲ್ಲಿ ಭಾಗಿಯಾಗಿದ್ದ ತಿಮ್ಮಕ್ಕ ಅವರು ಹಿರಿಯ ನಟ ಉಮೇಶ್ ಜೊತೆಗೆ ನಕ್ಕು ನಲಿದಿದ್ದರು. ಉಮೇಶ್ ಅವರು ಕೂಡ ತಮಾಷೆಯಾಗಿ ಮಾತನಾಡಿ, ತಿಮ್ಮಕ್ಕ ಅವರನ್ನು ರೇಗಿಸಿದ್ದರು. ಆದರೆ ಇಂದು ಅವರಿಲ್ಲ. ಇಡೀ ರಾಜ್ಯಕ್ಕೆ ಅವರ ಸಾವು ನೋವು ಕೊಟ್ಟಿದೆ. ಆ ನೋವಲ್ಲೇ ವೃಕ್ಷಮಾತೆಗೆ ರಾಜ್ಯದ ಜನ ವಿದಾಯ ಹೇಳಿದ್ದಾರೆ.















