Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2027ರ ಜನವರಿಯಿಂದ ಹೊಸ ಚೆಕ್‌ಬುಕ್ ನಿಯಮವಿಲ್ಲ : ಸಾಮಾಜಿಕ ಜಾಲತಾಣದ ವದಂತಿ ನಂಬಬೇಡಿ

---Advertisement---

ಮುಂಬೈ: ಪ್ರಸ್ತುತ ಬಳಕೆಯಲ್ಲಿರುವ ಚೆಕ್ ಟ್ರಂಕೇಶನ್ ಸಿಸ್ಟಮ್ (CTS) ಮಾದರಿಯ ಚೆಕ್‌ಬುಕ್‌ಗಳಲ್ಲಿ ಯಾವುದೇ ಬದಲಾವಣೆ ತರುತ್ತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಪಷ್ಟಪಡಿಸಿದೆ. 2027ರ ಜನವರಿ 1ರಿಂದ ಹೊಸ ಭದ್ರತಾ ವೈಶಿಷ್ಟ್ಯಗಳಿರುವ ಹೊಸ ಚೆಕ್‌ಬುಕ್‌ಗಳು ಜಾರಿಗೆ ಬರಲಿವೆ ಎಂಬ ಸಾಮಾಜಿಕ ಜಾಲತಾಣಗಳ ಸಂದೇಶವನ್ನು ಆರ್‌ಬಿಐ “ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವ ಸುದ್ದಿ” ಎಂದು ತಳ್ಳಿಹಾಕಿದೆ.

ಸಾಮಾಜಿಕ ಮಾಧ್ಯಮವಾದ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಬ್ಯಾಂಕ್, ಹರಿದಾಡುತ್ತಿರುವ ಸುಳ್ಳು ಸಂದೇಶದ ಚಿತ್ರದ ಮೇಲೆ ‘FAKE’ (ನಕಲಿ) ಮುದ್ರೆ ಒತ್ತಿ ಪೋಸ್ಟ್ ಮಾಡಿದೆ.

ವದಂತಿಯಲ್ಲೇನಿತ್ತು?

ಪ್ರಸ್ತುತ ಬಳಕೆಯಲ್ಲಿರುವ ಸಿಟಿಎಸ್ (CTS) ಚೆಕ್‌ಬುಕ್‌ಗಳ ಮಾನ್ಯತೆ 2026ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದ್ದು, ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳಿರುವ ನೂತನ ಚೆಕ್‌ಬುಕ್‌ಗಳು 2027ರ ಜನವರಿ 1ರಿಂದ ಜಾರಿಗೆ ಬರಲಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶ ಹಂಚಿಕೊಳ್ಳಲಾಗುತ್ತಿತ್ತು.

ಆರ್‌ಬಿಐ ಹೇಳಿದ್ದೇನು?

“ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಂದೇಶ ಹರಿದಾಡುತ್ತಿರುವುದು ಆರ್‌ಬಿಐ ಗಮನಕ್ಕೆ ಬಂದಿದೆ. ಪ್ರಸ್ತುತ ಸಿಟಿಎಸ್ ಚೆಕ್‌ಬುಕ್‌ಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಅಂತಹ ಯಾವುದೇ ಹೊಸ ನಿಯಮಗಳನ್ನು ಜಾರಿಗೆ ತರುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ. ಈ ಸಂದೇಶವು ವಾಸ್ತವಕ್ಕೆ ದೂರವಾಗಿದ್ದು, ಸಾರ್ವಜನಿಕರನ್ನು ದಾರಿತಪ್ಪಿಸುವಂತಿದೆ,” ಎಂದು ಆರ್‌ಬಿಐ ತಿಳಿಸಿದೆ. ಜೊತೆಗೆ, ಬ್ಯಾಂಕಿಂಗ್ ನಿಯಮಗಳಿಗೆ ಸಂಬಂಧಿಸಿದಂತೆ ಆರ್‌ಬಿಐನ ಅಧಿಕೃತ ವೆಬ್‌ಸೈಟ್ ಮತ್ತು ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ಮಾತ್ರ ನಂಬುವಂತೆ ಸಾರ್ವಜನಿಕರಿಗೆ ಕಿವಿಮಾತು ಹೇಳಿದೆ.

ಗ್ರಾಹಕರಿಗೆ ನಿರಾಳ

ಪ್ರಸ್ತುತ ಚಾಲ್ತಿಯಲ್ಲಿರುವ ಸಿಟಿಎಸ್ ನಿಯಮಾವಳಿಯ ಚೆಕ್‌ಬುಕ್‌ಗಳು ಎಂದಿನಂತೆಯೇ ಮಾನ್ಯವಾಗಿರುತ್ತವೆ. ಗ್ರಾಹಕರು ಹೊಸ ಚೆಕ್‌ಬುಕ್‌ಗಾಗಿ ಅರ್ಜಿ ಸಲ್ಲಿಸುವ ಅಥವಾ ಬದಲಾಯಿಸುವ ಅಗತ್ಯವಿಲ್ಲ. ಇಂತಹ ಆಧಾರರಹಿತ ಮತ್ತು ವದಂತಿ ಸಂದೇಶಗಳನ್ನು ಸಾರ್ವಜನಿಕರು ಫಾರ್ವರ್ಡ್ ಮಾಡಬಾರದು ಎಂದು ಸೂಚಿಸಲಾಗಿದೆ.

Join WhatsApp

Join Now

Join Telegram

Join Now