ಚಿತ್ರದುರ್ಗ : ಇತ್ತೀಚೆಗೆ ಜರುಗಿದ ಡಿ.ಎಸ್. ಹಳ್ಳಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕ್ಯಾದಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ ಕ್ಲಸ್ಟರ್ ಮಟ್ಟದ ‘ಸಮಗ್ರ ಪ್ರಶಸ್ತಿ’ಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ತೋರಿದ್ದು, ಹಂತ-1ರ ವಿಭಾಗದಲ್ಲಿ 3 ಪ್ರಥಮ, 4 ದ್ವಿತೀಯ ಹಾಗೂ 1 ತೃತೀಯ ಸ್ಥಾನ ಗಳಿಸಿದ್ದಾರೆ. ಅದೇ ರೀತಿ ಹಂತ-2ರ ವಿಭಾಗದಲ್ಲಿ ಒಟ್ಟು 13 ವಿದ್ಯಾರ್ಥಿಗಳು ವಿಜೇತರಾಗಿದ್ದು, 7 ಪ್ರಥಮ, 4 ದ್ವಿತೀಯ ಹಾಗೂ 2 ತೃತೀಯ ಸ್ಥಾನಗಳನ್ನು ಮುಡಿಗೇರಿಸಿಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.
ಸಾಧನೆಗೈದ ಮಕ್ಕಳನ್ನು ಅಭಿನಂದಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಮೀನಾಕ್ಷಮ್ಮ ಅವರು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಇದೇ ವೇಳೆ ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಭಾಕರ್ ಅವರು ಮಾತನಾಡಿ, ಎಲ್ಲ ವಿದ್ಯಾರ್ಥಿಗಳಿಗೆ ಶುಭ ಕೋರಿ ಗ್ರಾಮದ ಹೆಸರು ಹಾಗೂ ಸರ್ಕಾರಿ ಶಾಲೆಯ ಕೀರ್ತಿ ಕಾಪಾಡಿದ ಮಕ್ಕಳನ್ನು ಪ್ರಶಂಶಿಸಿದರು. ಮುಂದಿನ ಹಂತಕ್ಕೆ ಸೂಕ್ತ ಅಭ್ಯಾಸ ನಡೆಸಿ ಮತ್ತು ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ ಸಂಪರ್ಕಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು ಆಗಿ ಆತ್ಮ ವಿಶ್ವಾಸದ ಮಾತುಗಳನ್ನಾಡಿದರು..
ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಸ್ಪರ್ಧೆಗಳಿಗೆ ಸೂಕ್ತ ತರಬೇತಿ ನೀಡಿ ಪ್ರಶಸ್ತಿಗೆ ಭಾಜನರಾಗುವಂತೆ ಶ್ರಮಿಸಿದ ಶಿಕ್ಷಕಿಯರಾದ ಸುಜಾತ ಹಾಗೂ ಕುಸುಮ ಅವರ ಕಾರ್ಯವೈಖರಿಗೆ ಈ ಸಂದರ್ಭದಲ್ಲಿ ಪ್ರಶಂಸೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಮೀನಾಕ್ಷಮ್ಮ, ಶಿಕ್ಷಕರಾದ ಕುಸುಮ, ಸುಜಾತ, ಅಜಯ್ ಕುಮಾರ್ ಹಾಗೂ ಅತಿಥಿ ಶಿಕ್ಷಕಿ ಭಾರತಿ ಸೇರಿದಂತೆ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.









