ಬೆಂಗಳೂರು : ರಾಜ್ಯದಲ್ಲಿ ಜಾರಿಯಲ್ಲಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಮಾತ್ರವಲ್ಲದೆ, ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಅದರ ನಂತರವೂ ಈ ಯೋಜನೆಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಅವರು ಭರವಸೆ ನೀಡಿದ್ದಾರೆ.
ಯೋಜನೆಗಳ ಅನುಷ್ಠಾನದಲ್ಲಿ ಕಂಡುಬರುವ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸುವ ಕೆಲಸ ಪ್ರಾರಂಭದಿಂದಲೇ ನಡೆಯುತ್ತಾ ಬಂದಿದ್ದು, ಈಗಲೂ ಅದು ಮುಂದುವರಿದಿದೆ. ಹೀಗಾಗಿ ಯೋಜನೆಗಳ ಫಲಾನುಭವಿಗಳು ವಿರೋಧ ಪಕ್ಷಗಳು ಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಮನವಿ ಮಾಡಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ, ಮುಂದಿನ ಎರಡು ವರ್ಷಗಳ ಕಾಲ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರಲಿದ್ದೇವೆ, ಅದರ ನಂತರವೂ ಅದು ಮುಂದುವರಿಯಲಿದೆ. ಯೋಜನೆಗಳ ಅನುಷ್ಠಾನದಲ್ಲಿ ಕಂಡು ಬರುವ ದೋಷಗಳನ್ನು ಸರಿಪಡಿಸುವ ಕೆಲಸ ಪ್ರಾರಂಭದಿಂದಲೇ ನಡೆಯುತ್ತಾ ಬಂದಿದೆ, ಈಗಲೂ…
ಇದನ್ನು ಓದಿಚಿತ್ರದುರ್ಗ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಬೃಹತ್ ಪ್ರತಿಭಟನೆ!— Siddaramaiah (@siddaramaiah) June 15, 2026
ಬಿಜೆಪಿ ಮೂಲತಃ ಬಡವರ ವಿರೋಧಿ ಪಕ್ಷವಾಗಿದ್ದು, ಮೊದಲ ದಿನದಿಂದಲೇ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾ ಬಂದಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮೊದಲು ಗ್ಯಾರಂಟಿ ಯೋಜನೆಗಳ ಜಾರಿಯೇ ಅಸಾಧ್ಯ ಎಂದಿದ್ದ ಬಿಜೆಪಿ ನಾಯಕರು, ನಂತರದ ದಿನಗಳಲ್ಲಿ ಹಣಕಾಸಿನ ಕೊರತೆಯಿಂದ ಸರ್ಕಾರ ದಿವಾಳಿಯಾಗಲಿದೆ ಎಂದಿದ್ದರು. ಈಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎನ್ನುವ ಸುಳ್ಳು ವದಂತಿಯನ್ನು ಹಬ್ಬಿಸುತ್ತಿದ್ದು, ಇದು ಅವರ ರಾಜಕೀಯ ಹತಾಶೆಯ ಪ್ರತೀಕವಾಗಿದೆ ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿಯಾಗಿ ಐದು ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದ್ದಲ್ಲದೆ, ಇದರಿಂದಾಗಿ ರಾಜ್ಯದ ಆರ್ಥಿಕತೆ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಸಮರ್ಥವಾಗಿ ನೋಡಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಇಂದು ಕರ್ನಾಟಕ ರಾಜ್ಯವು ತಲಾವಾರು ಆದಾಯದಲ್ಲಿ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದ್ದು, ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ಎರಡನೇ ದೊಡ್ಡ ರಾಜ್ಯವಾಗಿ ಹೊರಹೊಮ್ಮಿದೆ. ಒಂದು ವೇಳೆ ಸರ್ಕಾರದ ಖಜಾನೆ ಖಾಲಿಯಾಗಿದ್ದರೆ ಅಥವಾ ಸರ್ಕಾರ ದಿವಾಳಿ ಸ್ಥಿತಿಯಲ್ಲಿದ್ದರೆ ಈ ರೀತಿಯ ಆರ್ಥಿಕ ಸಾಧನೆ ಮಾಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ಗ್ಯಾರಂಟಿ ಯೋಜನೆಗಳನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿರುವ ಬಿಜೆಪಿಯು, ಅದೇ ಯೋಜನೆಗಳನ್ನು ಮಧ್ಯಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ನಕಲು ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಯಾವುದೇ ನೈತಿಕತೆ ಇಲ್ಲ ಎಂದು ಅವರು ಗುಡುಗಿದ್ದಾರೆ.
ಕೆಲವು ರಾಜ್ಯಗಳ ಚುನಾವಣಾ ಪೂರ್ವದಲ್ಲಿ ಬಿಜೆಪಿ ಗ್ಯಾರಂಟಿ ಯೋಜನೆಗಳ ಆಶ್ವಾಸನೆ ನೀಡಿದರೂ, ಅವುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದ್ದಾರೆ.
ಈ ಯೋಜನೆಗಳು ನಿಜವಾದ ಅರ್ಹ ಜನರಿಗೆ ತಲುಪಬೇಕು ಮತ್ತು ಅದು ಅನರ್ಹರ ಪಾಲಾದಾಗ ಅದನ್ನು ತಡೆಗಟ್ಟುವುದು ಚುನಾಯಿತ ಸರ್ಕಾರದ ಕರ್ತವ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ನಮ್ಮ ಜನರೂ ಕೂಡ ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕಾಗಿದ್ದು, ದುರಾಸೆಗೆ ಬಲಿಬಿದ್ದು ಸರ್ಕಾರಕ್ಕೆ ಮೋಸ ಮಾಡಿ ಗ್ಯಾರಂಟಿ ಯೋಜನೆಗಳ ಲಾಭ ತೆಗೆದುಕೊಳ್ಳುವುದು ಕಾನೂನಿನ ಉಲ್ಲಂಘನೆ ಮಾತ್ರವಲ್ಲ, ರಾಜ್ಯದ ಜನತೆಗೆ ಬಗೆಯುವ ದ್ರೋಹವಾಗಿದೆ ಎಂದಿದ್ದಾರೆ.
ಇಂತಹ ಸೂಕ್ಷ್ಮ ವಿಷಯದಲ್ಲಿ ವಿರೋಧ ಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡಲು ಹೋಗದೆ, ಅರ್ಹರಿಗೆ ಯೋಜನೆಗಳನ್ನು ತಲುಪಿಸಲು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.










