ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಸಾಕ್ಷಿ ಎಂದು ಗುರುತಿಸಿಕೊಂಡಿರುವ ‘ಮಾಸ್ಕ್ ಮ್ಯಾನ್’ ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ಪ್ರಕರಣಕ್ಕೆ ಹೊಸ ಆಯಾಮ ದೊರೆತಿದೆ.
ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಚಿನ್ನಯ್ಯ ಆರೋಪಿಸಿದ್ದಾನೆ.
ಪ್ರಕರಣದ ಅಂತಿಮ ತನಿಖಾ ವರದಿಯನ್ನು ಶೀಘ್ರವಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹಾಗೂ ತನ್ನನ್ನು ತಪ್ಪುದಾರಿಗೆ ಎಳೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶನ ನೀಡಬೇಕೆಂದು ಆತ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾನೆ.ಚಿನ್ನಯ್ಯನ ಆರೋಪದ ಪ್ರಕಾರ, ಕೆಲ ವ್ಯಕ್ತಿಗಳು ತನ್ನನ್ನು ನಿರ್ದಿಷ್ಟ ಸ್ಥಳಗಳಲ್ಲಿ ಇರಿಸಿ, ಯೂಟ್ಯೂಬ್ ಚಾನೆಲ್‌ಗಳ ಮುಂದೆ ನಿರ್ದಿಷ್ಟ ರೀತಿಯ ಹೇಳಿಕೆಗಳನ್ನು ನೀಡುವಂತೆ ಒತ್ತಡ ಹೇರಿದ್ದರು. ಇದಕ್ಕೆ ಪ್ರತಿಯಾಗಿ ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಆತ ದೂರಿದ್ದಾನೆ.ಅಲ್ಲದೆ, ವಕೀಲರ ಮೂಲಕ ವಿವಿಧ ದಾಖಲೆಗಳಿಗೆ ಸಹಿ ಪಡೆದುಕೊಳ್ಳಲಾಗಿದ್ದು, ನ್ಯಾಯಾಲಯದ ಮುಂದೆ ಯಾವ ರೀತಿಯಲ್ಲಿ ಹೇಳಿಕೆ ನೀಡಬೇಕು ಎಂಬುದರ ಬಗ್ಗೆ ತರಬೇತಿಯನ್ನೂ ನೀಡಲಾಗಿತ್ತು ಎಂದು ಚಿನ್ನಯ್ಯ ಹೇಳಿದ್ದಾನೆ.
ತಾನು ನೀಡಿದ ಕೆಲವು ಹೇಳಿಕೆಗಳು ಬೆದರಿಕೆ ಮತ್ತು ಒತ್ತಡದ ಪರಿಣಾಮವಾಗಿದ್ದವು ಎಂದು ಆತ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಪತ್ನಿ ಮತ್ತು ಮಕ್ಕಳಿಗೆ ಹಾನಿ ಮಾಡುವ ಬೆದರಿಕೆಯ ಕಾರಣದಿಂದ ಕೆಲವು ಸಂದರ್ಭಗಳಲ್ಲಿ ತಾನು ಹೇಳಿಕೆ ನೀಡಬೇಕಾಯಿತು ಎಂದು ವಿವರಿಸಿದ್ದಾನೆ.ಇನ್ನೂ ಕೆಲ ವ್ಯಕ್ತಿಗಳು ತನಗೆ ಹಣದ ಆಮಿಷವೊಡ್ಡಿ, ನಿರ್ದಿಷ್ಟ ವ್ಯಕ್ತಿಗಳನ್ನು ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶದಿಂದ ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ಆರೋಪಿಸಿರುವ ಚಿನ್ನಯ್ಯ, ಎಸ್‌ಐಟಿ ತನಿಖೆ ವೇಳೆ ತೋರಿಸಿದ ಹಲವು ಸ್ಥಳಗಳಲ್ಲಿ ಯಾವುದೇ ಅಸ್ಥಿಪಂಜರ ಅಥವಾ ಶವದ ಅವಶೇಷಗಳು ಪತ್ತೆಯಾಗಿಲ್ಲ ಎಂದೂ ಹೇಳಿದ್ದಾನೆ.ಈ ಎಲ್ಲಾ ಆರೋಪಗಳ ಕುರಿತು ಸಂಬಂಧಪಟ್ಟ ವ್ಯಕ್ತಿಗಳಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ಪ್ರಕರಣದ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರಿದಿದ್ದು, ಹೈಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯಬೇಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















