ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಇದೀಗ ಹೊಸ ಮಾರ್ಗಸೂಚಿ ಜಾರಿಯಾಗುತ್ತಿದೆ. ಯೋಜನೆಯ ಹಣ ಅನರ್ಹರ ಕೈಗೆ ಸೇರುವುದನ್ನು ತಡೆಯಲು ಸರ್ಕಾರ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲನೆ ನಡೆಸಲು ಮುಂದಾಗಿದೆ. ಇದರ ಭಾಗವಾಗಿ, ಇನ್ನು ಮುಂದೆ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ.
ಸರ್ಕಾರದ ಸೂಚನೆಯಂತೆ, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುವ ₹2,000 ನೆರವು ಹಣವನ್ನು ಮುಂದುವರಿಸಿಕೊಂಡು ಪಡೆಯಲು ಫಲಾನುಭವಿಗಳು ಒಂದು ತಿಂಗಳೊಳಗೆ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಿಗದಿತ ಅವಧಿಯಲ್ಲಿ ಈ ಪ್ರಕ್ರಿಯೆ ಮುಗಿಸದಿದ್ದರೆ ಹಣ ಜಮೆಯಾಗುವುದು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.ರಾಜ್ಯದಲ್ಲಿ ಪ್ರಸ್ತುತ ಸುಮಾರು 1.30 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಗ್ಯಾರಂಟಿ ಅನುಷ್ಠಾನ ಸಮಿತಿ ನಡೆಸಿದ ಪರಿಶೀಲನೆಯಲ್ಲಿ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿದ್ದ ಸುಮಾರು 1.48 ಲಕ್ಷ ಮಹಿಳೆಯರು ಮೃತಪಟ್ಟಿದ್ದರೂ, ಕಳೆದ ಐದು ತಿಂಗಳಿನಿಂದ ಅವರ ಹೆಸರಿನ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿರುವುದು ಪತ್ತೆಯಾಗಿದೆ. ಈ ಮೂಲಕ ಸುಮಾರು ₹128 ಕೋಟಿ ಸಾರ್ವಜನಿಕ ಹಣ ದುರುಪಯೋಗವಾಗಿರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಲವೆಡೆ ಮೃತಪಟ್ಟವರ ಹೆಸರಿನಲ್ಲಿ ಇತರರು ಹಣ ಪಡೆಯುತ್ತಿರುವುದು ಹಾಗೂ ತಪ್ಪಾದ ಮೊಬೈಲ್ ಸಂಖ್ಯೆಗಳು ದಾಖಲಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ.ಹಲವು ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದ ವೇಳೆ, ಒಬ್ಬರ ಹೆಸರಿಗೆ ಮತ್ತೊಬ್ಬರ ಮೊಬೈಲ್ ಸಂಖ್ಯೆ ಜೋಡಣೆಯಾಗಿರುವ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಫಲಾನುಭವಿಗಳ ಮಾಹಿತಿಯ ಮರುಪರಿಶೀಲನೆ (Recheck) ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗೃಹಲಕ್ಷ್ಮಿ ಹಣ ಮುಂದುವರಿಯಲು ಏನು ಮಾಡಬೇಕು?
1. ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ
ಹೆಬ್ಬೆರಳಿನ ಗುರುತು (Fingerprint), ಕಣ್ಣಿನ ಐರಿಸ್ (Iris) ಅಥವಾ ಫೇಸ್ ಸ್ಕ್ಯಾನ್ (Face Scan) ಮೂಲಕ ಬಯೋಮೆಟ್ರಿಕ್ ಪರಿಶೀಲನೆ ಮಾಡಿಸಬೇಕು.
2. ಬಯೋಮೆಟ್ರಿಕ್ ಎಲ್ಲಿ ಮಾಡಿಸಬಹುದು?
ಬೆಂಗಳೂರು ಒನ್ ಕೇಂದ್ರಗಳು
ಗ್ರಾಮ ಒನ್ ಸೇವಾ ಕೇಂದ್ರಗಳು
ಬಾಪೂಜಿ ಸೇವಾ ಕೇಂದ್ರಗಳು
ಈ ಕೇಂದ್ರಗಳಿಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
3. ಅಗತ್ಯ ದಾಖಲೆಗಳು
ಬಯೋಮೆಟ್ರಿಕ್ ವೇಳೆ ಈ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು:
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಯೋಜನೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
4. ಬ್ಯಾಂಕ್ ಖಾತೆ ವಿವರ ಪರಿಶೀಲನೆ
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮತ್ತು e-KYC ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು.
5. ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ವಿಶೇಷ ಸೂಚನೆ
ಎಸ್ ಸಿ ಹಾಗೂ ಎಸ್ಟಿ ಸಮುದಾಯಕ್ಕೆ ಸೇರಿದ ಫಲಾನುಭವಿಗಳು ಆರ್.ಡಿ (RD) ಸಂಖ್ಯೆಯನ್ನು ನೀಡುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















