Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದಲ್ಲಿ ಆಡಳಿತಾತ್ಮಕ ದಕ್ಷತೆ ಹೆಚ್ಚಿಸಲು ಹೊಸದಾಗಿ ಪ್ರಜಾಸೇವಾ ಇಲಾಖೆ ಸ್ಥಾಪನೆ : ಸರ್ಕಾರ ಅಧಿಕೃತ ಆದೇಶ

---Advertisement---

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡಲು ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ರಾಜ್ಯದಲ್ಲಿ ಹೊಸದಾಗಿ ಪ್ರಜಾಸೇವಾ ಇಲಾಖೆ ಯನ್ನು ಸ್ಥಾಪಿಸಿ ಅಧಿಕೃತ ಆದೇಶ ಹೊರಡಿಸಿದೆ.

ಸಾರ್ವಜನಿಕ ಕುಂದುಕೊರತೆಗಳ ಸ್ವೀಕಾರ, ಮೇಲ್ವಿಚಾರಣೆ ಮತ್ತು ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ಒಂದು ಸಂಯೋಜಿತ ಮಾದರಿಯಲ್ಲಿ ತರುವುದು ಈ ಹೊಸ ಇಲಾಖೆಯ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ‘ಜನಸ್ಪಂದನ’ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ನಾಗರಿಕರ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯೊಳಗೆ ಪರಿಹರಿಸಲು ಸರ್ಕಾರ ಮುಂದಾಗಿದೆ. ಅಷ್ಟೇ ಅಲ್ಲದೆ, ಕುಂದುಕೊರತೆ ನಿವಾರಣೆಯ ಪರಿಣಾಮಕಾರಿತ್ವವನ್ನು ನಾಗರಿಕರ ಪ್ರತಿಕ್ರಿಯೆ (ಫೀಡ್ಬ್ಯಾಕ್) ಮತ್ತು ತೃಪ್ತಿಯ ಮಾನದಂಡಗಳ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.

ಹೊಸ ಇಲಾಖೆಯನ್ನು ರಚಿಸಲು ಪ್ರಸ್ತುತ ಇರುವ ಮೂರು ಪ್ರಮುಖ ವಿಭಾಗಗಳನ್ನು ಒಟ್ಟಿಗೆ ಸೇರಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಆಡಳಿತ ಸುಧಾರಣೆ) ಹುದ್ದೆಗಳು, ಸಿಆರ್ಯು ಇಲಾಖೆಯ ಇ-ಆಡಳಿತ ಅಡಿಯಲ್ಲಿದ್ದ ದೂರುಗಳು ಮತ್ತು ಕುಂದುಕೊರತೆಗಳ ವಿಭಾಗದ ‘ಎ’ ಮತ್ತು ‘ಬಿ’ ಶಾಖೆಗಳು ಹಾಗೂ ಸಕಾಲ ಮಿಷನ್ ವಿಭಾಗವನ್ನು ಈ ಹೊಸ “ಪ್ರಜಾಸೇವಾ ಇಲಾಖೆ” ಯೊಂದಿಗೆ ವಿಲೀನಗೊಳಿಸಲಾಗಿದೆ. ಸರ್ಕಾರದ ಕಾರ್ಯವಿಧಾನಗಳಲ್ಲಿನ ಅನಗತ್ಯ ವಿಳಂಬವನ್ನು ತಪ್ಪಿಸಲು ಹಾಲಿ ಇರುವ ಪ್ರಕ್ರಿಯೆಗಳನ್ನು ಸರಳೀಕರಿಸಿ ಮರುವಿನ್ಯಾಸಗೊಳಿಸಲಾಗುತ್ತಿದೆ.

ಈ ಹೊಸ ಇಲಾಖೆಯ ಸುಗಮ ಕಾರ್ಯಾಚರಣೆಗಾಗಿ ಒಟ್ಟು 73 ಕಾಯಂ ಹುದ್ದೆಗಳನ್ನು ಮರುಹೊಂದಾಣಿಕೆ ಮೂಲಕ ಸೃಜಿಸಲಾಗಿದೆ. ಇದರಲ್ಲಿ ಸರ್ಕಾರದ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರ 1 ಹುದ್ದೆ, ಅಪರ ಮಿಷನ್ ನಿರ್ದೇಶಕರ 2 ಹುದ್ದೆಗಳು, ಸರ್ಕಾರದ ಉಪ ಕಾರ್ಯದರ್ಶಿಯ 1 ಹುದ್ದೆ, ಆಡಳಿತಾಧಿಕಾರಿಯ 1 ಹುದ್ದೆ ಸೇರಿದಂತೆ ವಿವಿಧ ಶ್ರೇಣಿಯ ಅಧಿಕಾರಿ ಹಾಗೂ ಸಿಬ್ಬಂದಿ ಹುದ್ದೆಗಳು ಸೇರಿವೆ. ಇದರೊಂದಿಗೆ ಒಟ್ಟು 48 ಹುದ್ದೆಗಳನ್ನು ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಇದರಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಮಾಹಿತಿ ತಂತ್ರಜ್ಞಾನ ಹಾಗೂ ನಿರ್ವಹಣಾ ಸಮಾಲೋಚಕರು ಮತ್ತು ಸಕಾಲ ಮಿಷನ್ನ ಜಿಲ್ಲಾ ಸಮಾಲೋಚಕರ ಹುದ್ದೆಗಳು ಸೇರಿವೆ. ಜೂನ್ 24, 2026 ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಗಾಯತ್ರಿ ಜಿ.ಎನ್ ಅವರ ಹೆಸರಿನಲ್ಲಿ ಈ ಅಧಿಕೃತ ಆದೇಶ ಹೊರಡಿಸಲಾಗಿದೆ.

Join WhatsApp

Join Now

Join Telegram

Join Now