ಸುದ್ದಿಒನ್, ಚಿತ್ರದುರ್ಗ : ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭನವ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಒದಗಿಸಿಕೊಡುವುದಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣ ಸ್ವಾಮಿ ಭರವಸೆ ನೀಡಿದ್ದಾರೆ.
ತಳಕು ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಯವರ ಮನವಿ ಸ್ವೀಕರಿಸಿ ಮಾತನಾಡಿದರು.
ನೆರೆಯ ಜಿಲ್ಲೆಗಳಲ್ಲಿ ಕನ್ನಡ ಭವನಗಳಿವೆ. ಆದರೆ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನವಿಲ್ಲ. ಈ ಬಗ್ಗೆ ಮುಂದಿನ ಜಿಲ್ಲಾ ಸಭೆಗಳಲ್ಲಿ ಚರ್ಚೆ ನಡೆಸಲಾಗುವುದು. ಈ ಬಗ್ಗೆ ಜಿಲ್ಲೆಯ ಶಾಸಕರು ಮತ್ತು ಸಚಿವರ ಜತೆಗೆ ಚರ್ಚೆ ನಡೆಸಲಾಗುವುದು. ನಂತರ ಇದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ಕನ್ನಡ ಭವನಕ್ಕೆ ಅಗತ್ಯವಾದ ವಿಶಾಲ ನಿವೇಶನವಿದೆ. ನಗರದ ಪಿಳ್ಳೇಕೇರನಹಳ್ಳಿ ಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ನಿವೇಶನ ಕಸಾಪ ಹೆಸರಿನಲ್ಲಿದೆ. ಜಿಲ್ಲಾಧಿಕಾರಿಗಳು ಹಾಗೂ ಕಸಾಪ ಜಿಲ್ಲಾಧ್ಯಕ್ಷರ ಜಂಟಿ ಖಾತೆಯಲ್ಲಿ 20 ಲಕ್ಷ ರೂಗಳ ಹಣವಿದೆ. ಸುಮಾರು 2 ಕೋಟಿ ವೆಚ್ಚದ ಕನ್ನಡ ಭವನದ ಉದ್ದೇಶವನ್ನು ಕಸಾಪ ಹೊಂದಿದೆ. ಸರಕಾರದ ನಿಧಿ, ಸಂಸದರು, ಶಾಸಕರು ತಮ್ಮ ಅನುದಾನವನ್ನು ಉದಾರವಾಗಿ ಒದಗಿಸಬೇಕು ಎಂದರು.
ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಹಾಪ್ ಕಾಮ್ಸ್ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ, ಮುಖಂಡ ಶಿವಣ್ಣ ಮತ್ತಿತರರಿದ್ದರು.