ಚಿತ್ರದುರ್ಗ. ಸೆ.18: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಇದೇ ಸೆಪ್ಟೆಂಬರ್ 19ರಂದು ಮಧ್ಯಾಹ್ನ 2 ರಿಂದ ಸಂಜೆ 5.30 ರವರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ‘3ನೇ ರಾಷ್ಟ್ರೀಯ ಲೋಕ್ ಅದಾಲತ್’ ಕಾರ್ಯಕ್ರಮ ಆಯೋಜಿಸಲಾಗಿದೆ.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ತಕ್ಷಣವೇ ಬಗೆಹರಿಸಿಕೊಳ್ಳಲು ಸಾರ್ವಜನಿಕರಿಗೆ ಈ ಮೂಲಕ ಅವಕಾಶ ಕಲ್ಪಿಸಲಾಗಿದೆ.
ಈ ಲೋಕ್ ಅದಾಲತ್ನಲ್ಲಿ ಸಿವಿಲ್ ವ್ಯಾಜ್ಯಗಳು, ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್ ಅಮಾನ್ಯ (ಬೌನ್ಸ್) ಪ್ರಕರಣಗಳು, ಕಾರ್ಮಿಕ ವಿವಾದಗಳು, ಭೂಸ್ವಾಧೀನ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಬ್ಯಾಂಕ್ ವಸೂಲಾತಿ, ಕಂದಾಯ, ಮೋಟಾರ್ ವಾಹನ ಅಪಘಾತ ಹಾಗೂ ವೇತನ ಮತ್ತು ಪಿಂಚಣಿ ಸಂಬಂಧಿತ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.
ರಾಜಿಯಾಗುವ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುತ್ತದೆ. ಅಲ್ಲದೆ, ಇಲ್ಲಿನ ತೀರ್ಪಿನ ವಿರುದ್ಧ ಯಾವುದೇ ಮೇಲ್ಮನವಿಗೆ ಅವಕಾಶವಿಲ್ಲದೆ ಪ್ರಕರಣಗಳು ಸಂಪೂರ್ಣವಾಗಿ ಬಗೆಹರಿಯಲಿವೆ. ಸಾರ್ವಜನಿಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಸಮೀರ್ ಪಿ.ನಂದ್ಯಾಲ್ ತಿಳಿಸಿದ್ದಾರೆ.
============









