ಮಂಡ್ಯ: ವ್ಯವಸಾಯ ಎಂದರೆ ಮೊದಲೆ ಮೂಗು ಮುರಿಯುವ ಜನ ಹೆಚ್ಚು. ಇದರ ನಡುವೆ ಹಾಗೋ ಹೀಗೋ ಕಷ್ಟಪಟ್ಟು ವ್ಯವಸಾಯವನ್ನು ಮಾಡಿದವರಿಗೆ ಪ್ರಕೃತಿಯ ಮುನಿಸಿನಿಂದಾಗಿ ಎಲ್ಲವೂ ನೆಲಸಮವಾಗಿ ಹೋದರೆ ಪರಿಸ್ಥಿತಿ ಹೇಗಿರಬೇಡ. ಅಂತದ್ದೊಂದು ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಕೆ ಆರ್ ಪೇಟೆಯ ಅಂಚನಹಳ್ಳಿಯ ಹೀರಾಜಮ್ಮ ಎನ್ನುವವರು ಕಳೆದ 15 ವರ್ಷಗಳ ಹಿಂದೆ 100ಕ್ಕೂ ಹೆಚ್ಚು ತೆಂಗಿನ ಮರಗಳನ್ನು ನೆಟ್ಟು, ಇಲ್ಲಿಯವರೆಗೂ ಪೋಷಿಸುತ್ತಾ ಬಂದಿದ್ದರು. ಮರ ನೋಡಿದರೆ ಆನಂದವಾಗುವಷ್ಟು ಫಸಲು ಬಂದಿತ್ತು. ಈ ಹದಿನೈದು ವರ್ಷ ಪಟ್ಟ ಕಷ್ಟಕ್ಕೆ ಸಾರ್ಥಕತೆ ಸಿಗುವ ಮಟ್ಟಕ್ಕೆ ಮರಗಳ ಫಲ ಕಾಣುತ್ತಿತ್ತು. ಆದರೆ ದುರಾದೃಷ್ಟವಶಾತ್ ಅಜ್ಜಿಯ ಅಷ್ಟು ಕನಸನ್ನು ಪ್ರಕೃತಿಯ ಕೋಪ ಭಗ್ನ ಮಾಡಿಟ್ಟಿದೆ.
ಕಳೆದ 15 ದಿನದಿಂದ ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ನಿನ್ನೆ ರಾತ್ರಿಯೂ ಮಳೆ ಸುರಿದಿದ್ದು, ಬಿರುಗಾಳಿಯೂ ಜೋರಾಗಿ ಬೀಸಿದೆ. ಇದರ ಪರಿಣಾಮ ಅಜ್ಜಿಯ 90 ತೆಂಗಿನ ಮರಗಳು ನೆಲಕ್ಕೆ ಉರುಳಿವೆ. ತೆಂಗು, ಅಡಿಕೆ, ಬಾಳೆ ಎಲ್ಲವೂ ನೆಲದ ಪಾಲಾಗಿವೆ. ಇದನ್ನು ಕಂಡು ಅಜ್ಜಿಗೆ ಆಘಾತವಾಗಿದೆ. ಊರವರೆಲ್ಲಾ ಸಮಾಧಾನ ಮಾಡಿದರೂ ಅಜ್ಜಿ ಸಮಾಧಾನವಾಗದೆ, ಊಟ ತಿಂಡಿ ಬಿಟ್ಟು ಕೂತಿದ್ದಾರೆ. ಘಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಅಜ್ಜಿಗೆ ಸಮಾಧಾನದ ಮಾತಗಳನ್ನು ಹೇಳಿ, ಪರಿಹಾರ ನೀಡುವ ಭರವಸೆ ನೀಡಿದ್ದಾರೆ.